Tuesday, March 27, 2012

ಕಾವೇರಿ ನದಿ ನೀರು ವಿಚಾರವಾಗಿ ತಮಿಳುನಾಡು ಸರ್ಕಾರ ತೆಗೆದ ಕ್ಯಾತೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಖಂಡನಾ ಸಭೆ

ಕಾವೇರಿ ನದಿನೀರಿನ ವಿಚಾರವಾಗಿ ತಮಿಳುನಾಡು ಸರ್ಕಾರ ತೆಗೆದಿರುವ ಕ್ಯಾತೆಯನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ೨೭-೦೩-೨೦೧೨ರಂದು ಬೆಂಗಳೂರಿನಲ್ಲಿ ಖಂಡನಾ ಸಭೆಯನ್ನು ನಡೆಸಿದೆವು. ಸಭೆಯಲ್ಲಿ ಮಾಜಿ ನೀರಾವರಿ ಸಚಿವ ಎಚ್.ಕೆ.ಪಾಟೀಲ್, ವೈ.ಎಸ್.ವಿ. ದತ್ತ, ಜಯಮೃತ್ಯುಂಜಯ ಸ್ವಾಮೀಜಿ, ಡಾ. ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿ, ಪಟಾ ಪಟ್ ನಾಗರಾಜ್, ನಟಿ ಪ್ರಿಯಾ ಹಾಸನ್ ಮತ್ತಿತರ ಗಣ್ಯರ ಭಾಗವಹಿಸಿ, ತಮಿಳುನಾಡಿನ ಜಯಲಲಿತಾ ನಿಲುವನ್ನು ಖಂಡಿಸಿದರು.

ಮಾಜಿ ನೀರಾವರಿ ಸಚಿವಾರಾಗಿದ್ದ ಎಚ್.ಕೆ.ಪಾಟೀಲ ಅವರು ಮಾತನಾಡುತ್ತಾ ೨೦೦೭ ರ ಕಾವೇರಿ ನ್ಯಾಯಮಂಡಳಿ ಐತೀರ್ಪಿನಿಂದ ಈಗಾಗಲೆ ರಾಜ್ಯಕ್ಕೆ ಅನ್ಯಾಯವಾಗಿದ್ದು, ತೀರ್ಪಿಗೆ ಗೌರವ ಸಲ್ಲಿಸುವ ಸಲುವಾಗಿ ೧೯೨ ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಈಗಾಗಲೆ ಬಿಡಲಾಗಿದೆ. ಜತೆಗೆ ೨೦೦೭-೦೮ ರಿಂದ ೨೦೧೧-೧೨ ರ ವರೆಗೆ ಕ್ರಮವಾಗಿ ೩೫೩.೬೪, ೨೦೯.೪೨, ೨೧೯.೪೯, ಮತ್ತು ೨೨೬.೨೭ ಟಿ.ಎಂ.ಸಿ. ನೀರನ್ನು ಬಿಡಲಾಗಿದೆ. ಇದರಿಂದ ಕನ್ನಡ ಜನತೆಗೆ ನೋವಾಗಿದ್ದರು, ಅನ್ಯಾಯವಾಗಿದ್ದರೂ ಶಾಂತಿಯಿಂದ ಇದ್ದಾರೆ. ಆದರೆ, ರಾಜಕೀಯ ದುರುದ್ದೇಶದಿಂದ ತಮಿಳುನಾಡು ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಈಗ ಮತ್ತೊಂದು ಹೊಸ ಕ್ಯಾತೆ ತೆಗೆದಿದೆ. ಈ ನಿಲುವನ್ನು ಕನ್ನಡಿಗರೆಲ್ಲ ಒಕ್ಕೊರಲಿನಿಂದ ವಿರೋಧಿಸಿ, ಅಗತ್ಯಬಿದ್ದರೆ ಯಾವ ಹೋರಾಟಕ್ಕೂ ಸಿದ್ದರಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಟಿ.ಏ. ನಾರಾಯಣಗೌಡರು ಮಾತನಾಡುತ್ತ ಕಾವೇರಿ ವಿಷಯದಲ್ಲಿ ರಾಜಕೀಯ ಪ್ರೇರಿತ ದಬ್ಬಾಳಿಕೆ ನಡೆಸುತ್ತಿರುವ ತಮಿಳುನಾಡು ರಾಜ್ಯದ ಜನರ ಸಹನೆ ಪರೀಕ್ಷಿಸುತ್ತಿದೆ. ಅದರ ನಿಲುವಿನ ವಿರುದ್ಧ ವೇದಿಕೆ ಸುಪ್ರೀಂ ಕೋರ್ಟ್ ಗೆ ಹೋಗಲೂ ಸಿದ್ಧ. ಅಗತ್ಯಬಿದ್ದಲ್ಲಿ ಈ ಹಿಂದೆ ಮಾಡಿದಂತೆ ರಾಜ್ಯದ ಜತೆಗಿರುವ ತಮಿಳುನಾಡಿನ ಎಲ್ಲ ಸಂಪರ್ಕ ಕಡಿಯಲೂ ಸಿದ್ಧ ಎಂದು ಎಚ್ಚರಿಸಿದರು.

ಈ ಖಂಡನಾ ಸಭೆಯ ವರದಿಗಳನ್ನು ಇಲ್ಲಿ ನೋಡಿ