Monday, March 26, 2012

ಕಾವೇರಿ ನದಿನೀರಿನ ಕರ್ನಾಟಕದ ನ್ಯಾಯಯುತ ಪಾಲಿಗಾಗಿ ಕರವೇಯ ನಿರಂತರ ಹೋರಾಟ

ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಹರಿಯುವ ಅನೇಕ ನದಿಗಳ ನೀರು ಹಂಚಿಕೆ ಕುರಿತ ವಿವಾದಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಪ್ರಮುಖ ಹೋರಾಟಗಳಲ್ಲೊಂದಾದ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರುತು ನಾವು ನಡೆಸಿದ ಹೋರಾಟಗಳ ವಿವರ ಇಂತಿದೆ:
ಕಾವೇರಿ ನೀರು ಹಂಚಿಕೆ ಕುರಿತು ನಾವು ನಡೆಸಿದ ನಿರಂತರ ಚಳವಳಿ
ಹಿಂದೆ ೨೦೦೩ರಲ್ಲಿ ರಾಜ್ಯದ ಎಸ್.ಎಂ.ಕೃಷ್ಣಾ ಮುಂದಾಳ್ತನದ ಕಾಂಗ್ರೆಸ್ ಸರ್ಕಾರ ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ವರದಿಗೆ ಮಣೆಹಾಕಿ, ನಮ್ಮ ನಾಡಿನ ಅಣೆಕಟ್ಟೆಗಳಲ್ಲಿ ನೀರಿನ ತೀವ್ರವಾದ ಕೊರತೆಯಿದ್ದಾಗಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲು ಮುಂದಾಯ್ತು. ಆಗ ಕಾವೇರಿ ಕಣಿವೆಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾದ ಹೋರಾಟಕ್ಕೆ ಮುಂದಾಯ್ತು. ರಾಜ್ಯಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸಿ ತೀವ್ರವಾದ ದಬ್ಬಾಳಿಕೆ ನಡೆಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಬಂದಿದ್ದ ಮುಖ್ಯಮಂತ್ರಿಗಳ ವಿರುದ್ಧವಾಗಿ ಪೊಲೀಸರ ಅಭೇಧ್ಯ ರಕ್ಷಣಾ ಕೋಟೆಯನ್ನು ಮುರಿದು ಕಪ್ಪುಬಾವುಟ ತೋರಿಸಿ ಪ್ರದರ್ಶನ ನಡೆಸಲಾಯ್ತು.
ಫೆಬ್ರವರಿ ೫, ೨೦೦೭ ಮತ್ತೊಮ್ಮೆ ಕನ್ನಡಿಗರ ಎದೆಯ ಮೇಲೆ ನಾಡಿನ ಜನತೆಯ ಮರಣ ಶಾಸನವನ್ನು ಕಾವೇರಿ ನ್ಯಾಯ ಮಂಡಲಿ ಬರೆಯಲು ಅಡಿಯಿಟ್ಟ ಕರಾಳ ದಿನ. ಯಾವ ವೈಜ್ಞಾನಿಕ ತಳಹದಿಯೂ ಇಲ್ಲದ, ನದಿ ಹಂಚಿಕೆಯ ರಾಷ್ಟ್ರೀಯ ನೀತಿಯೇ ಇರದಿದ್ದರೂ ಕನ್ನಡ ನಾಡಿಗೆ ಹಸಿ ಹಸಿ ಅನ್ಯಾಯ ಮಾಡುವಂತಿದ್ದ ತೀರ್ಪು ಮಧ್ಯಾಹ್ನ ೨.೧೫ಕ್ಕೆ ದೆಹಲಿಯಲ್ಲಿ ಹೊರ ಬಿತ್ತು. ಕೇವಲ ಹದಿನೈದು ನಿಮಿಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ, ನಗರ ಪಟ್ಟಣಗಳ ಬೀದಿಬೀದಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಅನ್ಯಾಯದ ತೀರ್ಪಿನ ವಿರುದ್ಧ ಪ್ರತಿಭಟಿಸಲಾರಂಭಿಸಿದರು. ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಸಾಗಿದ ಚಳುವಳಿ ಕೇಂದ್ರಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ರಾಜ್ಯದಾದ್ಯಂತ ರೈಲು ತಡೆ, ಕರ್ನಾಟಕ ಬಂದ್ ನಂತಹ ಉಗ್ರ ಪ್ರತಿಭಟನೆಗಳಾಗಿ ತಿರುಗಿತು. ಕರ್ನಾಟಕ ಬಂದ್ ಆಚರಣೆ ಸಂದರ್ಭದಲ್ಲಂತೂ ನಮ್ಮ ಕಾರ್ಯಕರ್ತರ ಧೈರ್ಯ ಸಾಹಸಗಳು ಅಸೀಮವಾಗಿದ್ದವು. ನಾಡಿನ ಚಳವಳಿಯ ಇತಿಹಾಸದಲ್ಲೇ ಮೊದಲಬಾರಿ ವಿಮಾನಗಳ ಸಂಚಾರಗಳನ್ನು ತಡೆಯಲಾಯಿತು. ಈ ಸಮಯದಲ್ಲಿ ಬಂದೂಕು ಹಿಡಿದು ಬಂದ ಕೇಂದ್ರದ ರಕ್ಷಣಾ ಪಡೆಗಳನ್ನು ಎದುರಿಸಿ ತಮ್ಮ ಜೀವ ಒತ್ತೆಯಿಟ್ಟು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿಮಾನ ಹಾರಾಟವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ತಡೆದದ್ದು ಮುಂತಾದ ನಾನಾ ಹಂತದ ಪ್ರತಿಭಟನೆಗೆ ಕಾರಣವಾಯ್ತು. ಕಾವೇರಿ ಐತೀರ್ಪಿನ ನಂತರ ತಲಕಾವೇರಿಯಿಂದ ಬೆಂಗಳೂರಿನ ತನಕ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮಾರ್ಗವಾಗಿ ಬೆಂಗಳೂರಿನವರೆಗೆ ನಡೆಸಿದ ಬೃಹತ್ ಜಾಗೃತಿ ಜಾಥಾ ಜನರಲ್ಲಿ ಕೇಂದ್ರ ಸರ್ಕಾರದ ಈ ತೀರ್ಪಿನ ವಿರುದ್ಧ ಜನಮತ ಮೂಡಿಸಲು ನೆರವಾಯಿತು. ನವದೆಹಲಿಯಲ್ಲಿ ರಾಜ್ಯದ ೨೫,೦೦೦ಕ್ಕೂ ಹೆಚ್ಚಿನ ಜನರ ಅತಿ ದೊಡ್ಡ ಜಾಥಾವನ್ನು ನಡೆಸಲಾಯಿತು. ದೆಹಲಿಯ ಇತಿಹಾಸದಲ್ಲೇ ಇಂತಹ ದೊಡ್ದ ಪ್ರಮಾಣದ ಕನ್ನಡಿಗರ ಪ್ರತಿಭಟನೆ ನಡೆದಿರಲಿಲ್ಲ. ಈ ಎಲ್ಲ ಹೋರಾಟಗಳ ಫಲವಾಗಿಯೇ ಕರ್ನಾಟಕ ರಾಜ್ಯ ಸರ್ಕಾರದ ಅರ್ಜಿಯನ್ನು ಅಂದು ಸರ್ವೋಚ್ಛ ನ್ಯಾಯಾಲಯ ಸ್ವೀಕರಿಸಿತು. ಕೇಂದ್ರಸರ್ಕಾರ ಕನ್ನಡಿಗರ ಹಿತಕ್ಕೆ ಮಾರಕವಾದ ಈ ಐತೀರ್ಪನ್ನು ಇದುವರೆವಿಗೂ ತನ್ನ ಗೆಜೆಟಿಯರ್ನಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ.
ಆದರೆ, ಈಗ ಮತ್ತೊಮ್ಮೆ ತಮಿಳುನಾಡು ಸರ್ಕಾರ ಮತ್ತೊಮ್ಮೆ ಈ ವಿಚಾರದಲ್ಲಿ ತನ್ನ ಕ್ಯಾತೆ ಆರಂಭಿಸಿದ್ದು, ಕನ್ನಡಿಗರನ್ನು ಕೆಣಕುವಂತ ಕೆಲಸಕ್ಕೆ ಮುಂದಾಗಿದೆ. ಮತ್ತೊಮ್ಮೆ ನಾವು ನೀವು ಕಾವೇರಿ ನದಿನೀರಿಗಾಗಿ ಹೋರಾಡುವ ಸಂಭವ ಬಂದಂತಿದೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: