Showing posts with label ಚುನಾವಣೆ / Election. Show all posts
Showing posts with label ಚುನಾವಣೆ / Election. Show all posts

Sunday, March 28, 2010

ಟಿ.ಏ. ನಾರಾಯಣ ಗೌಡರು ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನ

ಕರ್ನಾಟಕ ರಕ್ಷಣಾ ವೇದಿಕೆ ಸೋತರೆ ಅದು ಕನ್ನಡದ ಸೋಲು ಎಂದು ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಡರು.

ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಟಿ.ಏ. ನಾರಾಯಣ ಗೌಡರ ಸಂದರ್ಶನ

ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಟಿ.ಏ. ನಾರಾಯಣ ಗೌಡರ ಸಂದರ್ಶನ

Monday, March 22, 2010

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಣಾಳಿಕೆ

ಕನ್ನಡ-ಕನ್ನಡಿಗ-ಕರ್ನಾಟಕಗಳೇ ಕೇಂದ್ರವಾಗಿರುವ ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ೨೦೧೦ನೇ ವರ್ಷದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಪಾಲಿಕೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷವಾಕ್ಯದ ಸಾಕಾರಕ್ಕೆ ಈ ಮೂಲಕ ಮುಂದಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಮತದಾರರಿಗೆ ಈ ಚುನಾವಣೆಯಲ್ಲಿ ಕರವೇ ಬೆಂಬಲಿತ ಅಭ್ಯರ್ಥಿಗಳಿಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಈ ಮೂಲಕ ಕೋರುತ್ತೇವೆ.

ಕರ್ನಾಟಕವನ್ನು ಕಳೆದ ಅರವತ್ತು ವರ್ಷಗಳಿಂದ ಆಳಿದ್ದು ರಾಷ್ಟ್ರೀಯ ಪಕ್ಷಗಳು. ಹರಿದು ಹಂಚಿಹೋಗಿದ್ದ ನಮ್ಮ ನಾಡು ಒಂದಾದಾಗ ಇದ್ದ ಎಲ್ಲಾ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ ಎಂಬುದು ಇವುಗಳ ಕಾರ್ಯವೈಖರಿಗೆ ಸಾಕ್ಷಿ. ಗಡಿ ಸಮಸ್ಯೆ, ನದಿ ನೀರು ಹಂಚಿಕೆ ಸಮಸ್ಯೆಯಂತಹ ತಗಾದೆಗಳು ಇಂದಿಗೂ ಜೀವಂತ. ಕೇಂದ್ರಸರ್ಕಾರಕ್ಕೆ ಹರಿದು ಹೋಗುವ ತೆರಿಗೆ ಹಣದ ಪ್ರಮಾಣ ಅಪಾರವಾಗಿದ್ದರೂ... ನಮ್ಮ ನಾಡಿಗೆ ಬಂದ ಯೋಜನೆಗಳು, ರಸ್ತೆ, ರೈಲು ಮಾರ್ಗಗಳು, ನೆರೆ-ಬರ ಪರಿಹಾರಗಳು ಎಲ್ಲವೂ ನಗಣ್ಯ. ಕೃಷ್ಣಾ ಕಾವೇರಿ ಮಹದಾಯಿ ನದಿನೀರು ಹಂಚಿಕೆಯಿರಲಿ, ಬೆಳಗಾವಿ, ಕಾಸರಗೋಡು, ಹೊಗೆನಕಲ್ ಗಡಿ ತಕರಾರುಗಳಿರಲಿ, ರೈಲ್ವೇ ಯೋಜನೆಗಳಿರಲಿ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಯಾಗಲೀ ಯಾವುದೂ ಕೂಡಾ ಸರಳವಾಗಿ ದಕ್ಕಿಸಿಕೊಡಲಾಗದ ಕೈಲಾಗದತನ ಇವುಗಳದ್ದು. ನಾಡಿನ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಿದ ಒಂದು ನಿದರ್ಶನವೂ ನಮ್ಮ ಮುಂದಿಲ್ಲ. ಕನ್ನಡನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗಳಿಸಿಕೊಡುವಾಗಲಾಗಲೀ, ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ವಿರುದ್ಧವಾಗಲೀ ದನಿಯೆತ್ತಿ ಹೋರಾಡಿದ್ದು ಈ ಯಾವ ರಾಜಕೀಯ ಪಕ್ಷಗಳೂ ಅಲ್ಲ, ಬದಲಾಗಿ ನಾಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ. ಈ ನಾಡಿನ ಹಿತ ಕಾಪಾಡುವ, ನಾಡನ್ನು ಏಳಿಗೆಯ ದಾರಿಯತ್ತ ಒಯ್ಯುವ ಬದ್ಧತೆ ಇರುವುದು ಕನ್ನಡ ಕನ್ನಡಿಗ ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷಕ್ಕೆ ಮಾತ್ರವೇ. ಕರ್ನಾಟಕದಲ್ಲಿ ಈ ಕೊರತೆಯನ್ನು ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯು ಮುಂದಾಗಿದೆ. ಹಾಗಾಗಿ ಕರ್ನಾಟಕದ ಏಳಿಗೆ, ಕನ್ನಡದ ಸಾರ್ವಭೌಮತ್ವ ಸ್ಥಾಪನೆಗೆ ಪೂರಕವಾದ ಕಾರ್ಯಸೂಚಿಗಳೇ ನಮ್ಮ ಪ್ರಣಾಳಿಕೆ. ನಿಮ್ಮೆಲ್ಲರ ಬೆಂಬಲದಿಂದ ಈ ಗುರಿ ಈಡೇರಿಕೆಯತ್ತ ನಮ್ಮ ನಡೆ.

ನೆರೆರಾಜ್ಯಗಳೊಂದಿಗಿನ ಗೌರವಯುತ ಸಂಬಂಧ, ಕೇಂದ್ರಸರ್ಕಾರದಿಂದ ನಮ್ಮ ನಾಡಿಗೆ ಸಿಗಬೇಕಾದ ಸಂಪನ್ಮೂಲದಲ್ಲಿನ ಪಾಲು, ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳುವಿಕೆ, ರಾಜ್ಯದ ಎಲ್ಲಾ ಪ್ರದೇಶಗಳ ಏಳಿಗೆಗೆ ಯೋಜನೆಗಳು, ನಗರ ನಗರಗಳ ನಡುವೆ ಸಾರಿಗೆ ಸಂಪರ್ಕ ಜಾಲ, ನದಿ ನೀರು ಪರಿಸರ ಸಂರಕ್ಷಣೆ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಮನಾದ ಉತ್ತೇಜನ, ಸ್ವಾಭಿಮಾನದ ಬದುಕು ನಾಡಿಗರದ್ದಾಗಲು ಶ್ರಮಿಸುವಿಕೆ, ನಾಡಿನ ಒಳ ಆಡಳಿತ ಯಂತ್ರಕ್ಕೆ ಹಿಡಿದಿರುವ ಭಷ್ಟಾಚಾರದ ತುಕ್ಕು ಬಿಡಿಸಿ ಜನಪರ ಆಡಳಿತ ಜಾರಿ - ಇವೇ ಮೊದಲಾದ ಆಶಯಗಳು ನಮ್ಮವು. ಒಟ್ಟಾರೆ ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಮಂತ್ರ. ಈ ಬಾರಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗಳಲ್ಲಿ ಭಾಗವಹಿಸುವ ಮೂಲಕ ಈ ನಾಡು ಕಟ್ಟುವ ಪಯಣದಲ್ಲಿ ರಾಜಕೀಯದ ಮೊದಲ ಹೆಜ್ಜೆ. ನಿಮ್ಮ ಹಾರೈಕೆಗಳೇ ನಮಗೆ ಶ್ರೀರಕ್ಷೆ.

ನಾಗರೀಕ ಸೌಲಭ್ಯಗಳು:

  1. ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ರಸ್ತೆಗಳ ವಿಸ್ತರಣೆ, ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
  2. ಉದ್ಯಾನನಗರಿ ಹೆಸರಿಗೆ ಕಳೆಗಟ್ಟುವಂತೆ ಪ್ರತಿ ಬಡಾವಣೆಯಲ್ಲಿ ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆ.
  3. ಗಿಡ ನೆಡುವ ಕಾರ್ಯಕ್ರಮಗಳಿಗೆ ಉತ್ತೇಜನ. ಉಚಿತ ಸಸಿ ವಿತರಣೆ ಮತ್ತು ನಿರ್ವಹಣೆ.
  4. ಮಕ್ಕಳ ಆಟದ ಮೈದಾನ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ.
  5. ಲಲಿತ ಕಲೆಗಳ ಉತ್ತೇಜನಕ್ಕಾಗಿ ಬಡಾವಣೆ ರಂಗಮಂದಿರಗಳು, ಕಲಾಕೇಂದ್ರಗಳ ರಚನೆ/ ನಿರ್ವಹಣೆ
  6. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಬಡಮಕ್ಕಳಿಗೆ ಕಲಿಕೆಗೆ ಸಹಾಯ.
  7. ಸಣ್ಣಗಲ್ಲಿಗಳಿಗೆ ಕಾಂಕ್ರೀಟ್, ದೊಡ್ಡರಸ್ತೆಗಳಿಗೆ ಡಾಂಬರು, ಸುಭದ್ರವಾದ ಪಾದಚಾರಿ ಮಾರ್ಗಗಳು.
  8. ಆರೋಗ್ಯಕೇಂದ್ರಗಳನ್ನು ಮೇಲ್ದರ್ಜೆ ಏರಿಸಲಾಗುವುದು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚರಿಕಾ ಕೇಂದ್ರಗಳ ಸ್ಥಾಪನೆ.
  9. ಸುಸಜ್ಜಿತ ಆಂಬ್ಯುಲೆನ್ಸ್ ಸೇವೆಯನ್ನು ಪರಿಣಾಮಕಾರಿಗೊಳಿಸುವುದು.
  10. ಬೀದಿದೀಪಗಳ ಸುವ್ಯವಸ್ಥೆ. ಸೌರಶಕ್ತಿ ಚಾಲಿತ ಬೀದಿದೀಪಗಳ ಸ್ಥಾಪನೆಗೆ ಆದ್ಯತೆ.
  11. ಕೇಂದ್ರಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ನಗರ ನವೀಕರಣ ಯೋಜನೆಗಳ ಅಡಿಯಲ್ಲಿ ನಗರದ ಒಳಚರಂಡಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸುವುದು. ಮೋರಿಗಳ/ ರಾಜಾಕಾಲುವೆಗಳ ಅತಿಕ್ರಮಣ ತೆರವು.
  12. ಅಂತರ್ಜಲ ಮಟ್ಟ ಹೆಚ್ಚಿಸಲು ಅಗತ್ಯ ಯೋಜನೆಗಳನ್ನು ರೂಪಿಸುವುದು. ಮಳೆಕೊಯ್ಲು ಯೋಜನೆಯನ್ನು ವಿಸ್ತರಿಸುವುದು. ಬೀದಿಬೀದಿಗಳಲ್ಲಿ ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವುದು.
  13. ಮಾರುಕಟ್ಟೆಗಳು ಮತ್ತು ಕಸಾಯಿಖಾನೆಗಳ ನಿರ್ವಹಣೆಯಲ್ಲಿ ಶುಚಿತ್ವಕ್ಕೆ ಒತ್ತುಕೊಡಲಾಗುವುದು.
  14. ಸಾರ್ವಜನಿಕ ಜಾಗಗಳನ್ನು ಅತಿಕ್ರಮಿಸುವ ಚಾಳಿಗೆ ಕಡಿವಾಣ. ಅತಿಕ್ರಮಿಸಿರುವ ಪುಟ್‌ಪಾತ್, ಪಾರ್ಕು, ಮೈದಾನಗಳನ್ನು ತೆರವು ಮಾಡಿಸಿ ಸಾರ್ವಜನಿಕರ ಅನುಕೂಲಕ್ಕಾಗೇ ಮೀಸಲಾಗಿಡುವುದು.
  15. ಚೊಕ್ಕ ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ. ನಗರದಲ್ಲಿ ಕಸವಿಲೇವಾರಿಯನ್ನು ಆಧುನಿಕರಿಸುವುದು. ಪರಿಸರ ಸ್ನೇಹಿ ಜನಸ್ನೇಹಿ ಕಸ ಸಂಗ್ರಹಣೆ ವ್ಯವಸ್ಥೆಯನ್ನು ಬಲಪಡಿಸುವುದು.
  16. ನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಮೂಲಭೂತಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ವಿದ್ಯಾರ್ಥಿಗಳನ್ನು ಆಕರ್ಶಿಸಲು ಯೋಜನೆ ರೂಪಿಸುವುದು.
  17. ಸಾರ್ವಜನಿಕ ಶೌಚಾಲಯಗಳನ್ನು ಎಲ್ಲಾ ಕಡೆಗೆ ವಿಸ್ತರಿಸಿ, ಸರಿಯಾಗಿ ಚೊಕ್ಕಟವಾಗಿಟ್ಟುಕೊಳ್ಳುವುದಕ್ಕೆ ಬೇಕಾದ ಯೋಜನೆ ರೂಪಿಸುವುದು.
  18. ಬೀದಿನಾಯಿಗಳ, ಉಂಡಾಡಿ ದನಗಳ ಹಾವಳಿ ತಡೆಗೆ ಸಾಕುಪ್ರಾಣಿಗಳ ಸಾಕುವಿಕೆ ಕಾಯ್ದೆಗೆ ಸೂಕ್ತ ತಿದ್ದುಪಡಿ.
  19. ಬೆಂಗಳೂರನ್ನು ಪ್ರವಾಸಿ ತಾಣವನ್ನಾಗಿಸಿ, ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಸ್ಥಳೀಯ ಹಬ್ಬಗಳಾದ ಕರಗ, ಕಳ್ಳೆಕಾಯಿ ಪರಿಶೆ, ಅವರೆ ಮೇಳ, ಲಾಲ್ ಬಾಗ್ ಹೂಮೇಳ ಮೊದಲಾದವುಗಳನ್ನು ಸಾಂಸ್ಕೃತಿಕ ಪ್ರವಾಸೋದ್ಯಮವನ್ನಾಗಿ ರೂಪಿಸಲಾಗುವುದು.

ಪಾರದರ್ಶಕ ಆಡಳಿತ ವ್ಯವಸ್ಥೆ
  1. ಸರಳತೆ, ಪಾರದರ್ಶಕತೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣವಿರುವ ಆಡಳಿತ ವ್ಯವಸ್ಥೆ.
  2. ನಿಮ್ಮ ಜನ ಪ್ರತಿನಿಧಿ ನಿಮಗೆ ಇಪ್ಪತ್ನಾಲ್ಕು ಗಂಟೆಯೂ ಲಭ್ಯ. ತಿಂಗಳಿಗೊಮ್ಮೆ ಜನಸಂಪರ್ಕ ಸಭೆ. ನಗರ ಪಾಲಿಕೆ ಸದಸ್ಯರಿಂದ ಆಗುತ್ತಿರುವ ಸಾಧನೆ ಸಮೀಕ್ಷೆಯ ಮುಕ್ತ ಚರ್ಚೆ.
  3. ನಗರ ಪಾಲಿಕೆ ಕಛೇರಿ ಕೆಲಸಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಆದ್ಯತೆ.
  4. ಮಾಹಿತಿ ತಂತ್ರಜ್ಞಾನವೂ ಸೇರಿದಂತೆ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಪಾರದರ್ಶಕವಾದ, ವಿನಾಕಾರಣ ವಿಳಂಬವಾಗದಂತಹ ಚುರುಕುತನವನ್ನು ಆಡಳಿತ ಯಂತ್ರಕ್ಕೆ ತರಲಾಗುವುದು.
  5. ವಾರ್ಡ್ ಸಮಿತಿಗಳನ್ನು ಪರಿಣಾಮಕಾರಿಯಾಗಿಸಿ, ವಾರ್ಡ್ ಅಭಿವೃದ್ಧಿಗೆ ಸಮಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದು, ಜಾರಿಗೊಳಿಸುವುದು ಮತ್ತು ಪರಿಶೀಲಿಸುವುದು.
ಜನಪರ ಭಾಷಾನೀತಿ:
  1. ಆಡಳಿತ ಭಾಷೆಯಾಗಿ ಕನ್ನಡದ ಸಂಪೂರ್ಣ ಜಾರಿಗಾಗಿ ಶ್ರಮಿಸುತ್ತೇವೆ.
  2. ಕರ್ನಾಟಕ ಸರ್ಕಾರ ಹೊರಡಿಸಿರುವ ನಾಮಫಲಕಗಳ ಕಾಯ್ದೆ ೨೪-ಎ ಯ ಸಂಪೂರ್ಣ ಜಾರಿ.
  3. ನಗರದ ವಿವಿಧ ರಸ್ತೆಗಳಿಗೆ, ಬಡಾವಣೆಗಳಿಗೆ ಹೊಸದಾಗಿ ಹೆಸರಿಡಬೇಕಾದಾಗ ನಾಡಿನ ಸಂಸ್ಕೃತಿ, ಜನ ಮತ್ತು ಜನಪದವನ್ನು ಬಿಂಬಿಸುವ ಹೆಸರಿಡಲು ಬೇಕಾದ ಅಗತ್ಯ ಕಾಯ್ದೆಯನ್ನು/ ನಿಯಮವನ್ನು ರೂಪಿಸಲಾಗುವುದು.
  4. ಹೊರನಾಡಿನಿಂದ ಬಂದಿರುವ ವಲಸಿಗರಿಗೆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಅನುಕೂಲವಾಗುವಂತೆ ಕನ್ನಡ ಕಲಿಸುವ ಕಾರ್ಯಕ್ರಮಗಳಿಗೆ ಒತ್ತು.
  5. ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ವಲಸೆ ಬಂದಿರುವ ಬಡ ಜನತೆಗೆ ಪಡಿತರ, ಮತದಾನ ಗುರುತು ಚೀಟಿಗಳು, ವಸತಿ ಯೋಜನೆಗಳು.
  6. ನಮ್ಮ ನಾಡಿನ ಪರಂಪರೆ ಇತಿಹಾಸಗಳನ್ನು ಪ್ರತಿಬಿಂಬಿಸುವ ಸ್ಮಾರಕ/ ಪ್ರದೇಶಗಳನ್ನು ಕಾಪಾಡಲು ಆದ್ಯತೆ. ಮೂಲ ಹೆಸರು ಸೊಗಡುಗಳನ್ನು ಉಳಿಸಿಕೊಳ್ಳಲು ಶ್ರಮಿಸುವುದು.
  7. “ನಮ್ಮ ಬೆಂಗಳೂರು”: ನಾಡಿನ ಯುವ ಜನರಲ್ಲಿ ನಾಡಿನ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸುವ ವಿನೂತನವೂ ವಿಶಿಷ್ಠವೂ ಆದ ಜಾಗೃತಿ ಅಭಿಯಾನ ಕಾರ್ಯಕ್ರಮ.
  8. ತೆರಿಗೆ ತುಂಬುವ ಅರ್ಜಿ, ನಾನಾ ಸೇವೆಗಳ ಬಿಲ್ಲುಗಳನ್ನು ಕನ್ನಡದಲ್ಲಿ ದೊರೆಯುವಂತೆ ಮಾಡುವುದು.
  9. ಪಾಲಿಕೆ ವ್ಯಾಪ್ತಿಯಲ್ಲಿ ಜನರಿಗೆ ಕನ್ನಡದಲ್ಲಿ ಎಲ್ಲಾ ಸೇವೆ ಒದಗಿಸುವುದನ್ನು ಕಡ್ಡಾಯಗೊಳಿಸುವುದು. ಕನ್ನಡದಲ್ಲಿ ಸೇವೆಯನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆ ರೂಪಿಸಲು ಶ್ರಮಿಸುವುದು.

Saturday, March 13, 2010

ಬಿಬಿಎಂಪಿ ಚುನಾವಣೆ: ನಾರಾಯಣಗೌಡರ ಪತ್ರಿಕಾ ಸಂದರ್ಶನ

ನಾಡು ನುಡಿಯ ವಿಚಾರವಾಗಿ ಕಳೆದ ೧೦ ವರ್ಷಗಳಿಂದ ರಾಜಿರಹಿತ ಹೋರಾಟಗಳನ್ನು ಮಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಈ ಬಾರಿ ಬೆಂಗಳೂರುಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 30-35 ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.

ಕನ್ನಡವನ್ನೇ ಪ್ರಮುಖ ವಿಚಾರವಾಗಿ ಇಟ್ಟುಕೊಂಡು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ಕರವೇಯ ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಸಂದರ್ಶನವನ್ನು ಇಲ್ಲಿ ನೋಡಿ.




Wednesday, March 10, 2010

ಪ್ರಾದೇಶಿಕ ಪಕ್ಷದತ್ತ ಕ.ರ.ವೇ. - ಬಿ.ಬಿ.ಎಂ.ಪಿ ಚುನಾವಣೆಯಿಂದಲೆ ಸ್ಪರ್ಧೆ

ಕರ್ನಾಟಕವನ್ನಾಳುವ ಪಕ್ಷಗಳು ನಾಡು, ನುಡಿ ಮತ್ತು ನಾಡಿಗನ ಹಿತ ಕಾಯುವಲ್ಲಿ ಪೂರ್ತಿಯಗಿ ವಿಫಲವಾಗಿದೆ. ಕರ್ನಾಟಕಕ್ಕ್ರೆ ತನ್ನದಯಾದ ರಾಜಕೀಯ ಪಕ್ಷದ ಅಗತ್ಯ ಎದ್ದು ಕಾಣುತ್ತಿದೆ. ಈ ಸಮಯದಲ್ಲಿ, ಪ್ರಾದೇಶಿಕ ಪಕ್ಷ ಕಟ್ಟುವ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಯುತ್ತಿದ್ದಾರೆ.

ವರದಿಯನ್ನು ಇಲ್ಲಿ ನೋಡಿ.



Thursday, April 2, 2009

ನಾಡೊಡೆಯುವ ಮತಬ್ಯಾಂಕ್ ರಾಜಕೀಯಕ್ಕೆ ನಮ್ಮ ವಿರೋಧ

ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾಗುತ್ತಿವೆ. ಇಂತಹ ಸಮಯದಲ್ಲಿ ಜನರ ಮನಸ್ಸನ್ನು ಗೆಲ್ಲುವ ಅನೇಕಾನೇಕ ತಂತ್ರಗಳನ್ನು ರಾಜಕೀಯ ಪಕ್ಷಗಳು ತೋರುವುದು ಸಹಜ. ಆದರೆ ಜನರನ್ನು ಸೆಳೆಯುವ ಈ ತಂತ್ರಗಾರಿಕೆಯಲ್ಲಿ ನಾಡುನುಡಿಯ ಹಿತವನ್ನೇ ಕಡೆಗಣಿಸುವ ರೀತಿಯಲ್ಲಿ ನಡೆದುಕೊಳ್ಳುವ ರಾಜಕೀಯ ಪಕ್ಷಗಳು, ತಾವು ತಲುಪಿರುವ ನೈತಿಕ ಅಧೋಗತಿಗೆ ಸಾಕ್ಷಿಯಾಗುತ್ತಿವೆ. ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾದ ಭಾರತೀಯ ಜನತಾಪಕ್ಷ ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ತನ್ನ ಬಣ್ಣ ಬಯಲುಮಾಡಿಕೊಂಡಿದೆ. ಈ ಬೆಳವಣಿಗೆಗಳು ನಾಡಿನ ಹಿತದೃಷ್ಟಿಯಿಂದ ಮಾರಕವಾದುದಾಗಿದ್ದು ಇದನ್ನು ರಾಜಕೀಯ ಪಕ್ಷಗಳು ಮನಗಾಣದಿರುವುದು ವಿಷಾದನೀಯವಾಗಿದೆ.

ಬೆಳಗಾವಿ ಮತ್ತು ಮರಾಠಿ : ಬೆಳಗಾವಿಯ ನಗರಪಾಲಿಕೆಯ ಹೊಸ ಕಟ್ಟಡದ ಮೇಲೆ - ಮರಾಠಿಗರ ಗುರುತೆಂದು ಎಂ.ಇ.ಎಸ್ ಬಳಸುತ್ತಿರುವ - ಕೇಸರಿ ಧ್ವಜವನ್ನು ಹಾರಿಸಲು ಅಲ್ಲಿನ ಸಂಸದರಾದ ಸುರೇಶ್ ಅಂಗಡಿಯವರು ಶಾಸಕ ಸಂಜಯ್ ಪಾಟೀಲರ ಜೊತೆಗೂಡಿ ಮುಂದಾದ ಘಟನೆ ಇತ್ತೀಚಿಗೆ ನಡೆದಿತ್ತು. ಆ ದಿನ ಅಂಗಡಿಯವರು ಮರಾಠಿ ಭಾಷಿಕ ಮತದಾರರನ್ನು ಮೆಚ್ಚಿಸುವ ಭ್ರಮೆಯಲ್ಲಿ ತಾವೂ ಮರಾಠಿಯಲ್ಲಿ ಭಾಷಣ ಮಾಡಿದ್ದರು. ಆ ಮೆರವಣಿಗೆಯಲ್ಲಿ ಕೆಲಪುಂಡರು ಕನ್ನಡದ ವಿರುದ್ಧ ಘೋಷಣೆ ಮಾಡುತ್ತಿದ್ದರೂ ಸಂಸದರು ಮೌನವಾಗಿದ್ದರು. ಇದು ಮರಾಠಿ ಪ್ರತ್ಯೇಕತೆಯನ್ನು ಎತ್ತಿಹಿಡಿದು ಮತಗಳಿಸಬೇಕೆಂಬ ಕುತಂತ್ರವಲ್ಲವೇ?

ಶಿವಮೊಗ್ಗೆ ಮತ್ತು ತಮಿಳು ಸಮ್ಮೇಳನ : ಕಳೆದ ವಾರ ಕನ್ನಡನಾಡಿನ ಒಳನಾಡಾದ ಶಿವಮೊಗ್ಗೆಯಲ್ಲಿ ತಮಿಳು ಭಾಷಿಕರ ಸಮ್ಮೇಳನವೊಂದು ನಡೆಯಿತು. ಇದರ ಹಿಂದೆಯೂ ಅಲ್ಲಿನ ಭಾಜಪ ಸಚಿವರಾದ ಈಶ್ವರಪ್ಪನವರ ಬೆಂಬಲವಿದ್ದುದು ಎದ್ದು ಕಾಣುತ್ತಿತ್ತು. ಸಚಿವರು ತಮಿಳು ಭಾಷಿಕರನ್ನು ಓಲೈಸಿ ಭಾಷಣ ಮಾಡಿದ್ದೂ ಆಯಿತು. ಶ್ರೀಯುತರು ತಮಿಳು ಜನರನ್ನು ಮತಬ್ಯಾಂಕ್ ಎಂಬಂತೆ ನಡೆಸಿಕೊಂಡರು.

ತೆಲುಗು ಸಮ್ಮೇಳನ ಮತ್ತು ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ರಾಜ್ಯಸಂಪುಟದ ಸಚಿವರೊಬ್ಬರ ಮುಂದಾಳತ್ವದಲ್ಲಿ ತೆಲುಗು ಸಮ್ಮೇಳನವನ್ನೂ ನಡೆಸಲಾಯಿತು. ಪ್ರತಿಭಟಿಸಲು ಮುಂದಾದ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆದ ಘಟನೆಯೂ ನಡೆಯಿತು.

ನಾಡಿನಲ್ಲಿ ಕನ್ನಡಿಗರ ಜೊತೆ ನಾನಾ ಭಾಷೆಗಳ ಜನರು ಬದುಕುತ್ತಿದ್ದಾರೆ. ತಲೆಮಾರುಗಳಿಂದ ಇಲ್ಲೇ ಬದುಕುತ್ತಾ ಕನ್ನಡಿಗರೇ ಆಗಿ ಹೋಗಿರುವ ಅವರನ್ನು ನೀನು ತಮಿಳ, ನೀನು ತೆಲುಗ, ನೀನು ಮರಾಠಿ ಎನ್ನುತ್ತಾ ಮುಖ್ಯವಾಹಿನಿಯಿಂದ ದೂರಮಾಡುತ್ತಿರುವ ರಾಜಕೀಯ ಪಕ್ಷಗಳ ನಡವಳಿಕೆ ಸಮಾಜವನ್ನು ಒಡೆಯುವ ಹೀನ ಕೃತ್ಯವಾಗಿದೆ. ಹೀಗೆ ಕನ್ನಡ ನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಮತಗಳಿಕೆಗಾಗಿ ನಾಡೊಡೆಯಲು ಮುಂದಾಗುವುದನ್ನು ಜನತೆ ಗಮನಿಸಬೇಕಾಗಿದೆ. ಕರ್ನಾಟಕ ರಕ್ಷನಾ ವೇದಿಕೆಯು ರಾಜಕೀಯ ಪಕ್ಷಗಳ ಇಂತಹ ಎಲ್ಲಾ ಕ್ರಮಗಳನ್ನೂ ಖಂಡತುಂಡವಾಗಿ ವಿರೋಧಿಸುತ್ತದೆ. ಇಂತಹ ನಾಡವಿರೋಧಿ ನಡವಳಿಕೆ ತೋರಿಸಲು ಮುಂದಾಗುವ ಯಾವುದೇ ರಾಜಕೀಯ ಪಕ್ಷಗಳನ್ನು ಖಂಡಿಸುತ್ತೇವೆ. ಕನ್ನಡಿಗರ ಪ್ರತಿಭಟನೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಇಂತಹ ನಾಡೊಡೆಯುವ ಚಟುವಟಿಕೆಗಳನ್ನು ಮುಂದುವರೆಸುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗ ಮತದಾರ ತಕ್ಕಪಾಠವನ್ನು ಕಲಿಸುತ್ತಾನೆ.






Thursday, April 10, 2008

೨೦೦೮ ರ ವಿಧಾನ ಸಭಾ ಚುಣಾವಣೆ - ಪಕ್ಷಗಳಿಂದ ಕನ್ನಡಿಗರ ಅಪೇಕ್ಷೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸನಿಹವಾಗುತ್ತಿದೆ. ಹೀಗಿರುವಾಗ, ಕನ್ನಡದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ, ಕನ್ನಡದಲ್ಲೇ ಪ್ರಚಾರ ಮಾಡುವ, ಚುನಾವಣ ಪ್ರಚಾರ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ಹಾಕುವ ಜವಾಬ್ದಾರಿ ರಾಜಕೀಯಪಕ್ಷಗಳದ್ದಾಗಿದೆ.ಈ ಜವಾಬ್ದಾರಿಯನ್ನು ನೆನಪಿಸಿ, ಕರ್ನಾಟಕದ ರಾಜಕೀಯ ಪಕ್ಷಗಳಾದ, ಕಾಂಗ್ರೆಸ್, ಭಾರತೀಯ ಜನತಾ ಪಕ್ಷ, ಜಾತ್ಯಾತೀತ ಜನತಾ ದಳ, ಸಂಯುಕ್ತ ಜನತಾ ದಳ, ಬಹುಜನಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳಿಗೆ ಕನ್ನಡಿಗರ ಅಪೇಕ್ಷೆಗಳ ಪಟ್ಟಿಯನ್ನು ನೀಡಿದೆವು:- ಪತ್ರ ಈ ಕೆಳಕಂಡಂತಿದೆ

ಮಾನ್ಯರೇ,

ವಿಷಯ: ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದವತಿಯಿಂದ ಕನ್ನಡಿಗರಿಗೆ ಟಿಕೆಟ್ ನೀಡಬೇಕು ಹಾಗು ಚುನಾವಣೆಯ ಪ್ರಚಾರ ಸಾಮಗ್ರಿಗಳನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮುದ್ರಿಸಿ, ಕನ್ನಡ ಭಾಷೆಯಲ್ಲಿಯೇ ಚುನಾವಣಾ ಪ್ರಚಾರ ನಡೆಸುವಂತೆ ಒತ್ತಾಯಿಸಿ ನಮ್ಮ ವೇದಿಕೆ ಸಲ್ಲಿಸುತ್ತಿರುವ ಮನವಿ ಪತ್ರ.

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾಡಿನಾದ್ಯಂತ ಇರುವ ನಮ್ಮ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ಹೋರಾಟ-ಚಿಂತನೆಗಳ ಮೂಲಕ ದುಡಿಯುತ್ತಿರುವುದು ತಮಗೆ ತಿಳಿದಿರುವ ವಿಚಾರವಾಗಿದೆ. ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕನ್ನಡಿಗರ ಹಾಗು ಕರ್ನಾಟಕದ ಹಿತ ಕಾಯಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯು ಈ ಕೆಳಕಂಡ ವಿಷಯಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತದೆ.

ಪ್ರಮುಖ ಒತ್ತಾಯಗಳು

೧. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುತ್ತಿರುವವರೆಲ್ಲರೂ ಕರ್ನಾಟಕ ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದು ಎಲ್ಲರು ಕನ್ನಡಿಗರಾಗಿರುವುದರಿಂದ ತಮ್ಮ ಪಕ್ಷದ ಪ್ರಚಾರ ಕಾರ್ಯ ಕನ್ನಡ ಭಾಷೆಯಲ್ಲಿ ನಡೆಯಬೇಕು.
೨. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಳಸುವ ಪ್ರಚಾರ ಸಾಮಗ್ರಿಗಳಾದ ಬ್ಯಾನರ್, ಗೋಡೆಬರಹ, ಕರಪತ್ರ, ಬಂಟಿಂಗ್ಸ್, ಜಾಹಿರಾತು ಫಲಕ ಹಾಗು ವಾಲ್ ಪೋಸ್ಟರ್ ಸೇರಿದಂತೆ ಪತ್ರಿಕೆಗಳಿಗೆ ನೀಡುವ ಜಾಹಿರಾತು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿರಬೇಕು.
೩. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಪಕ್ಷಗಳ ಮುಖಂಡರಾಗಿರುವ ಕನ್ನಡಿಗರಿಗೆ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕು ಹೊರ ರಾಜ್ಯಗಳಿಂದ ವಲಸೆ ಬರುವ ಕನ್ನಡೇತರರರಿಗೆ ಟಿಕೇತ್ ನೀಡಿದರೆ ಅಂತಹ ಅಭ್ಯರ್ತಿಗಳ ವಿರುದ್ಧ ಹಾಗು ಟಿಕೆಟ್ ನೀಡಿದ ಪಕ್ಷದ ವಿರುದ್ಧ ಆಯಾ ಮತ ಕ್ಷೇತ್ರಗಳಲ್ಲಿ ಹಾಗು ರಾಜ್ಯಾದ್ಯಂತ ನಮ್ಮ ವೇದಿಕೆಯು ಹೋರಾಟ ನಡೆಸಲಿದೆ.
೪. ಚುನಾವಣ ಪ್ರಚಾರ ಸಭೆಗಳಿಗೆ ಹೊರರಾಜ್ಯಗಳ ನಾಯಕರುಗಳು ಹಾಗು ಪರಭಾಷೆಯ ಚಲನಚಿತ್ರ ನಟ-ನಟಿಯರನು ಕರೆಸಿ ಭಾಷಣ ಮಾಡಿಸಿ ಕರ್ನಾಟಕದ ಸಂಸ್ಕೃತಿಯನ್ನು ಹಾಳುಮಾಡುವುದರ ಜೊತೆಗೆ ರಾಜ್ಯದ ರಾಜಕೀಯ ನಾಯಕರುಗಳಿಗೆ ಹಾಗು ಕನ್ನಡದ ಚಲನ ಚಿತ್ರ ನಟ-ನಟಿಯರಿಗೆ ಅವಮಾನ ಮಾಡಬಾರದು.
೫. ತಮ್ಮ ಪಕ್ಷದ ಚುನಾವಣ ಸಭೆಗಳಲ್ಲಿ ಕನ್ನಡಿಗರ ಮದ್ಯೆ ವಿಷಬೀಜ ಬಿತ್ತಿ ಉತ್ತರ ಕರ್ನಾಟಕ, ಹಳೇ ಮೈಸೂರು, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕ, ಕೊಡಗು ಎಂದು ವಿಭಾಗಗಳಾಗಿ ಜನರಿಗೆ ತಪ್ಪು ಸಂದೇಶವನ್ನು ನೀಡದೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕು.
೬. ಕನ್ನಡ ಭಾಷೆಯ ಬೆಳವಣಿಗೆ ಸೇರಿದಂತೆ ನೆಲ-ಜಲ, ಗಡಿ, ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ರೈತ-ಕಾರ್ಮಿಕ, ವಿದ್ಯಾರ್ಥಿ ಯುವಜನರು, ಮಹಿಳೆಯರು - ಮಕ್ಕಳ ಶ್ರೇಯೋಭಿವೃದ್ದಿಗೆ ತಮ್ಮ ಪಕ್ಷದ ನಿಲುವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.
೭. ತಮ್ಮ ಪಕ್ಷದಿಂದ ಸಮಾಜಘಾತುಕ ಶಕ್ತಿಗಳಿಗೆ ಹಾಗು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು.
೮. ರಾಜ್ಯದ ರೈತರ - ನೇಕಾರರ - ಉದ್ಯಮಿಗಳ ಆತ್ಮಹತ್ಯೆಯನ್ನು ತಡೆಯುವುದು ಸೇರಿದಂತೆ ರಾಜ್ಯದ ಖನಿಜ-ವನ್ಯ ಸಂಪತ್ತಿನ ರಕ್ಷಣೆ ಸೇರಿದಂತೆ ಅಂತರಾಜ್ಯ ನದಿ ನೀರಿನ ವಿಚಾರವಾಗಿ ತಮ್ಮ ಪಕ್ಷದ ನಿಲುವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.
೯. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ಸೇರಿದಂತೆ ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಾಭಿವೃದ್ದಿಗೆ ಸಂವಿಧಾನದತ್ತವಾಗಿ ದೊರಕಬೇಕಾಗಿರುವ ಅನುದಾನಗಳನ್ನು ತಮ್ಮ ಪಕ್ಷ ಯಾವರೀತಿ ಹೋರಾಟ ನಡೆಸಿ ರಾಜ್ಯಕ್ಕೆ ತರಲಿದೆ ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.
೧೦. ವಲಸಿಗರ ಕೊಂಪೆಯಾಗುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ರಕ್ಷಣೆ ಸೇರಿದಂತೆ ಸರ್ಕಾರಿ ಹಾಗು ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ತಮ್ಮ ಪಕ್ಷ ತೆಗೆದುಕೊಳ್ಳುವ ಕ್ರಮವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.


ವಿಶ್ವದ ಭೂಪಟದಲ್ಲಿ ತನ್ನದೇ ಆದ ಹೆಸರನ್ನು ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕ ರಾಜ್ಯದ ರಕ್ಷಣೆ ಹಾಗು ಅಭಿವೃದ್ಧಿಗೆ ಪ್ರತಿಯೊಬ್ಬರು ಶಕ್ತಿ ಮೀರಿ ದುಡಿಯಬೇಕಾಗಿರುವುದರಿಂದ ನಮ್ಮ ವೇದಿಕೆಯ ಬಹು ದೊಡ್ಡ ಕನಸಾದ'ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ' ಎಂಬ ಉದ್ದೇಶದ ಈಡೇರಿಕೆಗೆ ಪಣತೊಟ್ಟು ನಿಂತಿರುವ ನಮ್ಮ ವೇದಿಕೆಯ ಕನ್ನಡಿಗರ ಮತಗಳಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ತಮ್ಮ ಪಕ್ಷಕ್ಕೆ ರಾಜ್ಯದ ಹಿತಕ್ಕಾಗಿ ಮೇಲ್ಕಂಡ ಮನವಿ ಪತ್ರ ಸಲ್ಲಿಸುತ್ತಿದೆ.

ವಂದನೆಗಳೊಂದಿಗೆ,

(ಟಿ ಏ. ನಾರಾಯಣಗೌಡ) - ರಾಜ್ಯಾಧ್ಯಕ್ಷರು; (ಜಯದೇವ ಪ್ರಸನ್ನ) - ರಾಜ್ಯ ಪ್ರಧಾನ ಕಾರ್ಯದರ್ಶಿ; (ಆರ್. ಗುರುಮೂರ್ತಿ) - ರಾಜ್ಯ ಉಪಾಧ್ಯಕ್ಷರು; (ದಾ.ಪಿ. ಅಂಜನಪ್ಪ) - ಅಧ್ಯಕ್ಷರು, ಬೆಂ. ನಗರ ಜಿಲ್ಲೆ; (ಬಸವರಾಜ್ ಪಡಕೋಟಿ) - ಕಾರ್ಯಾಧ್ಯಕ್ಷರು ಬೆಂ. ನಗರ; (ಕೆ.ಎಂ. ನಾಗೇಂದ್ರಬಾಬು) - ಅಧ್ಯಕ್ಷರು, ಬೆಂ ನಗರ; (ಎ.ಎಸ್. ನಾಗರಾಜ್) - ಪ್ರಧಾನ ಕಾರ್ಯದರ್ಶಿ, ಬೆಂ.ನಗರ; (ಸತೀಶ್ ಗೌಡ) - ಖಜಾಂಚಿ, ಬೆಂ.ನಗರ