Monday, January 31, 2011

ನಾಮಫಲಕದಲ್ಲಿ ಕನ್ನಡದ ಕಡ್ಡಾಯ ಬಳಕೆಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರಿನಲ್ಲಿ ನಡೆಯಲಿರುವ ೭೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಸಮೀಪಿಸುತ್ತಿದೆ. ಇಂತಹ ಮಹತ್ವದ ಸಂದರ್ಭದಲ್ಲಾದರೂ ಬೆಂಗಳೂರನ್ನೂ ಒಳಗೊಂಡು, ರಾಜ್ಯದಲ್ಲಿರುವ ಎಲ್ಲ ಸಾರ್ವಜನಿಕ ನಾಮಫಲಕಗಳು ಮತ್ತು ಜಾಹಿರಾತುಗಳಲ್ಲಿ ಕನ್ನಡದ ಕಡ್ಡಾಯ ಬಳಕೆಯ ನಿಯಮವನ್ನು ಅನುಷ್ಠಾನಗೊಳಿಸಿ, ಕನ್ನಡದ ವಾತಾವರಣ ನಿರ್ಮಿಸಬೇಕಾದುದು ಸರ್ಕಾರದ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ. ಆದರೆ ನಾಮಫಲಕಗಳಲ್ಲಿ ಕನ್ನಡದ ಬಳಕೆಯ ನಿಯಮವನ್ನೂ ನಿರಂತರವಾಗಿ ಮೀರಲಾಗುತಿದ್ದರೂ ನಮ್ಮ ಸರ್ಕಾರ ಮಾತ್ರ ನಿಯಮ ಮೀರಿದವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೇ ಕೈಕಟ್ಟಿ ಕುಳಿತಿದೆ.

ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಬಳಕೆಯನ್ನು ಎಲ್ಲ ನಿಯಮಾವಳಿಗಳ ಪ್ರಕಾರ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ನಮ್ಮ ವೇದಿಕೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವುದು ತಮಗೆಲ್ಲಾ ತಿಳಿದಿದೆ. ಇದೇ ವಿಷಯವಾಗಿ ಜನವರಿ ೩೧ ರಂದು ಬೆಂಗಳೂರಿನಲ್ಲಿ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ:Saturday, January 22, 2011

ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಭರದ ಸಿದ್ಧತೆ

ಬೆಂಗಳೂರಿನಲ್ಲಿ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ರ ಫೆಬ್ರವರಿ ೪ ರಿಂದ ೬ ರ ವರೆಗೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು, ಮೆರವಣಿಗೆ ಸಮಿತಿಯ ಅಧ್ಯಕ್ಷತೆಯನ್ನು ನಮ್ಮ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರಿಗೆ ವಹಿಸಿದೆ. ಸಮ್ಮೇಳನದ ಮೊದಲನೇ ದಿನ ಮೆರೆವಣಿಗೆ ನಡೆಯಲಿದ್ದು, ಇದರಲ್ಲಿ ಲಕ್ಷಾಂತರ ಕನ್ನಡಿಗರು ಸೇರುವ ನಿರೀಕ್ಷೆಯಿದೆ. ಮೆರವಣಿಗೆಗೆ ಬೇಕಾದ ಎಲ್ಲಾ ತರಹದ ತಯಾರಿಗಳೂ ಭರದಿಂದ ಸಾಗುತ್ತಿದೆ. ಈ ವಿಷಯದ ಬಗ್ಗೆ ಪತ್ರಿಕಾ ವರದಿಯನ್ನು ನೋಡಿ-

Saturday, January 15, 2011

ಭಾಷಾ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ರಾಜಕಾರಣಕ್ಕೆ ನಮ್ಮ ವಿರೋಧ.

ಭಾಷಾ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು, ಭಾಷಾ ಅಲ್ಪಸಂಖ್ಯಾತರರ ಓಲೈಕೆಗೆ ಮುಂದಾಗಿದ್ದು, ಹಲವಾರು ರೀತಿಗಳಿಂದ ಪರಭಾಷಿಕರನ್ನು ಮುಖ್ಯವಾಹಿನಿಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ತಿರುವಳ್ಳವರ್ ಜಯಂತಿ ಆಚರಣೆಗೆ ಮುಂದಾಗಿದ್ದು , ಇದು ಕನ್ನಡ ಮತ್ತು ತಮಿಳು ಭಾಷೆಯ ಜನರ ನಡುವೆ ಕಂದಕವನ್ನು ಉಂಟುಮಾಡುವುದಲ್ಲದೆ. ತಮಿಳರನ್ನು ಕರ್ನಾಟಕದ ಮುಖ್ಯವಾಹಿನಿಯಿಂದ ದೂರವಿಡುವಂತೆ ಮಾಡುತ್ತದೆ. ಈ ರೀತಿಯ ಭಾಷಾ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ರಾಜಕಾರಣವನ್ನು ನಮ್ಮ ವೇದಿಕೆ ಖಂಡಿಸುತ್ತದೆ. ಇದರ ಪತ್ರಿಕಾ ಹೇಳಿಕೆಯನ್ನು ಇಲ್ಲಿ ನೋಡಿ-Wednesday, January 12, 2011

ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಗೆ ಒತ್ತಾಯಿಸಿ ಮುಂದುವರೆದ ಹೋರಾಟ

ಸರಕಾರದ ನಿಯಮದ ಪ್ರಕಾರ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕು. ಆದರೆ ಹಲವಾರು ವಾಣಿಜ್ಯ ಸಂಸ್ಥೆಗಳು ಈ ನಿಯಮವನ್ನು ಗಾಳಿಗೆ ತೂರಿವೆ. ಹೀಗಿದ್ದರೂ ಸರಕಾರ ನಿಯಮ ಮೀರಿರುವವರ ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ. ಹಲವಾರು ದಿನಗಳಿಂದ ನಮ್ಮ ವೇದಿಕೆಯು ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಇದೇ ನಿಟ್ಟಿನಲ್ಲಿ ಜನವರಿ ೧೨ ೨೦೧೧ ರಂದು ಬೆಂಗಳೂರಿನಲ್ಲಿ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಇದರ ಪತ್ರಿಕಾ ವರದಿಯನ್ನು ನೋಡಿ-Thursday, January 6, 2011

ಬಿಜೆಪಿ ಮತ್ತು ನಾಡ ವಿರೋಧಿ ಎಂಇಎಸ್ ಹೊಂದಾಣಿಕೆಗೆ ವಿರೋಧ

ನಾಡದ್ರೋಹಿ ಎಂಇಎಸ್ ಕನ್ನಡ-ಕನ್ನಡಿಗ-ಕರ್ನಾಟಕ ವಿರೋಧಿ ನಿಲುವಿನಿಂದ ಬೆಳಗಾವಿಯಲ್ಲಿ ಪುಂಡಾಟಿಕೆಯನ್ನು ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ನಡೆಸುತ್ತಿರುವ ಹೋರಾಟಗಳ ಪರಿಣಾಮವಾಗಿ ಎಂಇಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯನ್ನು ತಲುಪಿದೆ.

ಆದರೆ ಬಿಜೆಪಿಯು ಅಧಿಕಾರದ ದುರಾಸೆಯಿಂದ ಎಂಇಎಸ್ ನ ಜೊತೆ ತಾಲೂಕು ಪಂಚಾಯತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹೊರಟು, ಅಸ್ತಿತ್ವ ಕಳೆದು ಕೊಳ್ಳುತ್ತಿರುವ ಎಂಇಎಸ್ ಗೆ ಮರುಜೀವ ನೀಡಲು ಹೊರಟಿದೆ. ಇದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಕನ್ನಡ-ಕನ್ನಡಿಗ-ಕರ್ನಾಟಕದ ವಿರೋಧಿ ನಡೆಯಾಗಿದೆ. ಬಿಜೆಪಿ ಯ ಈ ನಡೆಯನ್ನು ನಮ್ಮ ವೇದಿಕೆಯು ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ಬೆಳಗಾವಿಯಲ್ಲಿ ನಮ್ಮ ವೇದಿಕೆಯ ಘಟಕದಿಂದ ಪ್ರತಿಭಟನಾ ಜಾಥಾ ನಡೆಸಲಾಯಿತು.Saturday, January 1, 2011

ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ


ನಾಲ್ಕು ದಶಕಗಳ ಸುದೀರ್ಘ ಹೋರಾಟದ ನಂತರ ಕೃಷ್ಣಾ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಿದೆ.ಹಲವು ವಿಷಯಗಳಲ್ಲಿ ತೀರ್ಪು ನಮ್ಮ ಪರವಾಗಿದ್ದರೂ, ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ರಾಜ್ಯಕ್ಕೆ ದಕ್ಕಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ನೀರು ಆಂಧ್ರಪ್ರದೇಶದ ಪಾಲಾಗಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ನಮ್ಮ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು, ನಮಗೆ ಸಿಕ್ಕಿರುವುದು ಸಾಕು ಅನ್ನುವ ಧೋರಣೆ ಹೊಂದಿದ್ದಾರೆ. ರಾಜ್ಯ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿರುವ ನಮ್ಮ ವೇದಿಕೆ, ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದೆ.

ಪತ್ರಿಕಾ ಹೇಳಿಕೆಯನ್ನು ನೋಡಿರಿ.