Tuesday, November 16, 2010

ಕನ್ನಡದಲ್ಲಿ ನಾಮಫಲಕ: ನಿಯಮ ಮೀರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ

ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಿಗೆ ಇರುವ ನಿಯಮ ೨೪ರ ಪ್ರಕಾರ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕಬಹುದಾಗಿದೆ. ಆದರೆ ನಮ್ಮ ನಾಡಿನ ರಾಜಕೀಯ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ನಿಯಮವಿದ್ದರೂ ನಿಯಮ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ನಿಯಮದ ಪೂರ್ಣ ಪ್ರಮಾಣದ ಜಾರಿಗೆ ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದೇ ನಿಟ್ಟಿನಲ್ಲಿ ೧೬-ನವೆಂಬರ್-೨೦೧೦ ರಂದು ಬೆಂಗಳೂರು ನಗರ ಪಾಲಿಕೆ ಕಛೇರಿಯ ಎದುರು ಪ್ರತಿಭಟನೆ ನಡೆಸಿ, ನಿಯಮವನ್ನು ಜಾರಿಗೆ ತರಬೇಕೆಂದು ಮತ್ತು ನಿಯಮವನ್ನು ಮೀರಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇವೆ.Tuesday, November 2, 2010

ಪ್ರಾದೇಶಿಕತೆಗೆ ಅಡ್ಡಿ ಪಡಿಸುತ್ತಿರುವ ರಾಷ್ಟ್ರೀಯ ಪಕ್ಷಗಳು

ರಾಷ್ಟ್ರೀಯ ಪಕ್ಷಗಳಾದ ಬಿ.ಜೆ.ಪಿ ಹಾಗು ಕಾಂಗ್ರೆಸ್ಸ್ ಹುಸಿ ರಾಷ್ಟ್ರೀಯತೆಯ ಕಲ್ಪನೆಯಲ್ಲಿ, ಪ್ರಾದೇಶಿಕತೆ ಹಾಗೂ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿವೆ. ಈ ರಾಜ್ಯದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು, ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಹ ಹೈಕಮಾಂಡಿನ ಮುಂದೆ ಕೈ ಒಡ್ಡುವ ಪರಿಸ್ಥಿತಿ ಬಂದೊದಗಿದೆ. ನಾಡಿನ ಹಾಗೂ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿರುವ ಈ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಿಂದ ನಾಡಿನ ಅಭಿವೃದ್ಧಿ ನಿರೀಕ್ಷೆಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯತೆ ಇಂದು ಬಂದೊದಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾಗರಬಾವಿ ಘಟಕ ಏರ್ಪಡಿಸಿದ್ದ "ಕನ್ನಡೋತ್ಸವ"ದಲ್ಲಿ ಮಾತನಾಡಿದ ಶ್ರೀ ಟಿ. ಎ. ನಾರಾಯಣಗೌಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.

Monday, November 1, 2010

ಕನ್ನಡದಲ್ಲಿ ನಾಮಫಲಕ - ಕಾನೂನು ಮುರಿದದ್ದನ್ನು ಪ್ರತಿಭಟಿಸಿದ್ದಕ್ಕೇ ಬಂಧನ

ಕರ್ನಾಟಕದ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಲ್ಲಿ ಇರಬೇಕಾದ ಕನ್ನಡದ ನಾಮಫಲಕದ ಕುರಿತು, ಕಾನೂನಿನ ನಿಯಮ ೨೪ರ ಅನ್ವಯ ಇರುವ ಸರ್ಕಾರಿ ಆಜ್ಞೆಯನ್ನು ಇಂದಿಗೂ ಉಲ್ಲಂಘಿಸುತ್ತಿರುವವರ ವಿರುದ್ಧ ಮತ್ತು ಕಾನೂನು ಮುರಿಯುವುದನ್ನು ಸುಮ್ಮನೆ ನೋಡಿಕೊಂಡಿರುವ ಸರ್ಕಾರದ ವಿರುದ್ಧ ಕರ್ನಾಟಕದ ರಾಜ್ಯೋತ್ಸವದ ದಿನವಾದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು. ಅದರ ಪತ್ರಿಕಾ ವರದಿಗಳನ್ನು ಲಗತ್ತಿಸಿದೆ.

ವಿಷಾದದ ಸಂಗತಿಯೆಂದರೆ ೧೯೮೫ ರಲ್ಲೇ ರಚನೆಯಾದ ಕಾನೂನು ೨೫ ವರ್ಷಗಳು ಕಳೆದರೂ ಜಾರಿಯಾಗದೆ, ನಿರಂತರವಾಗಿ ಕಾನೂನು ಮುರಿಯಲಾಗುತ್ತಿದ್ದು ಇಂದಿಗೂ ಇದರ ವಿರುದ್ಧ ಜನಸಾಮಾನ್ಯರು ಪ್ರತಿಭಟನೆ ನಡೆಸಬೇಕಾದ ದಯನೀಯ ಸ್ಥಿತಿ ಇದೆ. ಇದಕ್ಕಿಂತಲೂ ವಿಪರ್ಯಾಸದ ಸಂಗತಿಯೆಂದರೆ, ಕಾನೂನು ಮುರಿಯುತ್ತಿರುವವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವ ಸರ್ಕಾರ, ಬದಲಾಗಿ ಇದರ ವಿರುದ್ಧ ಪ್ರತಿಭಟಿಸಿದವರನ್ನೇ ಕಾನೂನು ಮುರಿದರೆಂದು ಆರೋಪಿಸಿ ಬಂಧಿಸುವ ಕಾರ್ಯಕ್ಕೆ ಮುಂದಾಗಿದೆ.