Sunday, February 16, 2014

ಡಬ್ಬಿಂಗ್ ಕುರಿತು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಅಭಿಪ್ರಾಯ

ಡಬ್ಬಿಂಗ್ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನಿಲುವೇನು ಎಂಬ ಪ್ರಶ್ನೆ ಆಗಿಂದಾಗೆ ಕೇಳಿಬರುತ್ತಿತ್ತು. ಬೇಕು-ಬೇಡಗಳ ನಡುವೆ ಮಧ್ಯಮ ಮಾರ್ಗವೊಂದನ್ನು ಹುಡುಕುವ ಅಗತ್ಯವಿದೆ ಎಂಬುದು ಗೌಡರ ಅಭಿಪ್ರಾಯ. ಸಾಹಿತಿ ಚಂದ್ರಶೇಖರ ಕಂಬಾರರ ನಿಲುವನ್ನು ಸಮರ್ಥಿಸುವ ಗೌಡರು ಕನ್ನಡಿಗರಿಗೆ, ಕನ್ನಡತನಕ್ಕೆ ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸಬೇಕು ಎಂದು ಹೇಳುತ್ತಾರೆ. ಡಬ್ಬಿಂಗ್ ಕುರಿತಾದ ಗೌಡರ ನಿಲುವನ್ನು ಸ್ಪಷ್ಟಪಡಿಸುವ ಲೇಖನ ಫೆಬ್ರವರಿ ತಿಂಗಳ `ಕರವೇ ನಲ್ನುಡಿ' ಸಂಚಿಕೆಯಲ್ಲಿ ಪ್ರಕಟಗೊಳ್ಳುತ್ತಿದೆ. 

ಡಬ್ಬಿಂಗ್: ಮಧ್ಯಮ ಮಾರ್ಗವೊಂದು ಸಾಧ್ಯವಿಲ್ಲವೇ?

ಕನ್ನಡಕ್ಕೆ ಇತರ ಭಾಷೆಯ ಸಿನಿಮಾಗಳು, ಟಿವಿ ಕಾರ್ಯಕ್ರಮಗಳು ಡಬ್ ಆಗಬೇಕೋ ಬೇಡವೋ ಎಂಬ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಚರ್ಚೆ-ಸಂವಾದ-ವಾಗ್ವಾದಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಜೀವಂತವಾಗಿಡುತ್ತದೆ. ಹೀಗಾಗಿ ಇಂಥ ಚರ್ಚೆಗಳು ನಡೆಯುತ್ತಿರಬೇಕು. ಯಾವುದೇ ಸಂವಾದ ವ್ಯಕ್ತಿಗಳನ್ನು ಗುರಿ ಮಾಡಿಕೊಂಡು ಸಣ್ಣಮಟ್ಟಕ್ಕೆ ಇಳಿದಾಗ ಹಳಿ ತಪ್ಪುತ್ತದೆ. ಚರ್ಚೆಯಾಗಬೇಕಾದ ವಿಷಯ ತೆರೆಮರೆಗೆ ಸರಿದು ವೈಯಕ್ತಿಕ ಪ್ರತಿಷ್ಠೆಗಳು, ಅಹಂಗಳು, ಏಟಿಗೆ ಎದಿರೇಟು ಎಂಬ ದಾಳಿಗಳು ನಡೆಯುತ್ತವೆ. ಇಂಥ ಚರ್ಚೆಗಳು ನಮ್ಮನ್ನೂ ಬೆಳೆಸುವುದಿಲ್ಲ, ಸಮಾಜವನ್ನೂ ಬೆಳೆಸುವುದಿಲ್ಲ.

ಅರವತ್ತರ ದಶಕದಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಚಿತ್ರರಂಗ ಒಟ್ಟಾಗಿ ಡಬ್ಬಿಂಗ್ ಚಿತ್ರಗಳು ಕನ್ನಡಕ್ಕೆ ಬೇಡ ಎಂದು ಚಳವಳಿ ನಡೆಸಿದ ಪರಿಣಾಮವಾಗಿ ಕನ್ನಡಕ್ಕೆ ಇತರ ಭಾಷೆಗಳಿಂದ ಡಬ್ಬಿಂಗ್ ಆಗುವುದು ನಿಂತುಹೋಗಿತ್ತು. ಆಗಾಗ ಡಬ್ಬಿಂಗ್ ಬಂದರೆ ತಪ್ಪೇನು ಎಂಬ ಮಾತುಗಳು ಕೇಳಿಬಂದವಾದರೂ ಡಬ್ಬಿಂಗ್ ಸಿನಿಮಾ-ಕಾರ್ಯಕ್ರಮಗಳು ಆರಂಭಗೊಳ್ಳಲಿಲ್ಲ. ಎರಡು ವರ್ಷಗಳ ಹಿಂದೆ ಹಿಂದಿಯ ಖ್ಯಾತನಟ ಆರಂಭಿಸಿದ ‘ಸತ್ಯಮೇವ ಜಯತೆ’ ಎಂಬ ಸಾಮಾಜಿಕ ಕಾಳಜಿಯ ಟಿವಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮತ್ತೆ ಡಬ್ಬಿಂಗ್ ಕುರಿತ ಚರ್ಚೆ ಆರಂಭಗೊಂಡಿತ್ತು. ಕನ್ನಡಕ್ಕೆ ಡಬ್ ಆದ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಟಿವಿಯಲ್ಲಿ ಪ್ರಸಾರವಾಗದಂತೆ ಟೆಲಿವಿಷನ್ ಸಂಘಟನೆಗಳು ತಡೆದವು. ಇದಾದ ನಂತರ ‘ಕನ್ನಡ ಗ್ರಾಹಕರ ಕೂಟ’ ಸಿಸಿಐನಲ್ಲಿ ದಾವೆ ಹೂಡಿದ ಪರಿಣಾಮ ಈ ಸಂಬಂಧ ಸಿಸಿಐ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಡಬ್ಬಿಂಗ್ ನಿಷೇಧ ತಪ್ಪು ಎಂದು ಗುರುತಿಸಿ ವರದಿ ನೀಡಿದೆ. ಈ ವರದಿಯ ಹಿನ್ನೆಲೆಯಲ್ಲಿ ಮತ್ತೆ ಡಬ್ಬಿಂಗ್ ಚರ್ಚೆ ಆರಂಭಗೊಂಡಿದ್ದು, ಈ ಸಂಬಂಧ ಕನ್ನಡ ಚಿತ್ರರಂಗದ ಒಂದು ಗುಂಪು ಪ್ರತಿಭಟನೆಯನ್ನೂ ನಡೆಸಿದೆ.

ಡಬ್ಬಿಂಗ್ ಕುರಿತ ಚರ್ಚೆ ಯಾವಾಗ ನಡೆದರೂ ನನ್ನನ್ನು ಕೆಲವು ಮಾಧ್ಯಮ ಮಿತ್ರರು, ಹಿತೈಶಿಗಳು ‘ಈ ಕುರಿತು ನಿಮ್ಮ ನಿಲುವೇನು?’ ಎಂದು ಪ್ರಶ್ನಿಸುತ್ತಿರುತ್ತಾರೆ. ಮತ್ತೆ ಕೆಲವರು ನನ್ನ ನಿಲುವನ್ನು ತಾವೇ ಕಲ್ಪಿಸಿಕೊಂಡು ಅದಕ್ಕೆ ರೆಕ್ಕೆಪುಕ್ಕ ಕಟ್ಟಿಕೊಂಡು ಬರೆಯುವುದು, ಮಾತನಾಡುವುದೂ ಉಂಟು. ನಾನೇನೇ ಮಾಡಿದರೂ, ಮಾಡದಿದ್ದರೂ ಅದನ್ನು ಟೀಕಿಸುವ ಕುಚೇಷ್ಠೆಯನ್ನೇ ತಮ್ಮ ಬದುಕಿನ ಬಂಡವಾಳ ಮಾಡಿಕೊಂಡಿರುವ ಜನರೊಂದಷ್ಟು ಮಂದಿಯಿದ್ದಾರೆ. ಅಂಥವರಿಗೆ ನಾನೆಂದೂ ಉತ್ತರಿಸಲು ಹೋಗುವುದಿಲ್ಲ. ಆದರೆ ಕನ್ನಡಿಗರನ್ನು ಕಿತ್ತು ತಿನ್ನುತ್ತಿರುವ ನೂರೆಂಟು ಸಮಸ್ಯೆಗಳ ನಡುವೆ ‘ಡಬ್ಬಿಂಗ್ ಚರ್ಚೆ’ಯೂ ಕೂಡ ಮುಖ್ಯವಾದದ್ದು ಎಂಬ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ನನ್ನ ನಿಲುವನ್ನೂ ಸ್ಪಷ್ಟಪಡಿಸಿಬಿಡುತ್ತೇನೆ.

ಸದ್ಯದ ಸ್ಥಿತಿಯಲ್ಲಿ ಡಬ್ಬಿಂಗ್ ಬೇಕು/ ಡಬ್ಬಿಂಗ್ ಬೇಡ ಎಂಬ ಎರಡೇ ವಾದಗಳನ್ನು ಮುಂಚೂಣಿಗೆ ತಂದು ಒಬ್ಬರ ಮೇಲೊಬ್ಬರು ಕೆಸರು ಎರಚುವಂಥ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಎರಡು ಆಯ್ಕೆಗಳ ನಡುವೆ ಮತ್ತೊಂದು ಆಯ್ಕೆ ಇಲ್ಲವೇ ಇಲ್ಲವೇನೋ ಎಂಬಂತೆ ಈ ಚರ್ಚೆ ನಡೆಯುತ್ತಿದೆ. ನಾನು ಈ ಎರಡರ ನಡುವೆ ಮಧ್ಯಮ ಮಾರ್ಗವೊಂದು ಇರಬಹುದಾ ಎಂಬ ಹುಡುಕಾಟದಲ್ಲಿ ತೊಡಗಿದ್ದೇನೆ. ಬೇಕು ಅನ್ನುವವರ, ಬೇಡ ಅನ್ನುವವರ ಎರಡೂ ಬಗೆಯ ವಾದಗಳಲ್ಲಿ ಒಂದಷ್ಟು ಭಾಗ ಸತ್ಯವಿದೆ. ಎರಡೂ ಪಾಳಯದಲ್ಲಿ ಇರುವ ಸತ್ಯಗಳನ್ನು ಇಟ್ಟುಕೊಂಡು ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಬಾರದೇಕೆ ಎಂಬುದು ನನ್ನ ಪ್ರಶ್ನೆ. ಇಂಥ ಮಧ್ಯಮ ಮಾರ್ಗವೊಂದನ್ನು ಹೇಳಲು ಹೊರಟ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ಮೇಲೆ ಕೆಟ್ಟಭಾಷೆಯಲ್ಲಿ ಪ್ರಹಾರ ನಡೆಸಿ ಅವರ ಬಾಯಿಮುಚ್ಚಿಸುವ ಯತ್ನ ನಡೆಸಲಾಯಿತು. 

ಮೊದಲಿಗೆ ಡಬ್ಬಿಂಗ್ ಬೇಕು ಎನ್ನುತ್ತಿರುವವರ ಕುರಿತು ನಾಲ್ಕು ಮಾತುಗಳು. ಡಬ್ಬಿಂಗ್ ಬೇಕು ಎನ್ನುತ್ತಿರುವವರಲ್ಲಿ ಎರಡು ಗುಂಪಿದೆ. ಒಂದು ಗುಂಪು ಚಿತ್ರರಂಗದ ಒಳಗೆಯೇ ಇದ್ದು ಡಬ್ಬಿಂಗ್ ಇರಲಿ ಎನ್ನುತ್ತಿರುವವರು. ಇನ್ನೊಂದು ಗುಂಪು ಸಾಮಾನ್ಯ ಪ್ರೇಕ್ಷಕರಾಗಿ/ಗ್ರಾಹಕರಾಗಿ ಡಬ್ಬಿಂಗ್ ಬೇಕು ಎನ್ನುತ್ತಿರುವವರು. ಚಿತ್ರರಂಗದ ಒಳಗೆ ಡಬ್ಬಿಂಗ್ ಬೇಕು ಎನ್ನುತ್ತಿರುವವರಲ್ಲಿ ಕೆಲವರನ್ನು ಹೊರತುಪಡಿಸಿ ಉಳಿದವರೆಲ್ಲರೂ ತಮ್ಮ ಸ್ವಾರ್ಥ ಸಾಧನೆಗಾಗಿ ಡಬ್ಬಿಂಗ್ ಪರ ಮಾತನಾಡುತ್ತಿರುವವರು. ಡಬ್ಬಿಂಗ್ ಬಗ್ಗೆ ಮಮಕಾರ ಇಟ್ಟುಕೊಂಡಿರುವ ಕೆಲವು ನಿರ್ಮಾಪಕರಿಗೆ ತಮ್ಮ ಹಿತಾಸಕ್ತಿಯಷ್ಟೇ ಉಳಿಯಬೇಕಿದೆ. ಹೀರೋಗಳ ಕಾಲ್ ಶೀಟ್ ಸಿಗುತ್ತಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಇವರು ಡಬ್ಬಿಂಗ್ ಬೇಕು ಎನ್ನುತ್ತಿದ್ದಾರೆ. ಇದು ಅತ್ಯಂತ ಬಾಲಿಷ, ಅಪಹಾಸ್ಯದ ಸಮರ್ಥನೆ.

ಆದರೆ ಸಾಮಾನ್ಯ ಪ್ರೇಕ್ಷಕನಾಗಿ ಡಬ್ಬಿಂಗ್ ಬೇಕು ಎನ್ನುತ್ತಿರುವವರಲ್ಲಿ ಯಾವ ಸ್ವಾರ್ಥ ಲಾಲಸೆಯೂ ಇಲ್ಲ. ಸಿಸಿಐನಲ್ಲಿ ಮೊಕದ್ದಮೆ ಹೂಡಿರುವ ‘ಕನ್ನಡ ಗ್ರಾಹಕರ ಕೂಟ’ದ ಗೆಳೆಯರ ಬಗ್ಗೆ ಹಲವರು ಲಘುವಾಗಿ ಮಾತನಾಡುವುದನ್ನು ಕಂಡಿದ್ದೇನೆ. ಆದರೆ ಈ ಯುವಕರು ಕನ್ನಡಕ್ಕಾಗಿಯೇ ಬದುಕನ್ನು ಮುಡುಪಾಗಿಟ್ಟು ಹೋರಾಟ ಮಾಡುತ್ತಿರುವವರು.

ಇದಲ್ಲದೆ ಸಾಮಾಜಿಕ ತಾಣಗಳಲ್ಲಿ, ಬ್ಲಾಗುಗಳಲ್ಲಿ ಡಬ್ಬಿಂಗ್ ಪರವಾಗಿ ಮಾತನಾಡುತ್ತಿರುವವರಿಗೆ ಯಾವ ಲಾಭಾಕಾಂಕ್ಷೆಯೂ ಇಲ್ಲ. ಕನ್ನಡದ ಹಿತಾಸಕ್ತಿಗಾಗಿಯೇ ಅವರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಇವರ ಪೈಕಿ ಟೆಕಿಗಳಿದ್ದಾರೆ, ಸಾಹಿತಿಗಳಿದ್ದಾರೆ, ಬೇರೆ ಬೇರೆ ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದಾರೆ, ಸಾಮಾನ್ಯ ಜನರಿದ್ದಾರೆ. ಜಗತ್ತಿನ ಯಾವುದೇ ಭಾಷೆಯಲ್ಲಿ ಬರುವ ಜ್ಞಾನ, ಮನರಂಜನೆ ತಮಗೆ ಕನ್ನಡದಲ್ಲೇ ಬೇಕು. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಡಬ್ಬಿಂಗ್ ನಿಷೇಧವೆಂಬುದೇ ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಮತ್ತು ಅನೈತಿಕ ಎಂಬುದು ಇವರ ವಾದ.

ಡಬ್ಬಿಂಗ್ ಬೇಡ ಎಂದು ತೊಡೆ ತಟ್ಟಿ ನಿಂತಿರುವವರಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಿರುವುದು ಕನ್ನಡ ಚಿತ್ರರಂಗದ ನಾಯಕಮಣಿಗಳು. ಇವರ್‍ಯಾರೂ ಕನ್ನಡದ ಹಿತಕ್ಕಾಗಿ ಡಬ್ಬಿಂಗ್ ಬೇಡ ಎನ್ನುತ್ತಿರುವವರಲ್ಲ. ಪರಭಾಷಾ ಕಲಾವಿದರು/ತಂತ್ರಜ್ಞರನ್ನು ಇಟ್ಟುಕೊಂಡು ಸಾರಾಸಗಟು ರೀಮೇಕ್ ಚಿತ್ರಗಳನ್ನು ಮಾಡುತ್ತಿರುವವರೇ ಇವರ ಪೈಕಿ ಹೆಚ್ಚಿನವರು. ಎಲ್ಲಿ ತಮ್ಮ ಬುಡಕ್ಕೆ ಬಿಸಿನೀರು ತಲುಗುತ್ತದೋ ಎಂಬ ಭೀತಿಯಲ್ಲಿ ಇವರು ಸಿಲುಕಿಕೊಂಡಿದ್ದಾರೆ. ಕನ್ನಡಿಗರ ಅಸ್ತಿತ್ವಕ್ಕೇ ಗಂಡಾತರವಾಗುವ ಸಂದರ್ಭಗಳು ಸೃಷ್ಟಿಯಾದಾಗ ಇವರು ಎಂದಿಗೂ ತುಟಿ ಬಿಚ್ಚಿದವರಲ್ಲ. ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ, ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕಕ್ಕೆ ಮರಣಶಾಸನವಾಗುವಂತಹ ತೀರ್ಪು ಬಂದಾಗ, ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೋಗಗಳನ್ನು ಕಿತ್ತುಕೊಂಡು ಬಿಹಾರಿಗಳಿಗೆ ಕೊಟ್ಟಾಗ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೊಡದೆ ಕೇಂದ್ರ ಸರ್ಕಾರ ತಾರತಮ್ಯ ಎಸಗಿದಾಗ, ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಕನ್ನಡಿಗರ ವಿರುದ್ಧ ತೀರ್ಪು ಬಂದಾಗ ॒ಹೀಗೆ ಇಂಥ ನೂರಾರು ಸಂದರ್ಭಗಳಲ್ಲಿ ಈ ನಾಯಕಮಣಿಗಳು ಎಂದೂ ಮಾತನಾಡಿದವರಲ್ಲ. ಈಗ ‘ಕನ್ನಡಕ್ಕಾಗಿ ನಮ್ಮ ಹೋರಾಟ, ಹೊಟ್ಟಪಾಡಿಗಲ್ಲ’ ಎಂದರೆ ಅದನ್ನು ನಂಬುವಷ್ಟು ಮೂರ್ಖರು ಕನ್ನಡದ ಜನತೆಯಲ್ಲ.

ಬೇರೆ ಹೋರಾಟಗಳ ಕಥೆ ಹಾಗಿರಲಿ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಹೋರಾಟದಲ್ಲೂ ಹಿಂದೆ ಏನೇನು ನಡೆದಿದೆ ಎಂಬುದನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು. ಪರಭಾಷಾ ಚಿತ್ರಗಳ ಹಾವಳಿ ವಿರುದ್ಧ ವರನಟ ಡಾ.ರಾಜಕುಮಾರ್ ತಮ್ಮ ಬದುಕಿನ ಕೊನೆಯ ಹೋರಾಟವನ್ನು ನಡೆಸಿದ್ದ ಸಂದರ್ಭದಲ್ಲಿ ಆ ಚಳವಳಿಗೆ ಪೂರ್ಣಮಟ್ಟದಲ್ಲಿ ಬೆಂಬಲ ನೀಡಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡಪರ ಸಂಘಟನೆಗಳು. ಡಾ.ರಾಜ್ ನೇತೃತ್ವದಲ್ಲಿ ಕೆಂಪೇಗೌಡ ರಸ್ತೆಯ ಜನತಾಬಜಾರ್ ಎದುರು ನಡೆದ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡಿದ್ದೆ, ನಾನೂ ಸಹ ಭಾಷಣ ಮಾಡಿದ್ದೆ. ಆ ಚಳವಳಿಯಲ್ಲಿ ಕನ್ನಡ ಚಿತ್ರರಂಗದ ಕೆಲವು ಖ್ಯಾತನಾಮರು ಕಣ್ಮರೆಯಾಗಿದ್ದರು. ಇದಾದ ನಂತರ ಈ ಚಳವಳಿಯನ್ನು ಮುಂದುವರೆಸುವ ಆಸಕ್ತಿ ಚಿತ್ರರಂಗದವರಿಗೇ ಇರಲಿಲ್ಲ. ಯಾಕೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲೆ ಹಿಡಿತವಿರುವುದು ಪರಭಾಷಾ ಚಿತ್ರ ವಿತರಕರ ಬಳಿ. 

ಇದಾದ ನಂತರ ಕರ್ನಾಟಕ ರಕ್ಷಣಾ ವೇದಿಕೆಯೇ ಚಳವಳಿಯನ್ನು ತನ್ನ ಕೈಗೆ ತೆಗೆದುಕೊಂಡು, ವಾಣಿಜ್ಯ ಮಂಡಳಿ ರೂಪಿಸಿದ ನಿಯಮವನ್ನು ಉಲ್ಲಂಘಿಸಿ ಪರಭಾಷಾ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿತು. ತೀವ್ರ ಸ್ವರೂಪದಲ್ಲಿ ನಡೆದ ಈ ಪ್ರತಿಭಟನೆಗಳ ಸಂದರ್ಭದಲ್ಲಿ ನನ್ನ ಕಾರ್ಯಕರ್ತರನೇಕರು ಪೊಲೀಸರ ಲಾಠಿ ಏಟು ತಿಂದರು. ಸಾಕಷ್ಟು ಮಂದಿ ಜೈಲು ಪಾಲಾದರು. ಹೀಗೆ ಜೈಲು ಸೇರಿದ ಕಾರ್ಯಕರ್ತರನ್ನು ಕಂಡು ಮಾತನಾಡಿಸುವಷ್ಟೂ ಸೌಜನ್ಯವನ್ನು ಈಗ ‘ಕನ್ನಡಕ್ಕಾಗಿ ಪ್ರಾಣತ್ಯಾಗ’ ಮಾಡುವ ಮಾತನಾಡುತ್ತಿರುವ ಯಾರೂ ತೋರಲಿಲ್ಲ. ಇವತ್ತು ವಾಣಿಜ್ಯ ಮಂಡಳಿ ಪದಾಧಿಕಾರಿ ಹುದ್ದೆಯನ್ನು ತ್ಯಾಗ ಮಾಡಿ ಚಳವಳಿಯನ್ನು ಮಾಡುತ್ತಿರುವ ನಾಯಕರೊಬ್ಬರು ಹಿಂದೆ ಎಂ.ಜಿ.ರಾಮಚಂದ್ರನ್ ಅವರ ತಮಿಳು ಸಿನಿಮಾದ ವಿತರಣೆಯನ್ನು ತಾವೇ ಬೇರೆಯವರ ಹೆಸರಿನಲ್ಲಿ ಮಾಡಿದ್ದರು. ಇದನ್ನು ಪ್ರಶ್ನಿಸಿದ ಕನ್ನಡ ಕಾರ್ಯಕರ್ತರೊಬ್ಬರನ್ನು ಥಳಿಸಲಾಗಿತ್ತು. ಹೀಗೆ ಡಾ.ರಾಜಕುಮಾರ್ ಅವರನ್ನು ಹೊರತುಪಡಿಸಿ ಈ ಚಿತ್ರರಂಗದ ಘಟನಾನುಘಟಿಗಳು ಕನ್ನಡದ ಸಮಸ್ಯೆಗಳಿಗೆ ಯಾವತ್ತಿಗೂ ಸ್ಪಂದಿಸಿದವರಲ್ಲ, ಜತೆಗೆ ತಮ್ಮ ವಾಣಿಜ್ಯ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟು ಯಾವತ್ತಿಗೂ ಕನ್ನಡ ಚಿತ್ರರಂಗದ ಉಳಿವಿಗೆ ಹೋರಾಡಿದವರಲ್ಲ.

ಇನ್ನು ಈ ಪಾಳಯ ಹೇಳುತ್ತಿರುವಂತೆ ಡಬ್ಬಿಂಗ್ ಬಂದರೆ ಕನ್ನಡ ಭಾಷೆ ಅಳಿಯುತ್ತದೆ ಎಂಬ ವಾದದಲ್ಲಿ ಯಾವ ಹುರುಳೂ ಇಲ್ಲ. ‘ಕನ್ನಡವೂ ಸಂಸ್ಕೃತದಂತೆ ಗೌರವದಿಂದ ಪ್ರಾಣ ತ್ಯಾಗ ಮಾಡಬೇಕು’ ಎಂದು ಕಿರುತೆರೆ ನಟಿ ಮಾಳವಿಕಾ ಸಾಮಾಜಿಕ ತಾಣದಲ್ಲಿ ಹೇಳಿಕೆ ನೀಡಿದ್ದರು. ಕನ್ನಡ ಭಾಷೆ ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಭಾಷೆ. ಈ ಭಾಷೆಯಲ್ಲಿ ಕಟ್ಟಿದವರು, ಬೆಳೆಸಿದವರು ಕನ್ನಡದ ಶರಣರು, ದಾರ್ಶನಿಕರು, ಮಹಾಕವಿಗಳು, ಸಂತರು, ಜನನಾಯಕರು, ಕಲಾವಿದರು, ಜನಪದರು, ಚಳವಳಿಗಾರರು ಹಾಗು ಕನ್ನಡವನ್ನಷ್ಟೇ ಹೃದಯದ ಭಾಷೆಯನ್ನಾಗಿ ಮಾಡಿಕೊಂಡ ಜನಸಾಮಾನ್ಯರು. ಸಾವಿರ ಏಟುಗಳನ್ನು ತಿಂದೂ ಈ ಭಾಷೆ ಉಳಿದಿದೆ, ಬೆಳೆದಿದೆ, ಮುಂದೆಯೂ ಉಳಿಯುತ್ತದೆ. ಕನ್ನಡ ಚಿತ್ರರಂಗ ಅಸ್ತಿತ್ವಕ್ಕೆ ಬಂದು ಆರು ದಶಕಗಳಷ್ಟೇ ಆಗಿದೆ. ಅದಕ್ಕೂ ಮುನ್ನವೂ ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು, ಇದೆ ಎಂಬುದನ್ನು ಮರೆಯಬಾರದು. ಭಾಷೆ ಸಾಯುತ್ತದೆ, ಪ್ರಾಣತ್ಯಾಗ ಮಾಡಬೇಕು ಇತ್ಯಾದಿಯಾಗಿ ಮಾತನಾಡುವವರು ಮಾನಸಿಕ ರೋಗಿಗಳಷ್ಟೆ.

ಆದರೆ ಡಬ್ಬಿಂಗ್ ಬೇಡ ಎನ್ನುತ್ತಿರುವವರ ಪೈಕಿ ಕೆಲವರು ಮಂಡಿಸುತ್ತಿರುವ ವಾದಗಳಲ್ಲಿ ಕೆಲವು ಅಂಶಗಳಿಗೆ ನನ್ನ ಸಮ್ಮತಿಯಿದೆ. ಮೊದಲನೆಯದಾಗಿ ಡಬ್ಬಿಂಗ್ ಸಿನಿಮಾಗಳು ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು. ಇತರ ಭಾಷೆಗಳ ಚಲನಚಿತ್ರಗಳು ಡಬ್ ಆಗಿ ಬಂದರೆ ನಮ್ಮ ಮಕ್ಕಳು ಆ ಸಿನಿಮಾಗಳ ಸಂಸ್ಕೃತಿಯನ್ನೇ ನಮ್ಮದೆಂದು ಭಾವಿಸುವ ಅಪಾಯವಿದೆ. ನಮ್ಮ ಮಕ್ಕಳ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. (ದುರದೃಷ್ಟವಶಾತ್ ಕನ್ನಡದಲ್ಲಿ ತಯಾರಾಗುತ್ತಿರುವ ರೀಮೇಕ್ ಸಿನಿಮಾಗಳಲ್ಲೂ ಇತರ ಭಾಷೆಗಳ ಸಂಸ್ಕೃತಿಯನ್ನೇ ಯಥಾವತ್ತಾಗಿ ಅನುಕರಿಸಲಾಗುತ್ತಿದೆ.) ಎರಡನೆಯದಾಗಿ ಡಬ್ಬಿಂಗ್ ಸಿನಿಮಾಗಳು ಆರಂಭಗೊಂಡ ನಂತರ ಕನ್ನಡ ಚಿತ್ರಗಳು ತಯಾರಾಗುವ ಸಂಖ್ಯೆಯೇನಾದರೂ ಕಡಿಮೆ ಆದರೆ ಚಿತ್ರರಂಗವನ್ನೇ ನೆಚ್ಚಿಕೊಂಡಿರುವ ಕಾರ್ಮಿಕರು-ತಂತ್ರಜ್ಞರು-ಕಲಾವಿದರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೂರನೆಯದಾಗಿ ಕಿರುತೆರೆಯಲ್ಲಿ ಹಿಂದಿ, ತೆಲುಗು, ತಮಿಳು ಧಾರಾವಾಹಿಗಳೇ ಡಬ್ ಆಗಿ ಬರತೊಡಗಿದರೆ ಕನ್ನಡ ಕಿರುತೆರೆಯನ್ನೇ ನಂಬಿಕೊಂಡಿರುವ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಮೂರು ಕಾರಣಗಳನ್ನು ನಾನು ಒಪ್ಪುತ್ತೇನೆ.

ಎರಡೂ ಪಾಳಯಗಳ ಮಾತುಗಳನ್ನು ಕೇಳಿದ ನಂತರ ಕನ್ನಡಕ್ಕೆ ಡಬ್ಬಿಂಗ್ ಬೇಕು, ಆದರೆ ಅದನ್ನು ಒಂದು ನಿಯಂತ್ರಣದಲ್ಲಿಟ್ಟುಕೊಂಡೇ ತರಬೇಕು ಎಂದು ನಾನು ಬಯಸುತ್ತೇನೆ. ಡಿಸ್ಕವರಿ, ಅನಿಮಲ್ ಪ್ಲಾನೆಟ್‌ನಂಥ ಚಾನಲ್‌ಗಳು ಹಿಂದೆಯೇ ಕನ್ನಡಕ್ಕೆ ಬರಬೇಕಿತ್ತು. ಇಂದಾದರೂ ಅವು ಬರುವಂತೆ ಆಗಬೇಕು. ಯಾವುದೇ ಡಬ್ಬಿಂಗ್ ಸಿನಿಮಾ ಬಂದರೂ ಅದು ಕರ್ನಾಟಕದಲ್ಲಿ ತಯಾರಾಗಿಲ್ಲದ ಕಾರಣ ಅದಕ್ಕೆ ಶೇ.೧೦೦ರಷ್ಟು ತೆರಿಗೆ ವಿಧಿಸುವುದು ಸೂಕ್ತ. ಸಂವಿಧಾನಬದ್ಧವಾಗಿಯೇ ಒಂದಷ್ಟು ನಿಯಂತ್ರಣಗಳನ್ನು ಇಟ್ಟುಕೊಂಡು ಡಬ್ಬಿಂಗ್ ಚಿತ್ರ-ಕಾರ್ಯಕ್ರಮಗಳಿಗೆ ಅವಕಾ ನೀಡುವುದು ಅಸಾಧ್ಯವೇನಲ್ಲ. ಹೀಗಾದಲ್ಲಿ ಮೂಲ ಕನ್ನಡ ಸಿನಿಮಾಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ. ಮೂಲ ಕನ್ನಡ ಚಲನಚಿತ್ರಗಳನ್ನಷ್ಟೆ ಪ್ರದರ್ಶಿಸುವ ನೂರಾರು ಚಿತ್ರಮಂದಿರಗಳನ್ನು ಕರ್ನಾಟಕ ಸರ್ಕಾರವೇ ಕಟ್ಟುವಂತಾದರೆ ಕನ್ನಡ ಚಿತ್ರಗಳು ಯಾವ ಆತಂಕವನ್ನೂ ಪಡುವಂತಿರುವುದಿಲ್ಲ.

ಇದು ನನ್ನ ಕೆಲವು ಪ್ರಸ್ತಾಪಗಳು ಅಷ್ಟೆ. ಇಂಥ ಮಧ್ಯಮ ಮಾರ್ಗದ ಸೂತ್ರವನ್ನು ಕಂಡುಹಿಡಿಯಲು ಚರ್ಚೆಯೊಂದೇ ಪರಿಹಾರ. ಇಂಥ ಚರ್ಚೆಯನ್ನು ಮಾಡುವ ಬದಲು ‘ಎದೆ ಮೇಲೆ ಕಾಲಿಡುತ್ತೇನೆ’, ‘ತಲೆಹಿಡಿಯೋ ಕೆಲಸ ಮಾಡುತ್ತಿದ್ದೀರಿ’ ‘ಮೂರನೇ ಕಣ್ಣು, ನಾಲ್ಕನೇ ಕಣ್ಣು’ ಇತ್ಯಾದಿಯಾಗಿ ಮಾತನಾಡಿ ಚರ್ಚೆಯ ಹಾದಿಯನ್ನೇ ನಿರಾಕರಿಸುವುದು ಸರಿಯಲ್ಲ. ಕನ್ನಡ ಚಿತ್ರರಂಗದ ಗಣ್ಯರು ವಿವೇಕದಿಂದ ಮಾತನಾಡಬೇಕಿದೆ, ವ್ಯವಹರಿಸಬೇಕಿದೆ, ಕನ್ನಡ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕಿದೆ. ಯಾಕೆಂದರೆ ಡಬ್ಬಿಂಗ್ ವಿಷಯ ಕೇವಲ ಕನ್ನಡ ಚಿತ್ರೋದ್ಯಮಕ್ಕೆ ಸೇರಿದ ವಿಷಯವೇನಲ್ಲ, ಈ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ