Friday, October 31, 2008

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:: ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ



ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ನಾಡಿನ ಕನ್ನಡಿಗರಿಗೆಲ್ಲಾ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಭಿನಂದನೆಗಳು. ಕನ್ನಡಿಗರ ಈ ಯಶಸ್ಸಿನ ಸಂತಸದ ಈ ಶುಭ ಸಂದರ್ಭದಲ್ಲಿ ಶಾಸ್ತ್ರೀಯ ಭಾಷೆಗಾಗಿ ನಡೆದ ಹೋರಾಟಗಳತ್ತ ಒಮ್ಮೆ ಹಿಂತಿರುಗಿ ನೋಡಿದರೆ ಕನ್ನಡಿಗರ ಈ ಹಕ್ಕೊತ್ತಾಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಶ್ರೀ ಟಿ.ಏ ನಾರಾಯಣಗೌಡರ ದಿಟ್ಟ ನಾಯಕತ್ವದಲ್ಲಿ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ವಹಿಸಿದ ಮಹತ್ವದ ಪಾತ್ರ ಎದ್ದು ಕಾಣುತ್ತದೆ.

ಮೊದಲಿಗೆ ೨೦೦೪ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯು.ಪಿ.ಏ ಸರ್ಕಾರ ಡಿ.ಎಂ.ಕೆಯ ಸಹಕಾರದೊಂದಿಗೆ ಸರ್ಕಾರ ರಚಿಸಿದಾಗ ಮಾಡಿಕೊಂಡ ಕಾಮನ್ ಮಿನಿಮಮ್ ಪ್ರೋಗ್ರಾಮ್‌ನಲ್ಲಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದನ್ನೂ ಸೇರಿಸಿಕೊಂಡಿತ್ತು ಮತ್ತು ಅದರಂತೆಯೇ ತಮಿಳಿಗೆ ೨೦೦೪ರಲ್ಲಿ ಶಾಸ್ತ್ರೀಯ ಸ್ಥಾನಮಾನ ನೀಡಿತು. ಹಾಗೆ ನೀಡಲು ತಮಿಳು ಏನೆಲ್ಲಾ ಅರ್ಹತೆಗಳನ್ನು ಹೊಂದಿದೆಯೆಂಬುದಾಗಿ ವಿವರಿಸಿತು. ಮರುವರ್ಷವೇ ಸಂಸ್ಕೃತ ಭಾಷೆಗೆ ಇಂತಹ ಸ್ಥಾನವನ್ನು ನೀಡಲಾಯಿತು. ಕನ್ನಡ ನುಡಿಯೂ ಇಂತಹ ಅರ್ಹತೆಗಳನ್ನು ಹೊಂದಿರುವುದನ್ನು ಮನಗಂಡ ಅನೆಕ ಕನ್ನಡ ಸಾಹಿತಿಗಳು ಮೊದಲಿಗೆ ಈ ಬಗ್ಗೆ ಕನ್ನಡಿಗರ ಹಕ್ಕೊತ್ತಾಯ ಮಂಡಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ನೀಡಲು ಇರುವ ನಿಜವಾದ ಅಡ್ಡಿ ಅರ್ಹತೆ ಇರುವುದೋ ಇಲ್ಲದಿರುವುದೋ ಕಾರಣವಲ್ಲವೆಂದೂ ಅದಕ್ಕಿಂತ ಮಿಗಿಲಾದ ರಾಜಕೀಯ ಕಾರಣವೆಂಬುದನ್ನೂ ಮನಗೊಂಡು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಒತ್ತಾಯಿಸಿ ಮೈಸೂರಿನಲ್ಲಿ ಶ್ರೀ ದೇ.ಜವರೇಗೌಡರು ನವೆಂಬರ್ ೩೦, ೨೦೦೫ರಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. ಆ ಸಮಯದಲ್ಲಿ ಅಲ್ಲಿಗೆ ಧಾವಿಸಿ ಅವರಿಗೆ ಬೆಂಬಲ ಘೋಷಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರು. ಅಂದು ಈ ಹಕ್ಕೊತ್ತಾಯಕ್ಕೆ ಜನಾಂದೋಲನದ ರೂಪು ಕೊಡಲು ತೀರ್ಮಾನಿಸಲಾಯಿತು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟವನ್ನು ರೂಪಿಸಿ ಅದಕ್ಕೆ ಇಡಿಯ ಕನ್ನಡಿಗರ ಸ್ವಾಭಿಮಾನದ ಚಳವಳಿಯ ಸ್ವರೂಪ ನೀಡಿತು.

ಅಂದಿನಿಂದ ಇಂದಿನವರೆಗೂ ಕರ್ನಾಟಕ ರಕ್ಷಣಾ ವೇದಿಕೆಯು ಶ್ರೀ ನಾರಾಯಣಗೌಡರ ನಾಯಕತ್ವದಲ್ಲಿ ಶಾಸ್ತ್ರೀಯ ಭಾಷಾ ಚಳವಳಿಯನ್ನು ನಾನಾ ಹೋರಾಟಗಳ ಮೂಲಕ ನಡೆಸುತ್ತಾ ಬಂದಿತು. ಆ ದಾರಿಯತ್ತ ಒಮ್ಮೆ ಕಣ್ಣು ಹಾಯಿಸೋಣ. ೨೦೦೬ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಮೊದಲ ಬಾರಿಗೆ ರ್‍ಯಾಲಿಯೊಂದನ್ನು ನಡೆಸಲಾಯಿತು. ಸಾವಿರಾರು ಕನ್ನಡಿಗರ ದೊಡ್ದ ರ್‍ಯಾಲಿಯ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರಿಗೂ ಪ್ರಧಾನಿ ಮನ ಮೋಹನ್ ಸಿಂಗ್ ಅವರಿಗೂ ಕನ್ನಡಿಗರ ಹಕ್ಕೊತ್ತಾಯವನ್ನು ಸಲ್ಲಿಸಿತು. ಮುಂದೆ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಈ ಚಳವಳಿಯನ್ನು ವಿಸ್ತರಿಸಲಾಯಿತು. ರೈಲು ತಡೆ ಚಳವಳಿ, ಕೇಂದ್ರ ಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ದೆಹಲಿಯಲ್ಲಿ ರ್‍ಯಾಲಿ, ವಿಚಾರ ಸಂಕಿರಣ, ರಾಜಭವನ ಮುತ್ತಿಗೆ ಮೊದಲಾದ ಹಲವು ಹಂತಗಳನ್ನು ಈ ಚಳವಳಿ ಹಾದುಬಂದಿತು. ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಕ್ಕೊತ್ತಾಯಕ್ಕಾಗಿ ನಡೆಸಿದ ಕೆಲವು ಹೋರಾಟಗಳ ವಿವರಗಳು ಇಂತಿವೆ.

- ನವೆಂಬರ್ ೩೦, ೨೦೦೫ - ನಾಡೋಜ ಡಾ. ದೇಜಗೌ ಅವರ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಶ್ರೀ ನಾರಾಯಣ ಗೌಡರ ಭೇಟಿ ಮತ್ತು ಬೆಂಬಲ ಘೋಷಣೆ.

- ಫೆಬ್ರವರಿ ೫, ೨೦೦೬ - ನವದೆಹಲಿಯಲ್ಲಿ ಶಾಸ್ತ್ರೀಯ ಭಾಷೆಗಾಗಿ ಒತ್ತಾಯಿಸಿ ಸಾವಿರಾರು ಕನ್ನಡಿಗರ ಜಾಥಾ, ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂರಿಗೆ ಮನವಿ ಸಲ್ಲಿಕೆ.

- ನವೆಂಬರ್ ೧೪, ೨೦೦೭ರಂದು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅಂದು ಸೆಂಟ್ರಲ್ ಕಾಲೇಜು ಮೈದಾನದಿಂದ ರಾಜಭವನದ ವರೆಗೆ ಮೆರವಣಿಗೆಯಲ್ಲಿ ಸಾಗಿ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಚಳಿಗಾಲದ ಅಧಿವೇಶನದಲ್ಲಿಯೇ ಘೋಷಿಸುವಂತೆ ಮನವಿ ಸಲ್ಲಿಸಲಾಯಿತು

- ಆಗಸ್ಟ್ ೮ ರಿಂದ ಆಗಸ್ಟ್ ೧೪, ೨೦೦೮ - ತಮಿಳುನಾಡು ವಕೀಲ ಗಾಂಧಿ ಚೆನ್ನೈ ಹೈಕೋರ್ಟಿನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡದಂತೆ ತಡೆಯಾಜ್ಞೆ ತಂದುದರ ಹಿಂದೆ ಇದ್ದ ತಮಿಳುನಾಡಿನ ಹುನ್ನಾರವನ್ನು ಪ್ರತಿಭಟಿಸಿ ಐದು ದಿನಗಳ ಕಾಲ ನಿರಂತರವಾಗಿ ಬೆಂಗಳೂರು ಚೆನ್ನೈ ರೈಲುಗಳನ್ನು ತಡೆದು ಪ್ರತಿಭಟಿಸಲಾಯಿತು. ರಾಜ್ಯದ ಮಂಡ್ಯ, ತರಿಕೆರೆ, ಅರಸಿಕೆರೆ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಹಾಸನ, ತುಮಕೂರು, ಮೈಸೂರು, ಗುಲ್ಬರ್ಗಾ ಸೇರಿದಂತೆ ಇತರೆಡೆಗಳಲ್ಲೂ ತಮಿಳುನಾಡಿಗೆ ಇದ್ದ ಸಾರಿಗೆ ವ್ಯವಸ್ಥೆಯನ್ನು ತಡೆದು ಪ್ರತಿಭಟಿಸಿದ ಕಾರಣದಿಂದಾಗಿ ಅಲ್ಲಿನ ಮುಖ್ಯಮಂತ್ರಿಗಳಾದ ಕರುಣಾನಿಧಿಯವರು ಸ್ಪಷ್ಟೀಕರಣ ನೀಡಬೇಕಾಯಿತು.

- ಆಗಸ್ಟ್ ೧೧, ೨೦೦೮ರಂದು ಬೆಂಗಳೂರಿನಲ್ಲಿ ದೊಡ್ಡ ಜಾಥಾ ಒಂದನ್ನು ನಡೆಸಿ ತಮಿಳುನಾಡಿಗೆ ನೇರ ಎಚ್ಚರಿಕೆ ನೀಡಲಾಯಿತು

- ಆಗಸ್ಟ್ ೧೨, ೨೦೦೮ರಂದು ಕೇಂದ್ರ ಸರ್ಕಾರಿ ಕಛೇರಿಗಳ ಸಂಕೀರ್ಣವಾದ ಕೇಂದ್ರೀಯ ಸದನಕ್ಕೆ ಮುತ್ತಿಗೆ ಹಾಕಿ ಬೀಗ ಜಡಿಯುವ ಮೂಲಕ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಕ್ಕೊತ್ತಾಯದ ಚಳವಳಿಗೆ ಹೊಸ ರೂಪ ನೀಡಲಾಯಿತು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ಕಛೇರಿಗಳೆಲ್ಲದರ ಬೀಗ ಜಡಿದು ಪ್ರತಿಭಟಿಸಲಾಗುವುದೆಂಬ ಎಚ್ಚರಿಕೆಯನ್ನು ನೀಡಲಾಯಿತು

- ಆಗಸ್ಟ್ ೧೩, ೨೦೦೮ರಂದು ಬಿಎಸ್‌ಎನ್‌ಎಲ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

- ಆಗಸ್ಟ್ ೧೩, ೨೦೦ರಂದು ಗುಲ್ಬರ್ಗಾದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಉರುಳು ಸೇವೆಯನ್ನು ಮಡುವ ಮೂಲಕ ಶಾಸ್ತ್ರೀಯ ಭಾಷೆ ಸ್ತಾನಮಾನ ನೀಡುವಂತೆ ಒತ್ತಾಯಿಸಲಾಯಿತು.

- ಆಗಸ್ಟ್ ೧೫, ೨೦೦೮ರಂದು ಧಾರವಾಡದ ಪ್ರಧಾನ ಅಂಚೆಕಛೇರಿಗೆ ಬೀಗ ಜಡಿದು ಪ್ರತಿಭಟಿಸಲಾಯಿತು. ಅಂದು ಜಿಲ್ಲಾಧಿಕಾರಿಗಳಿಗೆ ಕನ್ನಡಿಗರ ಹಕ್ಕೊತ್ತಾಯವನ್ನು ದೊಡ್ಡ ಮೆರವಣಿಗೆಯಲ್ಲಿ ಸಾಗಿ ಸಲ್ಲಿಸಲಾಯಿತು.

- ಆಗಸ್ಟ್ ೧೯, ೨೦೦ರಂದು ಕನ್ನಡದ ಹೆಣ್ಣು ಮಕ್ಕಳು ಈ ಚಳವಳಿಯಲ್ಲಿ ಮಹತ್ವದ ನಡೆ ಇಟ್ತರು. ಕಡೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲುತಡೆ ಚಳವಳಿಯನ್ನು ಕನ್ನಡದ ಹೆಣ್ಣುಮಕ್ಕಳ ತಂಡ ನಡೆಸಿತು.

- ಆಗಸ್ಟ್ ೨೦, ೨೦೦೮ರಂದು ಚಾಮರಾಜಪೇಟೆಯ ಬಿಎಸ್‌ಎನ್‌ಎಲ್ ಕಛೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಲಾಯಿತು.

- ಆಗಸ್ಟ್ ೨೩, ೨೦೦೮ರಂದು ಜಾಲಹಳ್ಳಿಯ ಬಿಎಸ್‌ಎನ್‌ಎಲ್ ಕಛೇರಿಗೆ ಮುತ್ತಿಗೆ ಹಾಕಿ ಬೀಗ ಜದಿದು ಪ್ರತಿಭಟಿಸಲಾಯಿತು

- ಆಗಸ್ಟ್ ೨೫, ೨೦೦೮ರಂದು ಕರ್ನಾಟಕ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಬಾಯಿಗೆ ಬಟ್ಟೆ ಕಟ್ಟಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ವಿಳಂಬ ನೀತಿಯ ವಿರುದ್ಧ ಪ್ರತಿಭಟಿಸಿದರು.

- ಅಕ್ಟೋಬರ್ ೨೪, ೨೦೦೮ರಂದು ರಾಜಭವನಕ್ಕೆ ಸುಮಾರು ಹತ್ತು ಸಾವಿರ ಕನ್ನಡಿಗರು ಮುತ್ತಿಗೆ ಹಾಕಿದರು. ಅಲ್ಲಿ ನಡೆದ ಪೊಲೀಸ್ ಲಾಠಿ ಪ್ರಹಾರದಲ್ಲಿ ಅನೇಕ ಕಾರ್ಯಕರ್ತರು ಗಾಯಗೊಂಡರೂ ಬಿಡದೆ ರಾಜ್ಯಪಾಲರಿಗೆ ಕನ್ನಡಿಗರ ಹಕ್ಕೊತ್ತಾಯವನ್ನು ಸಲ್ಲಿಸಿ ಬರಲಾಯಿತು. ಮುಂದಿನ ದಿನಗಳಲ್ಲಿ ಚಳವಳಿಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಲಾಯಿತು.

ಇದೀಗ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದ್ದು ಇದು ಕನ್ನಡಿಗರ ಒಗ್ಗಟ್ಟಿಗೆ ದೊರೆತ ಮಹತ್ವದ ಪ್ರತಿಫಲವಾಗಿದೆ. ಕನ್ನಡಿಗರೇ, ಈ ಹೋರಾಟ ನಮಗೆ ಕಲಿಸುತ್ತಿರುವ ಪಾಠ ಮಹತ್ವದ್ದಾಗಿದೆ. ನಾವು ಒಂದಾಗಿ ನಿಂತರೆ ಜಗವನ್ನೇ ಗೆಲ್ಲಬಹುದು. ಕನ್ನಡಿಗರ ಒಗ್ಗಟ್ಟಿನ ಬಲದ ಮುಂದೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ. ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ನಡೆದ ಈ ಹೋರಾಟದ ಗೆಲುವಿನಿಂದ ಸ್ಪೂರ್ತಿ ಪಡೆಯೋಣ. ಸಮೃದ್ಧವಾದ ಶಾಂತಿ ಸುಖದ ಬೀಡಾದ ಕನ್ನಡನಾಡನ್ನು ಕಟ್ಟೋಣ.

Sunday, October 19, 2008

ಕನ್ನಡಿಗರಿಗೆ ಮೀಸಲಾತಿ ನೀಡುವವರೆಗೆ ರೈಲ್ವೇ ನೇಮಕಾತಿ ರದ್ದು.

ಕನ್ನಡಿಗರಿಗೆ ರೈಲ್ವೆ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕೆಂದು ಕರವೇ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಮೈಸೂರು ಮತ್ತು ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ನೇಮಕಾತಿಯನ್ನು ರದ್ದುಗೊಳಿಸಿ, ಕೇಂದ್ರ ರೈಲ್ವೆ ಇಲಾಖೆಗೆ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ.


































Wednesday, October 15, 2008

ರೈಲ್ವೆ ಗ್ರೂಪ್ ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿ ಅಕ್ಟೋಬರ್ 15 ರಂದು ನಡೆದ ಜಾಥಾ- ಗೃಹ ಮಂತ್ರಿಗೆ ನೀಡಿದ ಮನವಿ ಪತ್ರ




ರೈಲ್ವೆ ಗ್ರೂಪ್ ಡಿ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿ ಜಾಥಾ

ರೈಲ್ವೆ ಗ್ರೂಪ್ ಡಿ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಜಾಥಾವನ್ನು ಹಮ್ಮಿಕೊಂಡಿದ್ದೆವುಹುಬ್ಬಳ್ಳಿ, ಕಲ್ಬುರ್ಗಿ ಮತ್ತು ಬಳ್ಳಾರಿಯಲ್ಲಿಯೂ ಕೂಡ ರೈಲ್ವೆ ಗ್ರೂಪ್ ಡಿ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ಕೆಲಸ ಸಿಗದಿದ್ದಲ್ಲಿ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.












Monday, October 6, 2008

ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆಗಾಗಿ ಬೆಳಗಾವಿಯಲ್ಲಿ ಪ್ರತಿಭಟನೆ.

ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.