Wednesday, December 22, 2010

ರೈಲ್ವೆ ಹುದ್ದೆಗಳಿಗೆ ಕರ್ನಾಟಕದವರನ್ನೇ ನೇಮಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ರೈಲ್ವೆ ಇಲಾಖೆ ಈ ಬಾರಿ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದು ಕಳೆದಬಾರಿ 4701 ಸ್ಥಾನಗಳಿಗೆ ಅರ್ಜಿ ಹಾಕಿದ್ದವರೂ ಮತ್ತೊಮ್ಮೆ ಅರ್ಜಿ ಹಾಕಬಹುದು ಎನ್ನುವ ಮೂಲಕ ಹೊರರಾಜ್ಯದವರನ್ನು ಮತ್ತೊಮ್ಮೆ ಕರ್ನಾಟಕದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಹುನ್ನಾರ ನಡೆಸಿದೆ. ಈ ಹಿಂದೆಯೂ ರೈಲ್ವೆ ಇಲಾಖೆಯು 2007 ರಲ್ಲಿ ಡಿ ಗ್ರೂಪ ಹುದ್ದೆಗಳಿಗೆ ಬಿಹಾರಿಗಳನ್ನು ತುಂಬಲು ಮುಂದಾಗಿತ್ತು. ಆಗ ಅದನ್ನು ಪ್ರತಿಭಟಿಸಿ ಹೋರಾಟ ನಡೆಸಿದ್ದೆವು ಮತ್ತು ಕಳೆದ ೩ ವರ್ಷಗಳಿಂದ ಸತತವಾಗಿ ಈ ಬಗ್ಗೆ ಹೋರಾಟ ನಡೆಸುತ್ತಾ ಬಂದಿದ್ದೇವೆ.

ಇದೇ ಸಂಬಂಧವಾಗಿ ಈ ಬಾರಿ ನಡೆಸುವ ಪರೀಕ್ಷೆಗಳಿಗೆ ಕರ್ನಾಟಕದವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಹೊರ ರಾಜ್ಯದವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನೆನ್ನೆ ಮತ್ತೊಮ್ಮೆ ಬೆಂಗಳೂರಿನ ನೈರುತ್ಯ ರೈಲ್ವೆ ಕಚೇರಿ ಮುಂಭಾಗ ಹೋರಾಟ ನಡೆಸಿದೆವು.

ಅದೇ ಸಂದರ್ಭದಲ್ಲಿ ಕಳೆದ ವರ್ಷವೇ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ತೀರ್ಮಾನಿಸಿದಂತೆ ಇಲಾಖೆ ನಡೆಸುವ ಪರೀಕ್ಷೆಯನ್ನು ಕನ್ನಡಿಗರು ಕನ್ನಡದಲ್ಲೇ ಬರೆಯುವ ಅವಕಾಶ ಮತ್ತು ಇಡೀ ದೇಶದಲ್ಲಿ ಒಂದೇ ಸಮಯದಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆಯನ್ನು ಮುಂಬರುವ ಪರೀಕ್ಷೆಯಿಂದಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದೆವು. ಹೋರಾಟದ ಪತ್ರಿಕಾ ವರದಿಗಳನ್ನು ಕೆಳಗೆ ಲಗತ್ತಿಸಿದೆ.
Monday, December 20, 2010

ಫೇಸ್ ಬುಕ್ ನಲ್ಲಿ ಕರವೇ ಅಧ್ಯಕ್ಷರು

ಕಳೆದ ೧೦ ವರ್ಷಗಳಿಂದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯವಾದ ಸಮಯದಲ್ಲೆಲ್ಲಾ ಹೋರಾಟ ನಡೆಸುತ್ತಾ ಬಂದಿದ್ದೇವೆ. ಕರವೇ ಇಂದು ಕರ್ನಾಟಕದ ಒಂದು ಶಕ್ತಿಯಾಗಿ ಬೆಳೆಯಲು ನಾರಾಯಣಗೌಡರ ನಾಯಕತ್ವ ಪ್ರಮುಖ ಪಾತ್ರವನ್ನು ವಹಿಸಿದೆ.

ಅಂತರ್ಜಾಲದಲ್ಲಿರುವ ಕನ್ನಡಿಗರನ್ನು ತಲುಪಲು ನಾರಾಯಣಗೌಡರು ಫೇಸ್ ಬುಕ್ ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದು, ಇದು ನಾಡಿನ ಪ್ರಮುಖ ವಿಷಯಗಳ ಬಗ್ಗೆ ತಮ್ಮ ನಿಲುವುಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಸಹಾಯಕವಾಗಲಿದೆ.

ಟಿ.ಎ.ನಾರಾಯಣಗೌಡರ ಫೇಸ್ ಬುಕ್ ಖಾತೆ-http://www.facebook.com/profile.php?id=100001680460191

Monday, December 13, 2010

ಭ್ರಷ್ಟಾಚಾರ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ

ನಮ್ಮ ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ಆಡಳಿತ ದುರುಪಯೋಗದಿಂದ ನಾಡಿನೆಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ರಾಜ್ಯದ ಜನತೆ ಇದರಿಂದಾಗಿ ಹಲವು ತೊಂದರೆಗಳಿಗೆ ಒಳಗಾಗಿದ್ದಾರೆ. ಭ್ರಷ್ಟಾಚಾರದ ವಿಷಯವಾಗಿ ಕರ್ನಾಟಕ ಇಂದು ಎಲ್ಲರ ಮುಂದೆ ತಲೆತಗ್ಗಿಸುವ ಸ್ಥಿತಿ ತಲುಪಿದೆ.

ರಾಜ್ಯ ಸರಕಾರಲ್ಲಿ ನಡೆಯುತ್ತಿರುವ ಈ ಆಡಳಿತ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಡಿಸೆಂಬರ್ ೯ ರಂದು ನಾವು ನಾಡಿನ ಇತರ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದೆವು.

Tuesday, November 16, 2010

ಕನ್ನಡದಲ್ಲಿ ನಾಮಫಲಕ: ನಿಯಮ ಮೀರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ

ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಿಗೆ ಇರುವ ನಿಯಮ ೨೪ರ ಪ್ರಕಾರ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕಬಹುದಾಗಿದೆ. ಆದರೆ ನಮ್ಮ ನಾಡಿನ ರಾಜಕೀಯ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ನಿಯಮವಿದ್ದರೂ ನಿಯಮ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ನಿಯಮದ ಪೂರ್ಣ ಪ್ರಮಾಣದ ಜಾರಿಗೆ ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದೇ ನಿಟ್ಟಿನಲ್ಲಿ ೧೬-ನವೆಂಬರ್-೨೦೧೦ ರಂದು ಬೆಂಗಳೂರು ನಗರ ಪಾಲಿಕೆ ಕಛೇರಿಯ ಎದುರು ಪ್ರತಿಭಟನೆ ನಡೆಸಿ, ನಿಯಮವನ್ನು ಜಾರಿಗೆ ತರಬೇಕೆಂದು ಮತ್ತು ನಿಯಮವನ್ನು ಮೀರಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇವೆ.Tuesday, November 2, 2010

ಪ್ರಾದೇಶಿಕತೆಗೆ ಅಡ್ಡಿ ಪಡಿಸುತ್ತಿರುವ ರಾಷ್ಟ್ರೀಯ ಪಕ್ಷಗಳು

ರಾಷ್ಟ್ರೀಯ ಪಕ್ಷಗಳಾದ ಬಿ.ಜೆ.ಪಿ ಹಾಗು ಕಾಂಗ್ರೆಸ್ಸ್ ಹುಸಿ ರಾಷ್ಟ್ರೀಯತೆಯ ಕಲ್ಪನೆಯಲ್ಲಿ, ಪ್ರಾದೇಶಿಕತೆ ಹಾಗೂ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿವೆ. ಈ ರಾಜ್ಯದಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು, ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಹ ಹೈಕಮಾಂಡಿನ ಮುಂದೆ ಕೈ ಒಡ್ಡುವ ಪರಿಸ್ಥಿತಿ ಬಂದೊದಗಿದೆ. ನಾಡಿನ ಹಾಗೂ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ರೆಸಾರ್ಟ್ ರಾಜಕೀಯದಲ್ಲಿ ಮುಳುಗಿರುವ ಈ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಿಂದ ನಾಡಿನ ಅಭಿವೃದ್ಧಿ ನಿರೀಕ್ಷೆಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯತೆ ಇಂದು ಬಂದೊದಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾಗರಬಾವಿ ಘಟಕ ಏರ್ಪಡಿಸಿದ್ದ "ಕನ್ನಡೋತ್ಸವ"ದಲ್ಲಿ ಮಾತನಾಡಿದ ಶ್ರೀ ಟಿ. ಎ. ನಾರಾಯಣಗೌಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.

Monday, November 1, 2010

ಕನ್ನಡದಲ್ಲಿ ನಾಮಫಲಕ - ಕಾನೂನು ಮುರಿದದ್ದನ್ನು ಪ್ರತಿಭಟಿಸಿದ್ದಕ್ಕೇ ಬಂಧನ

ಕರ್ನಾಟಕದ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳಲ್ಲಿ ಇರಬೇಕಾದ ಕನ್ನಡದ ನಾಮಫಲಕದ ಕುರಿತು, ಕಾನೂನಿನ ನಿಯಮ ೨೪ರ ಅನ್ವಯ ಇರುವ ಸರ್ಕಾರಿ ಆಜ್ಞೆಯನ್ನು ಇಂದಿಗೂ ಉಲ್ಲಂಘಿಸುತ್ತಿರುವವರ ವಿರುದ್ಧ ಮತ್ತು ಕಾನೂನು ಮುರಿಯುವುದನ್ನು ಸುಮ್ಮನೆ ನೋಡಿಕೊಂಡಿರುವ ಸರ್ಕಾರದ ವಿರುದ್ಧ ಕರ್ನಾಟಕದ ರಾಜ್ಯೋತ್ಸವದ ದಿನವಾದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆವು. ಅದರ ಪತ್ರಿಕಾ ವರದಿಗಳನ್ನು ಲಗತ್ತಿಸಿದೆ.

ವಿಷಾದದ ಸಂಗತಿಯೆಂದರೆ ೧೯೮೫ ರಲ್ಲೇ ರಚನೆಯಾದ ಕಾನೂನು ೨೫ ವರ್ಷಗಳು ಕಳೆದರೂ ಜಾರಿಯಾಗದೆ, ನಿರಂತರವಾಗಿ ಕಾನೂನು ಮುರಿಯಲಾಗುತ್ತಿದ್ದು ಇಂದಿಗೂ ಇದರ ವಿರುದ್ಧ ಜನಸಾಮಾನ್ಯರು ಪ್ರತಿಭಟನೆ ನಡೆಸಬೇಕಾದ ದಯನೀಯ ಸ್ಥಿತಿ ಇದೆ. ಇದಕ್ಕಿಂತಲೂ ವಿಪರ್ಯಾಸದ ಸಂಗತಿಯೆಂದರೆ, ಕಾನೂನು ಮುರಿಯುತ್ತಿರುವವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವ ಸರ್ಕಾರ, ಬದಲಾಗಿ ಇದರ ವಿರುದ್ಧ ಪ್ರತಿಭಟಿಸಿದವರನ್ನೇ ಕಾನೂನು ಮುರಿದರೆಂದು ಆರೋಪಿಸಿ ಬಂಧಿಸುವ ಕಾರ್ಯಕ್ಕೆ ಮುಂದಾಗಿದೆ.

Sunday, October 24, 2010

ಎಂಇಎಸ್ ಪುಂಡಾಟಿಕೆ ವಿರುದ್ಧ ಪ್ರತಿಭಟನೆ

ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ದ ಎಂಇಎಸ್ ಪುಂಡರನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಯಿತು-

Thursday, October 21, 2010

ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಕಳಸಾ ಬಂಡೂರ ಯೋಜನೆಯು ಜಾರಿಗೆ ಬಂದಲ್ಲಿ ಹುಬ್ಬಳ್ಳಿ ಧಾರವಾಡ, ಗದಗ ಮತ್ತು ಇನ್ನು ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗಾಣುವುದು, ಇದಕ್ಕಾಗಿ ಈ ಯೋಜನೆಯು ಜಾರಿಗೆ ಬರಬೇಕೆಂದು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ.

ಇದೇ ನಿಟ್ಟಿನಲ್ಲಿ 21-10-2010 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒತ್ತಾಯಿಸಿದೆವು.

ಪ್ರತಿಭಟನೆಯ ಪತ್ರಿಕಾ ವರದಿಗಳು-
Sunday, October 3, 2010

ಟ್ವಿಟ್ಟರ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡದ ಬಂಧುಗಳೇ,
ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿರುವ ನೀವುಗಳು ಈಗ ಅಂತರ್ಜಾಲದಲ್ಲಿ ನಮ್ಮ ಸಂಪರ್ಕದಲ್ಲಿರುವುದು ತುಂಬಾ ಸಂತೋಷದ ವಿಷಯ. ಇದರ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆ "ಟ್ವಿಟ್ಟರ್"ನಲ್ಲೂ ಸಹ ತನ್ನ ಖಾತೆಯನ್ನ ಹೊಂದಿದೆ, ಇಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಚುಟುಕು ಸುದ್ದಿಗಳು, ನಾಡಿನ ಪ್ರಮುಖ ವಿಷಯಗಳ ಬಗ್ಗೆ ನಮ್ಮ ನಿಲುವು ಹಾಗೂ ನಿಮ್ಮ ಧ್ವನಿಯನ್ನು ನಮಗೆ ಮುಟ್ಟಿಸಲು ಇರುವ ಒಂದು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ನಮ್ಮನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸಲು ಈ ಕೊಂಡಿಗೆ ಭೇಟಿ ನೀಡಿ..

http://twitter.com/karave_krv

Tuesday, September 14, 2010

ಹಿಂದಿ ದಿವಸ/ಸಪ್ತಾಹ ದ ವಿರುದ್ಧ ಪ್ರತಿಭಟನೆ

ಪ್ರತಿವರ್ಷ ಸೆಪ್ಟೆಂಬರ್ ೧೪ರಂದು ಭಾರತದಾದ್ಯಂತ ಹಿಂದಿ ದಿವಸ್ ಅನ್ನು ಕೇಂದ್ರ ಸರ್ಕಾರ ಆಚರಿಸಿಕೊಂಡು ಬಂದಿದೆ.
ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ಕಾರ್ಯನಿರತರಾಗಿರುವ ಕೇಂದ್ರ ಸರ್ಕಾರದ ನೌಕರರು ಯಾವ ಮಟ್ಟಿಗೆ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸಿ ಬಳಸುತ್ತರೆನ್ನುವ ಬೆಗ್ಗೆ ವಿಶೇಷ ಒತ್ತು ನೀಡಿ ಈ ದಿನದಂದು ಹಿಂದಿ ಪ್ರಚಾರಕರಿಗೆ ಸನ್ಮಾನಿಸಲಾಗುತ್ತದೆ.
ಈ ಎಲ್ಲ ಆಚರಣೆಗಳನ್ನು ಸಾರ್ವಜನಿಕರ ತೆರಿಗೆ ಹಣ ಬಳಸಿ ಭಾರತ ಸರ್ಕಾರ ಆಚರಿಸುತ್ತಿದೆ. ಈ ಮೂಲಕ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಬಳಕೆಯನ್ನು ನಿರಂತರವಾಗಿ ಹೆಚ್ಚಿಸಲು ಯೋಜನೆಗಳನ್ನು ಹಾಕಿಕೊಂಡು ಹೆಜ್ಜೆಹೆಜ್ಜೆಯಾಗಿ ಜಾರಿಮಾಡುತ್ತಿದೆ. ಇದರಿಂದಾಗಿ ಕನ್ನಡಿಗರ ಶಿಕ್ಷಣ, ಉದ್ಯೋಗ, ವ್ಯಾಪಾರ ವಹಿವಾಟುಗಳಲ್ಲಿ ಹಿಂದೀ ಹೇರಿಕೆ ನಡೆಯುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯು, ಕೇಂದ್ರಸರ್ಕಾರದ ಈ ಅನ್ಯಾಯದ ಭಾಷಾನೀತಿಯನ್ನೂ, ಅದರಿಂದಾಗುತ್ತಿರುವ ಹಿಂದಿ ಹೇರಿಕೆಯನ್ನೂ ತೀವ್ರವಾಗಿ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಸೆಪ್ಟೆಂಬರ್ ೧೪ನ್ನು ಹಿಂದೀ ಹೇರಿಕೆ ವಿರೋಧಿ ದಿನವನ್ನಾಗಿ ಆಚರಿಸುತ್ತಿದೇವೆ. ಈ ವರ್ಷವೂ ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ನಡಸಲಾಯಿತು.
ಬೆಂಗಳೂರಿನಲ್ಲಿ ಮಾನ್ಯ ರಾಜ್ಯಪಾಲರಿಗೆ ಹಿಂದೀ ಹೇರಿಕೆಯ ದುಷ್ಪರಿಣಾಮಗಳನ್ನು ವಿವರಿಸಿ ಕನ್ನಡಿಗರ ಪ್ರತಿರೋಧ ವ್ಯಕ್ತಪಡಿಸುವ ಆಗ್ರಹಪೂರ್ವಕವಾದ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯಪಾಲರಿಗೆ ನೀಡಿದ ಮನವಿ ಪತ್ರ -

ಪತ್ರಿಕಾ ವರದಿಯನ್ನು ಇಲ್ಲಿ ನೋಡಿ-

Thursday, September 9, 2010

ತಡೆ ರಹಿತ ಹಿಂದಿ ಹೇರಿಕೆ ನಿಲ್ಲಲಿ

೨೦೦೯ ರ ಸೆಪ್ಟೆಂಬರ್ ನಲ್ಲಿ ಹಿಂದಿ ಹೇರಿಕೆ ವಿರುದ್ಧ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಮನದಾಳದ ಮಾತು

ಅಕ್ಕರೆಯ ಕನ್ನಡಿಗ,

ಆಗಸ್ಟ್ ತಿಂಗಳಲ್ಲಿ ಭಾರತದ ಎಲ್ಲೆಡೆ ಸ್ವಾತಂತ್ರದ ಹಬ್ಬವನ್ನು ನಮಗೆ ಬಿಡುಗಡೆ ದೊರೆತ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇದರ ಮರು ತಿಂಗಳಲ್ಲೇ ಸ್ವಾತಂತ್ರ್ಯವೆಂಬ ಪದದ ವಿಡಂಬನೆ ಮಾಡುವಂತೆ ನಮ್ಮ ಸ್ವಾತಂತ್ರ ಕಸಿದುಕೊಳ್ಳುವುದರ ಗುರುತಾದ ಹಿಂದಿ ದಿನಾಚರಣೆ, ಹಿಂದಿ ಸಪ್ತಾಹ, ಹಿಂದಿ ಪಕ್ಷಗಳನ್ನು ಆಚರಿಸಲಾಗುತ್ತಿರುವುದನ್ನು ಕಂಡಾಗ ವಿಪರ್ಯಾಸವೆನಿಸುತ್ತದೆ. ಹೌದು, ಸೆಪ್ಟೆಂಬರ್ ೧೪ರಂದು ಹಿಂದಿ ದಿನಾಚರಣೆಯ ಹೆಸರಲ್ಲಿ ಭಾರತ ಸರ್ಕಾರದ ಕೃಪಾಪೋಷಿತ ಅನೇಕ ಕಾರ್ಯಕ್ರಮಗಳನ್ನು ಭಾರತದ ತುಂಬ ನಡೆಸಲಾಗುತ್ತದೆ. ನಮ್ಮ ನಾಡಿನೊಳಗೇ ನಮ್ಮ ಅಸ್ತಿತ್ವಕ್ಕೆ ಸಂಚಕಾರ ತಂದಿರುವ, ಹಿಂದಿಯೇತರರನ್ನು ಭಾರತದ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿರುವ ಭಾರತದ ಭಾಷಾನೀತಿಯನ್ನು ಈ ದಿನವು ಪ್ರತಿನಿಧಿಸುತ್ತದೆ. ನಮ್ಮ ಸ್ವಾತಂತ್ರ ಹರಣದ ಪ್ರತೀಕವಾದ ಈ ಹಿಂದೀ ದಿನಾಚರಣೆಯನ್ನು ಕನ್ನಡಿಗರೆಲ್ಲಾ ವಿರೋಧಿಸಬೇಕಾಗಿದೆ.

ಭಾರತದ ಒಗ್ಗಟ್ಟು ಉಳಿಯಲು ಸಾಮಾನ್ಯ ಸಂಪರ್ಕ ಭಾಷೆಯಾಗಿ ಹಿಂದಿ ಇರಬೇಕು ಎನ್ನುವವರ ಜೊತೆಯಲ್ಲೇ, ಭಾರತ ಕೇಂದ್ರಸರ್ಕಾರದ ಅಧಿಕೃತ ಆಡಳಿತ ಭಾಷೆ ಎನ್ನುವ ಕಾರಣವೂ ಬೆರೆತುಕೊಂಡು ಕನ್ನಡನಾಡಿನ ಮೂಲೆಮೂಲೆಯಲ್ಲಿರೋ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದಿ ಹಬ್ಬವನ್ನು ಆಚರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಎಸಗುವ ಅಪಮಾನವಾಗಿದೆ. ಕನ್ನಡ ನಾಡಿನ ಸರ್ಕಾರವೂ ತ್ರಿಭಾಷಾ ಸೂತ್ರದ ಹೆಸರಲ್ಲಿ ಕನ್ನಡದ ಮಕ್ಕಳಿಗೆ ಬೇಡದೆಯೇ ಹಿಂದಿ ಕಲಿಕೆಯನ್ನು ಹೇರುತ್ತಿರುವುದು ಶೋಚನೀಯವಾಗಿದೆ. ಇಂಥಹ ಭಾಷಾನೀತಿಯ ಕಾರಣದಿಂದಾಗಿ ನಾಡಿನ ಮೇಲಾಗುತ್ತಿರುವ ದುಷ್ಪರಿಣಾಮಗಳು ಅನೇಕ. ತಡೆಯಿರದ ವಲಸೆ, ರೇಲ್ವೇ, ಬ್ಯಾಂಕು ಮೊದಲಾದ ಕಡೆಗಳಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳಿಗೆ ಹೊಡೆತ, ನಮ್ಮೂರಿನ ಅಂಗಡಿ ಮುಂಗಟ್ಟುಗಳಲ್ಲಿ ನಮ್ಮವರಿಗೆ ಹಿಂದಿ ಬರದೆ ಕೆಲಸ ಸಿಗದೆಂಬ ದುಸ್ಥಿತಿ, ಬಾಲ್ಯದಿಂದಲೇ ಕಲಿಕೆಯ ಹೊರೆ… ಇವೆಲ್ಲವೂ ನಮ್ಮ ನಾಡಿನಲ್ಲೇ ನಮ್ಮ ನುಡಿಯನ್ನು ಮೂಲೆಗುಂಪಾಗಿಸುವ ಪ್ರಯತ್ನಗಳೆಂಬುದನ್ನು ನಾಡಿಗರು ಗುರುತಿಸಬೇಕಾಗಿದೆ. ಹಿಂದಿ ಹೇರಿಕೆಗೆ ಮನರಂಜನಾ ಮಾಧ್ಯಮವನ್ನು ಬಳಸಿದಷ್ಟೇ ಪರಿಣಾಮಕಾರಿಯಾಗಿ ಸರ್ಕಾರಿ ಕಛೇರಿಗಳನ್ನೂ ಬಳಸಲಾಗುತ್ತಿದೆ. ಹಿಂದಿ ದಿನಾಚರಣೆ ಹೆಸರಲ್ಲಿ ಹಿಂದಿ ಕಲಿಯಲು ಪ್ರೋತ್ಸಾಹ, ಬಹುಮಾನ, ಭಡ್ತಿಯಂತಹ ಆಮಿಷಗಳನ್ನು ಒಂದೆಡೆ ಬಳಸಲಾಗುತ್ತಿದೆ. ಬ್ಯಾಂಕುಗಳೂ ಸೇರಿದಂತೆ ಪ್ರತಿವರ್ಷ ಇಂತಿಷ್ಟು ಪ್ರಮಾಣದಲ್ಲಿ ಹಿಂದಿಯ ಅನುಷ್ಠಾನ ಮಾಡಬೇಕೆಂಬ ವಾರ್ಷಿಕ ಗುರಿಗಳ ಮೂಲಕ ಆಡಳಿತಾತ್ಮಕ ಹೇರಿಕೆ ನಡೆದಿದೆ. ಭಾರತದ ಯಾವುದೇ ಮೂಲೆಯಲ್ಲಿನ ಯಾವುದೇ ಕೇಂದ್ರಸರ್ಕಾರಿ ಕಛೇರಿಯಲ್ಲಿ ಹಿಂದಿಯಲ್ಲಿ ಸೇವೆ ನೀಡದಿರುವುದು ಅಪರಾಧವೆನ್ನುವ ಬೆದರಿಕೆಗಳ ಮೂಲಕವೂ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಕನ್ನಡಿಗರಾದ ನಾವು ಹಿಂದಿ ಸಾಮ್ರಾಜ್ಯ ಸ್ಥಾಪನೆಯ ಈ ಹುನ್ನಾರವನ್ನು ಅರಿತು ಹಿಂದಿ ಹೇರಿಕೆಯನ್ನು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನೆಲ್ಲ ಕನ್ನಡಿಗರಲ್ಲಿ ಹಿಂದಿ ಹೇರಿಕೆಯ ಬಗ್ಗೆ, ಅದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ, ನಮ್ಮ ಅಸ್ತಿತ್ವವೇ ಇಲ್ಲವಾಗುವ ಬೆದರಿಕೆಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಕನ್ನಡಿಗರೇ, ಹಿಂದಿ ಹೇರಿಕೆಯನ್ನು ನಾವಿಂದು ತಡೆಯದಿದ್ದರೆ ನಾಳೆ ನಮ್ಮ ನಾಡಿನಲ್ಲಿ ನಾವೇ ಅನಾಥರಾಗಬೇಕಾದೀತು ಎಂಬುದನ್ನು ಅರಿತು ಒಂದಾಗಿ ಹಿಂದಿ ಹೇರಿಕೆಯನ್ನು ವಿರೋಧಿಸೋಣ.

ವಂದನೆಗಳು.

ಟಿ. ಏ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

Monday, September 6, 2010

ಹಿಂದಿ ದಿವಸದ ವಿರುದ್ಧ ಪ್ರತಿಭಟನೆ

೨೦೦೮ ರಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಸಿದ ಹೋರಾಟಗಳ ಬಗ್ಗೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಮನದಾಳದ ಮಾತು-

ಸ್ವಾಭಿಮಾನಿ ಕನ್ನಡಿಗರೇ,

ಕಳೆದ ವಾರ ಕರ್ನಾಟಕದ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕೇಂದ್ರಸರ್ಕಾರದ ಅಧಿಸೂಚನೆಯಂತೆ ನಡೆಸಲು ಉದ್ದೇಶಿಸಲಾಗಿದ್ದ ಹಿಂದಿ ದಿನದ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತು. ಯಾವ ದೇಶ ಸಮಾನತೆಯ ಆಧಾರದ ಮೇಲೆ ನಿಲ್ಲಬೇಕಿತ್ತೋ ಅದು ಒಂದು ಜನಾಂಗದ ಭಾಷೆಯನ್ನು ಮತ್ತೊಂದು ಜನಾಂಗದ ಮೇಲೆ ಹೇರಲಾಗುತ್ತಿರುವುದು ಮತ್ತು ಭಾರತದೇಶದ ಕೇಂದ್ರಸರ್ಕಾರಿ ಆಡಳಿತ ಯಂತ್ರವೇ ಈ ಕೆಲಸ ನಡೆಸುತ್ತಿರುವುದು ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಎಂಬ ಪದಗಳಿಗೆ ಎಸಗಿದ ಘೋರ ಅಪಚಾರವಾಗಿದೆ.

ಹಿಂದಿಯೆನ್ನುವ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಶಾಲೆಗಳಲ್ಲಿ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಹೇಳಿಕೊಡಲಾಗುತ್ತಿರುವುದನ್ನೂ, ಆ ಮೂಲಕ ಎಳವೆಯಲ್ಲೇ ಕನ್ನಡದ ಬಗ್ಗೆ ಕೀಳರಿಮೆ ಹುಟ್ಟುಹಾಕುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಭಾರತೀಯ ಸಂವಿಧಾನದ ೩೪೩(೧)ರಿಂದ ೩೫೧ನೇ ಪರಿಚ್ಛೇದಗಳವರೆಗಿನ ಸಾಲುಗಳು ಭಾರತ ಒಕ್ಕೂಟದಲ್ಲಿನ ಭಾಷೆಗಳ ಬಗ್ಗೆ ತಿಳಿಸುತ್ತಿದೆ. ಜೊತೆಯಲ್ಲಿನ ಸಂವಿಧಾನದ ಎಂಟನೆ ಪಟ್ಟಿಯಲ್ಲಿ ಮಾನ್ಯತೆ ಇರುವ ಭಾಷೆಗಳ ಹೆಸರುಗಳೂ ಇವೆ. ಈ ಯಾವುದರಲ್ಲೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯಲಾಗಿಲ್ಲ. ಅಷ್ಟೇಕೆ, ಸಂವಿಧಾನದ ಯಾವ ಸಾಲಿನಲ್ಲೂ ಹಿಂದಿಯನ್ನು ರಾಷ್ಟ್ರಭಾಷೆಯೆನ್ನಲಾಗಿಲ್ಲ. ಆದರೂ ಹೀಗೆ ಸುಳ್ಳೇ ಪ್ರಚಾರ ಮಾಡುವುದಾದರೂ ಏಕೆ? ಅಕಸ್ಮಾತ್ ಭಾರತ ದೇಶ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಒಪ್ಪಿದ್ದರೂ ಕೂಡಾ ನಾವು ಅದನ್ನು ವಿರೋಧಿಸುತ್ತಿದ್ದೆವು. ಯಾಕೆಂದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಆಡಳಿತ ಭಾಷೆ. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಎಲ್ಲವನ್ನೂ ನಾವು ವಿರೋಧಿಸುತ್ತೇವೆ.

ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರ್ಕಾರಿ ಪ್ರಾಯೋಜಿತ ಈ ಹಿಂದಿ ಭಾಷೆಯ ಪ್ರಸಾರವನ್ನು ನಮ್ಮ ಮೇಲಿನ ಹಿಂದಿ ಹೇರಿಕೆಯೆಂದೇ ಗುರುತಿಸುತ್ತದೆ. ಏಕೆಂದರೆ ಹಿಂದಿಯೆನ್ನುವ ನಮಗೆ ಸಂಬಂಧವಿಲ್ಲದ ನುಡಿಯನ್ನು ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ತ್ರಿಭಾಷಾ ಸೂತ್ರವನ್ನು ಒಪ್ಪುವ ಮೂಲಕ ನಾಡಿಗರಿಗೆ ನಮ್ಮ ರಾಜ್ಯ ಸರ್ಕಾರಗಳೂ ಕೂಡಾ ಜನತೆಗೆ ತೀವ್ರ ಅನ್ಯಾಯ ಮಾಡಿವೆ. ಹಿಂದಿ ಭಾಷಿಕರು ನಮ್ಮ ನಾಡಿಗೆ ವಲಸೆ ಬಂದಲ್ಲಿ ಅವರಿಗೆ ಯಾವ ರೀತಿಯ ತೊಂದರೆಯೂ ಅಗದಿರಲಿ ಎನ್ನುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿರುವುದು ನಮಗೆ ಕಾಣುತ್ತಿದೆ. ಅಫಿಷಿಯಲ್ ಲಾಂಗ್ವೇಜ್ ಆಕ್ಟ್ ಎಂಬ ಕಾಯ್ದೆಯ ಮೂಲಕ ಹಿಂದಿ ಪ್ರಸಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ತಮಿಳುನಾಡಿಗೆ ಮಾತ್ರಾ ಈ ಕಾಯಿದೆ ಅನ್ವಯವಾಗುವುದಿಲ್ಲ ಎನ್ನುವ ಇಬ್ಬಗೆಯ ನಿಲುವು ತಳೆದಿದೆ. ಈ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಕನ್ನಡ ನಾಡಿಗೂ ಈ ಕಾಯ್ದೆಯಿಂದ ಬಿಡುಗಡೆ ಸಿಗಲಿ ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ.

ಕನ್ನಡ ನಾಡಿನ ಕೇಂದ್ರ ಸರ್ಕಾರಿ ಕಲಿಕಾ ಸಂಸ್ಥೆಗಳಾದ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಮುಂತಾದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ನಮ್ಮ ನಾಡಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯವಾಗಬೇಕು. ಕನ್ನಡ ಬಾರದ, ಹೊರನಾಡಿನಿಂದ ಉದ್ಯೋಗದ ಮೇಲೆ ನಮ್ಮ ನಾಡಿಗೆ ಬರುವವರಿಗೆ ಕನ್ನಡ ಕಲಿಯುವುದನ್ನೂ, ಕನ್ನಡದಲ್ಲಿ ಆಡಳಿತ ನಡೆಸುವುದನ್ನು ಕಡ್ಡಾಯ ಮಾಡಬೇಕು. ಕೇಂದ್ರ ಸರ್ಕಾರಿ ಕಛೇರಿಗಳ ಎಲ್ಲಾ ಅರ್ಜಿ, ನಮೂನೆ, ಸೂಚನೆಗಳು ಕನ್ನಡದಲ್ಲಿರಬೇಕು.

ಕರ್ನಾಟಕದ ಕೇಂದ್ರಸರ್ಕಾರಿ ಹುದ್ದೆಗಳಿಗೆ ನಡೆಸುವ ಬರಹದ ಮತ್ತು ಮೌಖಿಕ ಪರೀಕ್ಷೆಗಳು ಕನ್ನಡದಲ್ಲಿರಬೇಕು. ಹಿಂದಿ ಭಾಷೆಯನ್ನು ಕಲಿತಿರಬೇಕು ಹಾಗೂ ಹಿಂದಿಯಲ್ಲಿ ಅರ್ಜಿ ಸಲ್ಲಿಸಬೇಕು ಅನ್ನುವಂತಹ ನಿಯಮಗಳನ್ನು ನೇಮಕಾತಿಯಿಂದ ಕೈಬಿಡಬೇಕು. ಕೇಂದ್ರ ಸರ್ಕಾರಿ ನೌಕರಿಗೆ ನಡೆಸುವ ಸಂದರ್ಶನಗಳಲ್ಲಿ ಕನ್ನಡದಲ್ಲಿ ಉತ್ತರಿಸುವ ಹಕ್ಕು ಅಭ್ಯರ್ಥಿಗಳಿಗಿರಬೇಕು. ನಮ್ಮ ನಾಡಿನಲ್ಲಿ ಇರುವ ಹಾಗೂ ಹೊಸದಾಗಿ ಆರಂಭವಾಗುವ ಎಲ್ಲ ಕೇಂದ್ರ ಸರ್ಕಾರಿ ಹುದ್ದೆಗಳನ್ನು ನಮ್ಮ ನಾಡಿನವರಿಗೇ ಕೊಡಬೇಕು. ಸಾರ್ವಜನಿಕ ಸಂಪರ್ಕ ಬರುವ ಎಲ್ಲ ಕಡೆಗಳಲ್ಲಿ ಕನ್ನಡದ ಸೂಚನೆಗಳನ್ನು ಕಡ್ಡಾಯವಾಗಿ ಹಾಕಬೇಕು ಎನ್ನುವ ಹಕ್ಕೊತ್ತಾಯ ಮಾಡುತ್ತೇವೆ.

ಕನ್ನಡಿಗರ ಮೇಲಾಗುತ್ತಿರುವ ಎಲ್ಲ ರೀತಿಯ ಹಿಂದಿ ಹೇರಿಕೆಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂಬ ಸಂದೇಶವನ್ನು ಸಾಂಕೇತಿಕವಾಗಿ ಹಿಂದಿ ದಿವಸವನ್ನು ಪ್ರತಿಭಟಿಸುವ/ ಬಹಿಷ್ಕರಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಕರ್ನಾಟಕ ರಾಜ್ಯಸರ್ಕಾರವೂ ಕೂಡಾ ಈ ಕೂಡಲೇ ತ್ರಿಭಾಷಾ ಸೂತ್ರದ ನೀತಿಯಿಂದ ಹಿಂದೆ ಸರಿಯಬೇಕೆಂದೂ ಒತ್ತಾಯಿಸುತ್ತೇವೆ.

ಕನ್ನಡಿಗರೇ, ಹಿಂದಿಯನ್ನು ಒಪ್ಪುವ ಮೂಲಕ ನಮ್ಮ ನಾಡಿನಲ್ಲಿ ನಾವೇ ಅನಾಥರಾಗುವ ದಿನಗಳು ಮುಂದೆ ಬರದಂತೆ ತಡೆಯಲು, ನಮ್ಮ ನಾಡಿನ ಸಾರ್ವಭೌಮ ಭಾಷೆಗೆ ಧಕ್ಕೆ ಬರದಂತೆ ತಡೆಯಲು, ನಮ್ಮ ಮಕ್ಕಳ ಉದ್ಯೋಗಾವಕಾಶಗಳು ಹಿಂದಿ ಜನಗಳ ಪಾಲಾಗದಿರಲು ಇಂದೇ ನಾವು ಈ ಹಿಂದಿ ಹೇರಿಕೆಯನ್ನು ಶತಾಯ ಗತಾಯ ತಡೆಯಬೇಕಾಗಿದೆ. ನಾಡಹಿತ ಕಾಪಾಡಲು ನಡೆಸಲಾಗುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಿರೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇನೆ.

ವಂದನೆಗಳು
ಟಿ.ಏ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Thursday, September 2, 2010

ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ.


ಡಾ. ಸರೋಜಿನಿ ಮಹಿಷಿರವರು ಕರ್ನಾಟಕದಲ್ಲಿರುವ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ನೀಡಿಕೆಯಲ್ಲಿ ಆದ್ಯತೆಯಿರಬೇಕೆಂಬ ಶಿಫಾರೆಸ್ಸನ್ನು ಒಳಗೊಂಡ ವರದಿಯನ್ನು ಎರಡು ದಶಕಗಳ ಹಿಂದೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು. ಈ ವರದಿಯನ್ನು ಜಾರಿಗೆ ತಂದರೆ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರೆಯುವುದಂತು ನಿಜ. ಆದರೆ ನಮ್ಮ ನಾಡಿನಲ್ಲಿ ಸರಕಾರ ನಡೆಸಿರುವ ಮತ್ತು ನಡೆಸುತ್ತಿರುವ ರಾಜಕಾರಣಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಸರೋಜಿನಿ ಮಹಿಷಿರವರ ವರದಿ ಇಷ್ಟು ವರ್ಷವಾದರೂ ಜಾರಿಗೆ ಬಂದಿಲ್ಲ.

ಡಾ.ಸರೋಜಿನಿ ಮಹಿಷಿಯವರ ವರದಿಯನ್ನು ಜಾರಿಗೆ ತಂದು ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಹೆಚ್ಚಿನ ಉದ್ಯೋಗವಕಾಶ ದೊರೆಕಿಸಿಕೊಡಬೇಕಾದುದ್ದು ರಾಜ್ಯ ಸರಕಾರದ ಆದ್ಯ ಕರ್ತವ್ಯ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಯು ಡಾ.ಸರೋಜಿನಿ ಮಹಿಷಿಯವರ ವರದಿಯನ್ನು ಜಾರಿಗೆ ತರಬೇಕೆಂದು ನಿರಂತರವಾಗಿ ರಾಜ್ಯಸರಕಾರವನ್ನು ಒತ್ತಾಯಿಸುತ್ತಾ ಬಂದಿದೆ.

ಇದೇ ನಿಟ್ಟಿನಲ್ಲಿ ಕರವೇ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ೨-೯-೨೦೧೦ ರಂದು ಪ್ರತಿಭಟನೆ ನಡೆಸಿ ಸರೋಜಿನಿ ಮಹಿಷಿಯವರ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
Monday, August 23, 2010

ವೆಂಕಯ್ಯನಾಯ್ಡು ಕನ್ನಡ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ

ವೆಂಕಯ್ಯನಾಯ್ಡು ಕರ್ನಾಟಕದಿಂದ ಸತತವಾಗಿ ೩ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಿದ್ದರೂ ಅವರು ಸಂಸತ್ತಿನಲ್ಲಿ ನಾಡಿನ ಪರವಾಗಿ ಎಂದೂ ದನಿ ಎತ್ತದಿರುವುದು ಖಂಡನೀಯ. ಇದರ ಜೊತೆಗೆ ಹಿಂದಿನಿಂದಲೂ ಕನ್ನಡವನ್ನು ಕಲಿಯದೇ, ತೆಲುಗಿನಲ್ಲಿ ಭಾಷಣ ಮಾಡುವುದರ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣುಕುತ್ತಾ ಬಂದಿದ್ದಾರೆ. ಈ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಬಾರಿ ಪ್ರತಿಭಟನೆ ನಡೆಸಿದೆ.

ವೆಂಕಯ್ಯನಾಯ್ಡು ಮೊನ್ನೆ ನಡೆದ ಬಿಜೆಪಿಯ ಬಳ್ಳಾರಿ ಸಮಾವೇಶದಲ್ಲಿಯೂ ಸಹ ತೆಲುಗಿನಲ್ಲಿ ಭಾಷಣ ಮಾಡಿ ಮತ್ತೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ, ವೆಂಕಯ್ಯನಾಯ್ಡುರವರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ನಮ್ಮ ಕಾರ್ಯಕರ್ತರು ೨೧-೮-೨೦೧೦ ರಂದು ಪ್ರತಿಭಟನೆ ನಡೆಸಿದ್ದಾರೆ.

Sunday, August 8, 2010

ಕ.ರ.ವೇ. ಇಂದ ಕವನ ಸಂಕಲನಗಳ ಬಿಡುಗಡೆ

ಕನ್ನಡ ನಾಡಿನ ನೆಲ, ಜಲ, ನಾಡಿನ ಜ್ವಲಂತ ಸಮಸ್ಯೆಗಳು ಮತ್ತು ಕನ್ನಡ ನಾಡಿನ ಇತಿಹಾಸ, ಕಲೆ, ಸಂಸ್ಕೃತಿ ಹಾಗೂ ಇತರೆ ವಿಷಯಗಳು ಸಾಹಿತ್ಯದ ರೂಪದಲ್ಲಿ ಹೊರಬಂದಲ್ಲಿ ಆ ವಿಷಯಗಳು ಹೆಚ್ಚು ಜನರನ್ನು ತಲುಪುತ್ತವೆ. ಈ ನಿಟ್ಟಿನಲ್ಲಿ ಕರವೇ ಕನ್ನಡದ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಲು 'ಗಂಗಾ' ಪ್ರಕಾಶನವನ್ನು ಹುಟ್ಟು ಹಾಕಿ, ಪುಸ್ತಕಗಳನ್ನ ನಾಡಿನ ಜನರಿಗೆ ತಲುಪಿಸುವ ಪಣ ತೊಟ್ಟಿದೆ.

ಇದರ ಮೊದಲ ಹೆಜ್ಜೆಯಾಗಿ ನಿವೃತ್ತ ಸರಕಾರಿ ಅಧಿಕಾರಿ ಮಲ್ಲಿಕಾರ್ಜುನಪ್ಪ ನವರು ಬರೆದಿರುವ 'ಚಿತ್ತ ಎತ್ತ' ಮತ್ತು 'ಭಾವಯಾನ' ಎಂಬ ಕವನ ಸಂಕಲನಗಳನ್ನು ರಾಜ್ಯಾಧ್ಯಕ್ಷರಾದ ಟಿ.ಏ ನಾರಾಯಣಗೌಡರು ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್ ಕರವೇಯ 'ಗಂಗಾ' ಪ್ರಕಾಶನಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲಾಗುವುದೆಂದು ತಿಳಿಸಿದರು.


Tuesday, July 27, 2010

ಪ್ರತಿಭಟನೆ ನಡೆಸಿದ ಹೋರಾಟಗಾರರಿಗೆ ಕೈ ಕೋಳ

ಕೊಪ್ಪಳ ನಗರದ ಮಧ್ಯ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಿರಿದಾಗಿದ್ದು ವಾಹನ ದಟ್ಟಣೆ ಹಾಗೂ ಅಪಘಾತಗಳಿಗೆ ಕಾರಣವಾಗಿದೆ. ಇದರಿಂದ ನಮ್ಮ ಕಾರ್ಯಕರ್ತರು ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಜುಲೈ ೨೫ ರಂದು ಪ್ರತಿಭಟನೆ ನಡೆಸಿದ್ದರು. ಪೋಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಮ್ಮ ಕಾರ್ಯಕರ್ತರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಕೈ ಕೋಳವನ್ನು ತೊಡೆಸಿದ್ದರು. ಪ್ರತಿಭಟನೆ ನಡೆಸಿದ ಕಾರ್ಯಕರ್ತರಿಗೆ ಕೈ ಕೋಳವನ್ನು ತೊಡೆಸಿ, ಹೋರಾಟಗಾರರನ್ನು ಅಪರಾಧಿಗಳಂತೆ ಬಿಂಬಿಸಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದರ ವಿರುದ್ಧ ಜೂನ್ ೨೭ ರಂದು ನಮ್ಮ ಕಾರ್ಯಕರ್ತರು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಿದರು.
Tuesday, July 13, 2010

ಎಂಇಎಸ್ ಪುಂಡಾಟಿಕೆ ವಿರುದ್ಧ ಕರವೇ ಪ್ರತಿಭಟನೆ

ಬೆಳಗಾವಿ ಕರ್ನಾಟಕದ್ದೇ ಎಂದು ಸಾರಲು ಕರವೇ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಹೋರಾಟಗಳ ಪರಿಣಾಮವಾಗಿ ಕೇಂದ್ರ ಸರಕಾರ ಬೆಳಗಾವಿ ಕರ್ನಾಟಕದ್ದೇ ಎಂಬ ಪ್ರಮಾಣ ಪತ್ರವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ. ನಾಡವಿರೋಧಿ ಎಂಇಎಸ್ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹಲವಾರು ಹುನ್ನಾರಗಳನ್ನು ನಡೆಸುತ್ತಿದೆ. ಎಂಇಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಕೇಂದ್ರ ಸರಕಾರದ ಪ್ರಮಾಣ ಪತ್ರದಿಂದ ಹತಾಶೆಗೆ ಒಳಗಾಗಿದೆ. ಈ ಹತಾಶೆಯಿಂದ ೧೨-ಜೂನ್ ೨೦೧೦ ರಂದು ಬೆಳಗಾವಿಯಲ್ಲಿ ಕನ್ನಡ ದ್ವಜಕ್ಕೆ ಅವಮಾನಿಸಿ ಮಹಾರಾಷ್ಟ್ರ ಧ್ವಜವನ್ನು ಹಾರಿಸಲು ಪ್ರಯತ್ನಿಸಿ ತನ್ನ ಪುಂಡಾಟಿಕೆಯನ್ನು ಮೆರೆದಿದೆ. ಎಂಇಎಸ್ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕನ್ನಡ ಧ್ವಜವನ್ನು ಹಾರಿಸಿದ್ದಾರೆ..

ಎಂಇಎಸ್ ತನ್ನ ಪುಂಡಾಟಿಕೆಯ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅವಮಾನಿಸುತ್ತಿದ್ದರು ರಾಜ್ಯ ಸರಕಾರ ಮೌನವಹಿಸಿದೆ. ಎಂಇಎಸ್ ನ ಪುಂಡಾಟಿಕೆ ಮತ್ತು ಸರಕಾರದ ಮೌನವನ್ನು ಖಂಡಿಸಿ ಕರವೇ ಕಾರ್ಯಕರ್ತರು ರಾಜ್ಯಾಧ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರ ಬಗೆಗಿನ ಪತ್ರಿಕಾ ವರದಿಯನ್ನು ನೋಡಿ-Wednesday, July 7, 2010

ಬೆಳಗಾವಿ ಕರ್ನಾಟಕದ್ದು ಎಂದು ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ

ಕೇಂದ್ರ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರಮಾಣ ಪತ್ರ ಸಲ್ಲಿಸಿರುವುದಕ್ಕೆ ನಮ್ಮ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಿಸಿದರು.
ಪತ್ರಿಕಾ ವರದಿಯನ್ನು ನೋಡಿ-

Monday, July 5, 2010

ಕರ್ನಾಟಕ ರಕ್ಷಣಾ ವೇದಿಕೆ - ಒಂದು ಪರಿಚಯ

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರ ದಕ್ಷ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ತಾಯಿಯ ಮಕ್ಕಳನ್ನು ಹಳದಿ ಕೆಂಪು ಬಾವುಟದ ಅಡಿಯಲ್ಲಿ ಸಂಘಟಿಸಲಾಗುತ್ತದೆ. ಇದೀಗ ರಾಜ್ಯಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನೋಂದಾಯಿತ ಸದಸ್ಯರ ಸಂಖ್ಯೆಯೇ ಐವತ್ತು ಲಕ್ಷಕ್ಕೂ ಹೆಚ್ಚು. ದಿನೇದಿನೇ ಸಂಘಟನೆಯು ನಾಡಿನ ಎಲ್ಲಾ ಜನತೆಯ ಪ್ರೀತಿ, ಅಭಿಮಾನ, ನಂಬಿಕೆಗಳನ್ನು ಹೆಚ್ಚು ಹೆಚ್ಚು ಗಳಿಸುತ್ತಿದ್ದು ಕನ್ನಡಿಗರೆದೆಯಲ್ಲಿ ’ ಸಮೃಧ್ಧವಾದ ನಾಳೆಗಳು ಕನ್ನಡಿಗರದ್ದಾಗಲಿವೆ ’ ಎನ್ನುವ ಭರವಸೆಗೆ ಕಾರಣವಾಗಿದೆ. ಕನ್ನಡ ಪರವಾದ ಹೋರಾಟಗಳನ್ನು ರಾಜಿ ರಹಿತವಾಗಿ, ರಾಜಕೀಯ ರಹಿತವಾಗಿ ನಡೆಸಿಕೊಂಡು ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ನಿರ್ಭೀಡ ನಿಲುವು ಮತ್ತು ಪ್ರಾಮಾಣಿಕವಾದ ನಡೆಗಳಿಂದಾಗಿ ನಾಡಿನ ಮೂಲೆಮೂಲೆಗಳ ಕನ್ನಡಿಗರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಈ ಬ್ಲಾಗಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಾಡಿಕೊಂಡು ಬಂದಿರುವ ಹೋರಾಟಗಳ ಪತ್ರಿಕಾ ವರದಿಗಳು, ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಚಿತ್ರದ ತುಣುಕುಗಳು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ನಾಡನ್ನು ಉದ್ದೇಶಿಸಿ ಮಾತನಾಡಿರುವ ಚಿತ್ರದ ತುಣುಕುಗಳು ನೋಡಬಹುದು.

Tuesday, June 29, 2010

ಭ್ರಷ್ಟಾಚಾರ ತಡೆಗಟ್ಟಲು ರಾಜ್ಯ ಸರಕಾರ ವಿಫಲ - ಕರವೇ ಪ್ರತಿಭಟನೆ

ಕರ್ನಾಟಕದ ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಇರುವ ಲೋಕಾಯುಕ್ತ ಸಂಸ್ಥೆಗೆ ಸರಿಯಾದ ಅಧಿಕಾರವನ್ನು ನೀಡದೇ, ಭ್ರಷ್ಟಾಚಾರವನ್ನು ತಡೆಗಟ್ಟಲು ವಿಫಲವಾಗಿರುವ ರಾಜ್ಯ ಸರಕಾರದ ನಡೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 24/6/2010 ರಂದು ಪ್ರತಿಭಟನೆ ನಡೆಸಿದರು. ಇದರ ಪತ್ರಿಕಾ ವರದಿಯನ್ನು ನೋಡಿ-

Tuesday, June 22, 2010

ಹೊಗೇನಕಲ್ ಅಕ್ರಮ ಯೋಜನೆ ವಿರುದ್ಧ ಚಾಮರಾಜನಗರ ಜಿಲ್ಲೆ ಬಂದ್ ಯಶಸ್ವಿ

ಹೊಗೇನಕಲ್ ಅಕ್ರಮ ಯೋಜನೆಗೆ ವಿರೋಧಿಸಿ ಕರವೇ ಕರೆ ನೀಡಿದ್ದ ಚಾಮರಾಜನಗರ ಜಿಲ್ಲೆ ಬಂದ್ ಶಾಂತಿಯುತವಾಗಿ ಯಶಸ್ವಿಯಾಗಿದೆ. ಇದರ ಬಗೆಗಿನ ಪತ್ರಿಕಾ ವರದಿ ನೋಡಿ-
Thursday, June 17, 2010

ನಗರಪಾಲಿಕೆ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಕಲಿಕೆ ವಿರೋಧಿಸಿ ಹೋರಾಟ

ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ. ಗೆ ಸೇರಿದ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯನ್ನು ಆರಂಭಿಸಲು ಮುಂದಾಗಿದೆ. ಸಿ.ಬಿ.ಎಸ್.ಇ ಕಲಿಕಾ ವ್ಯವಸ್ಥೆಯಿಂದ ನಮ್ಮ ನಾಡಿನ ಮಕ್ಕಳ ಮೇಲೆ ಹಿಂದಿ ಹೇರಿಕೆ ಉಂಟಾಗುತ್ತದೆ .ಈ ಪದ್ದತಿಯಲ್ಲಿ ಕನ್ನಡದ ಮತ್ತು ಕನ್ನಡದಲ್ಲಿ ಕಲಿಕೆಯಿಲ್ಲದಿರುವುದರಿಂದ ಕನ್ನಡದ ಮಕ್ಕಳು ಕನ್ನಡದಿಂದಲೇ ದೂರಾಗುತ್ತಾರೆ. ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಸರಿಯಾದ ಪರಿಚಯವಿಲ್ಲದ ಈ ಕಲಿಕಾ ವ್ಯವಸ್ಥೆಯಿಂದ ನಮ್ಮ ನಾಡಿನ ಮಕ್ಕಳು ನಮ್ಮ ತನದಿಂದಲೇ ದೂರಾಗುತ್ತಾರೆ. ರಾಜ್ಯ ಸರಕಾರದ ಈ ನಿರ್ಧಾರ ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ತನ್ನ ಮೂಲಭೂತ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳೋ ನಡೆಯಾಗಿದೆ. ನಾಡಿನಲ್ಲಿ ಗುಣಮಟ್ಟದ ಶಿಕ್ಷಣ ಪದ್ದತಿಯನ್ನು ರೂಪಿಸಬೇಕಾದ ರಾಜ್ಯ ಸರಕಾರ, ಕೇಂದ್ರೀಯ ಪಠ್ಯಕ್ರಮಕ್ಕೆ ಮಣೆ ಹಾಕಿರುವುದು ಸರಿಯಲ್ಲ.

ರಾಜ್ಯ ಸರಕಾರದ ಈ ನಿರ್ಧಾರವನ್ನು ಖಂಡಿಸಿ ೧೭ ಜೂನ್ ೨೦೧೦ ರಂದು ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯ ನಿರ್ಧಾರವನ್ನು ಕೈಬಿಟ್ಟು ನಮ್ಮ ನುಡಿ,ಸಂಸ್ಕೃತಿ ಮತ್ತು ಇತಿಹಾಸವನ್ನು ಎತ್ತಿಹಿಡಿಯುವ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
ಪ್ರತಿಭಟನೆಯ ವರದಿಯನ್ನು ಇಲ್ಲಿ ನೋಡಿ...