Monday, September 6, 2010

ಹಿಂದಿ ದಿವಸದ ವಿರುದ್ಧ ಪ್ರತಿಭಟನೆ

೨೦೦೮ ರಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಸಿದ ಹೋರಾಟಗಳ ಬಗ್ಗೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಮನದಾಳದ ಮಾತು-

ಸ್ವಾಭಿಮಾನಿ ಕನ್ನಡಿಗರೇ,

ಕಳೆದ ವಾರ ಕರ್ನಾಟಕದ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕೇಂದ್ರಸರ್ಕಾರದ ಅಧಿಸೂಚನೆಯಂತೆ ನಡೆಸಲು ಉದ್ದೇಶಿಸಲಾಗಿದ್ದ ಹಿಂದಿ ದಿನದ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತು. ಯಾವ ದೇಶ ಸಮಾನತೆಯ ಆಧಾರದ ಮೇಲೆ ನಿಲ್ಲಬೇಕಿತ್ತೋ ಅದು ಒಂದು ಜನಾಂಗದ ಭಾಷೆಯನ್ನು ಮತ್ತೊಂದು ಜನಾಂಗದ ಮೇಲೆ ಹೇರಲಾಗುತ್ತಿರುವುದು ಮತ್ತು ಭಾರತದೇಶದ ಕೇಂದ್ರಸರ್ಕಾರಿ ಆಡಳಿತ ಯಂತ್ರವೇ ಈ ಕೆಲಸ ನಡೆಸುತ್ತಿರುವುದು ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಎಂಬ ಪದಗಳಿಗೆ ಎಸಗಿದ ಘೋರ ಅಪಚಾರವಾಗಿದೆ.

ಹಿಂದಿಯೆನ್ನುವ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಶಾಲೆಗಳಲ್ಲಿ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಹೇಳಿಕೊಡಲಾಗುತ್ತಿರುವುದನ್ನೂ, ಆ ಮೂಲಕ ಎಳವೆಯಲ್ಲೇ ಕನ್ನಡದ ಬಗ್ಗೆ ಕೀಳರಿಮೆ ಹುಟ್ಟುಹಾಕುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಭಾರತೀಯ ಸಂವಿಧಾನದ ೩೪೩(೧)ರಿಂದ ೩೫೧ನೇ ಪರಿಚ್ಛೇದಗಳವರೆಗಿನ ಸಾಲುಗಳು ಭಾರತ ಒಕ್ಕೂಟದಲ್ಲಿನ ಭಾಷೆಗಳ ಬಗ್ಗೆ ತಿಳಿಸುತ್ತಿದೆ. ಜೊತೆಯಲ್ಲಿನ ಸಂವಿಧಾನದ ಎಂಟನೆ ಪಟ್ಟಿಯಲ್ಲಿ ಮಾನ್ಯತೆ ಇರುವ ಭಾಷೆಗಳ ಹೆಸರುಗಳೂ ಇವೆ. ಈ ಯಾವುದರಲ್ಲೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯಲಾಗಿಲ್ಲ. ಅಷ್ಟೇಕೆ, ಸಂವಿಧಾನದ ಯಾವ ಸಾಲಿನಲ್ಲೂ ಹಿಂದಿಯನ್ನು ರಾಷ್ಟ್ರಭಾಷೆಯೆನ್ನಲಾಗಿಲ್ಲ. ಆದರೂ ಹೀಗೆ ಸುಳ್ಳೇ ಪ್ರಚಾರ ಮಾಡುವುದಾದರೂ ಏಕೆ? ಅಕಸ್ಮಾತ್ ಭಾರತ ದೇಶ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಒಪ್ಪಿದ್ದರೂ ಕೂಡಾ ನಾವು ಅದನ್ನು ವಿರೋಧಿಸುತ್ತಿದ್ದೆವು. ಯಾಕೆಂದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಆಡಳಿತ ಭಾಷೆ. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಎಲ್ಲವನ್ನೂ ನಾವು ವಿರೋಧಿಸುತ್ತೇವೆ.

ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರ್ಕಾರಿ ಪ್ರಾಯೋಜಿತ ಈ ಹಿಂದಿ ಭಾಷೆಯ ಪ್ರಸಾರವನ್ನು ನಮ್ಮ ಮೇಲಿನ ಹಿಂದಿ ಹೇರಿಕೆಯೆಂದೇ ಗುರುತಿಸುತ್ತದೆ. ಏಕೆಂದರೆ ಹಿಂದಿಯೆನ್ನುವ ನಮಗೆ ಸಂಬಂಧವಿಲ್ಲದ ನುಡಿಯನ್ನು ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ತ್ರಿಭಾಷಾ ಸೂತ್ರವನ್ನು ಒಪ್ಪುವ ಮೂಲಕ ನಾಡಿಗರಿಗೆ ನಮ್ಮ ರಾಜ್ಯ ಸರ್ಕಾರಗಳೂ ಕೂಡಾ ಜನತೆಗೆ ತೀವ್ರ ಅನ್ಯಾಯ ಮಾಡಿವೆ. ಹಿಂದಿ ಭಾಷಿಕರು ನಮ್ಮ ನಾಡಿಗೆ ವಲಸೆ ಬಂದಲ್ಲಿ ಅವರಿಗೆ ಯಾವ ರೀತಿಯ ತೊಂದರೆಯೂ ಅಗದಿರಲಿ ಎನ್ನುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿರುವುದು ನಮಗೆ ಕಾಣುತ್ತಿದೆ. ಅಫಿಷಿಯಲ್ ಲಾಂಗ್ವೇಜ್ ಆಕ್ಟ್ ಎಂಬ ಕಾಯ್ದೆಯ ಮೂಲಕ ಹಿಂದಿ ಪ್ರಸಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ತಮಿಳುನಾಡಿಗೆ ಮಾತ್ರಾ ಈ ಕಾಯಿದೆ ಅನ್ವಯವಾಗುವುದಿಲ್ಲ ಎನ್ನುವ ಇಬ್ಬಗೆಯ ನಿಲುವು ತಳೆದಿದೆ. ಈ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಕನ್ನಡ ನಾಡಿಗೂ ಈ ಕಾಯ್ದೆಯಿಂದ ಬಿಡುಗಡೆ ಸಿಗಲಿ ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ.

ಕನ್ನಡ ನಾಡಿನ ಕೇಂದ್ರ ಸರ್ಕಾರಿ ಕಲಿಕಾ ಸಂಸ್ಥೆಗಳಾದ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಮುಂತಾದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ನಮ್ಮ ನಾಡಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯವಾಗಬೇಕು. ಕನ್ನಡ ಬಾರದ, ಹೊರನಾಡಿನಿಂದ ಉದ್ಯೋಗದ ಮೇಲೆ ನಮ್ಮ ನಾಡಿಗೆ ಬರುವವರಿಗೆ ಕನ್ನಡ ಕಲಿಯುವುದನ್ನೂ, ಕನ್ನಡದಲ್ಲಿ ಆಡಳಿತ ನಡೆಸುವುದನ್ನು ಕಡ್ಡಾಯ ಮಾಡಬೇಕು. ಕೇಂದ್ರ ಸರ್ಕಾರಿ ಕಛೇರಿಗಳ ಎಲ್ಲಾ ಅರ್ಜಿ, ನಮೂನೆ, ಸೂಚನೆಗಳು ಕನ್ನಡದಲ್ಲಿರಬೇಕು.

ಕರ್ನಾಟಕದ ಕೇಂದ್ರಸರ್ಕಾರಿ ಹುದ್ದೆಗಳಿಗೆ ನಡೆಸುವ ಬರಹದ ಮತ್ತು ಮೌಖಿಕ ಪರೀಕ್ಷೆಗಳು ಕನ್ನಡದಲ್ಲಿರಬೇಕು. ಹಿಂದಿ ಭಾಷೆಯನ್ನು ಕಲಿತಿರಬೇಕು ಹಾಗೂ ಹಿಂದಿಯಲ್ಲಿ ಅರ್ಜಿ ಸಲ್ಲಿಸಬೇಕು ಅನ್ನುವಂತಹ ನಿಯಮಗಳನ್ನು ನೇಮಕಾತಿಯಿಂದ ಕೈಬಿಡಬೇಕು. ಕೇಂದ್ರ ಸರ್ಕಾರಿ ನೌಕರಿಗೆ ನಡೆಸುವ ಸಂದರ್ಶನಗಳಲ್ಲಿ ಕನ್ನಡದಲ್ಲಿ ಉತ್ತರಿಸುವ ಹಕ್ಕು ಅಭ್ಯರ್ಥಿಗಳಿಗಿರಬೇಕು. ನಮ್ಮ ನಾಡಿನಲ್ಲಿ ಇರುವ ಹಾಗೂ ಹೊಸದಾಗಿ ಆರಂಭವಾಗುವ ಎಲ್ಲ ಕೇಂದ್ರ ಸರ್ಕಾರಿ ಹುದ್ದೆಗಳನ್ನು ನಮ್ಮ ನಾಡಿನವರಿಗೇ ಕೊಡಬೇಕು. ಸಾರ್ವಜನಿಕ ಸಂಪರ್ಕ ಬರುವ ಎಲ್ಲ ಕಡೆಗಳಲ್ಲಿ ಕನ್ನಡದ ಸೂಚನೆಗಳನ್ನು ಕಡ್ಡಾಯವಾಗಿ ಹಾಕಬೇಕು ಎನ್ನುವ ಹಕ್ಕೊತ್ತಾಯ ಮಾಡುತ್ತೇವೆ.

ಕನ್ನಡಿಗರ ಮೇಲಾಗುತ್ತಿರುವ ಎಲ್ಲ ರೀತಿಯ ಹಿಂದಿ ಹೇರಿಕೆಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂಬ ಸಂದೇಶವನ್ನು ಸಾಂಕೇತಿಕವಾಗಿ ಹಿಂದಿ ದಿವಸವನ್ನು ಪ್ರತಿಭಟಿಸುವ/ ಬಹಿಷ್ಕರಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಕರ್ನಾಟಕ ರಾಜ್ಯಸರ್ಕಾರವೂ ಕೂಡಾ ಈ ಕೂಡಲೇ ತ್ರಿಭಾಷಾ ಸೂತ್ರದ ನೀತಿಯಿಂದ ಹಿಂದೆ ಸರಿಯಬೇಕೆಂದೂ ಒತ್ತಾಯಿಸುತ್ತೇವೆ.

ಕನ್ನಡಿಗರೇ, ಹಿಂದಿಯನ್ನು ಒಪ್ಪುವ ಮೂಲಕ ನಮ್ಮ ನಾಡಿನಲ್ಲಿ ನಾವೇ ಅನಾಥರಾಗುವ ದಿನಗಳು ಮುಂದೆ ಬರದಂತೆ ತಡೆಯಲು, ನಮ್ಮ ನಾಡಿನ ಸಾರ್ವಭೌಮ ಭಾಷೆಗೆ ಧಕ್ಕೆ ಬರದಂತೆ ತಡೆಯಲು, ನಮ್ಮ ಮಕ್ಕಳ ಉದ್ಯೋಗಾವಕಾಶಗಳು ಹಿಂದಿ ಜನಗಳ ಪಾಲಾಗದಿರಲು ಇಂದೇ ನಾವು ಈ ಹಿಂದಿ ಹೇರಿಕೆಯನ್ನು ಶತಾಯ ಗತಾಯ ತಡೆಯಬೇಕಾಗಿದೆ. ನಾಡಹಿತ ಕಾಪಾಡಲು ನಡೆಸಲಾಗುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಿರೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇನೆ.

ವಂದನೆಗಳು
ಟಿ.ಏ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ