Tuesday, February 20, 2007

ಕಾವೇರಿ ಹೋರಾಟ.. ದಿಲ್ಲಿ ಮುತ್ತಿಗೆ

ಕರ್ನಾಟಕ ರಕ್ಷಣಾ ವೇದಿಕೆಯು ಕಾವೇರಿ ನ್ಯಾಯಾಧಿಕರಣದ ತೀರ್ಪು ಹೊರಬಂದ ಕ್ಷಣದಿಂದಲೇ ಹೋರಾಟಕ್ಕೆ ತೊಡಗಿದ್ದು ಇಡಿಯ ಕರ್ನಾಟಕದ ಮೂಲೆ ಮೂಲೆಗಳ ಕನ್ನಡಿಗರನ್ನು ಒಗ್ಗೂಡಿಸಿ ಈ ಹೋರಾಟವನ್ನು ಜೀವಂತವಾಗಿಟ್ಟುಕೊಂಡು ಬಂದಿದೆ. ಇದುವರೆವಿಗೆ ಕಾವೇರಿ ಸಮಸ್ಯೆಗೆ ಕಾವೇರಿ ಕಣಿವೆಯ ಜಿಲ್ಲೆಗಳು ಮಾತ್ರ ಸ್ಪಂದಿಸುತ್ತಿದ್ದವು. ಈ ಬಾರಿ ಕರ್ನಾಟಕ ರಕ್ಷಣಾ ವೇದಿಕೆಯು ಕಾವೇರಿಯ ಕೂಗನ್ನು ರಾಜ್ಯದ ಎಲ್ಲ ಜಿಲ್ಲೆಗಳ ಕನ್ನಡಿಗರೂ ಎತ್ತುವಂತೆ ಮಾಡಿದೆ. ಆ ಮೂಲಕ ಭೌಗೋಳಿಕವಾಗಿ ಮಾತ್ರ ಆಗಿದ್ದ ಕನ್ನಡಿಗರ ಏಕೀಕರಣವನ್ನು ಭಾವನಾತ್ಮಕ ಏಕೀಕರಣವಾಗಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಫೆಬ್ರವರಿ ೧೨ರ ಕರ್ನಾಟಕ ಬಂದ್ ಸಂಪೂರ್ಣ ಯಶಗೊಳಿಸಿತು. ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣಕ್ಕೂ ಬಂದ್ ಬಿಸಿಯನ್ನು ಮುಟ್ಟಿಸಿತು. ನಮ್ಮ ಸಂಸದರ ನಿಷ್ಕ್ರಿಯತೆಯನ್ನು ಖಂಡಿಸಿ ಕಾವೇರಿ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಅವರ ಮನೆಗಳ ಮುಂದೆ ಧರಣಿ ಮಾಡಿ ಆಗ್ರಹಿಸಿತು. ರಾಜ್ಯದ ಎಲ್ಲ ಊರುಗಳಲ್ಲೂ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿತು. ಚಳವಳಿಗಳ ಬಗ್ಗೆ, ಚಳವಳಿಕಾರರ ಬಗ್ಗೆ ಹಗುರವಾಗಿ ಮಾತನ್ನಾಡುತ್ತ ಈ ಅನ್ಯಾಯದ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದ ಬೂಟಾಟಿಕೆಯ ಬುದ್ಧಿಜೀವಿ ಮತ್ತು ಅಧಿಕಾರಿಗಳ ವಿರುದ್ಧ ಉಗ್ರವಾಗಿ ಹೋರಾಡಿ ಅವುಗಳ ಬಾಯಿ ಮುಚ್ಚಿಸಿತು. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಾವಿರಾರು ಜನ ಕನ್ನಡಿಗರ ದೊಡ್ಡ ರ್‍ಯಾಲಿಯೊಂದನ್ನು ದೆಹಲಿಯಲ್ಲೇ ನಡೆಸಿತು. ಕಾವೇರಿಯ ವಿಷಯವಾಗಿ ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಕನ್ನಡಿಗರ ಹಕ್ಕೊತ್ತಾಯವನ್ನು, ಅಳಲನ್ನು ಅವರಿಗೆ ತಲುಪಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆಯೇ ಆಗಿದೆ. ರಾಜ್ಯಕ್ಕೆ ಭೇಟಿ ಇತ್ತ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಕನ್ನಡಿಗರಿಗಾದ ಅನ್ಯಾಯವನ್ನು ಮನದಟ್ಟು ಮಾಡಿಸಿ ಮನವಿ ಸಲ್ಲಿಸಿತು. ತಾಯಿ ಕಾವೇರಿ ಹುಟ್ಟುವ ತಲಕಾವೇರಿಯಿಂದ ಹೊರಟು ಕಾವೇರಿ ಕಣಿವೆಯ ಎಲ್ಲ ಜಿಲ್ಲೆಗಳಲ್ಲಿ ಸಾಗಿ ಅಲ್ಲಿನ ಜನತೆಯಲ್ಲಿ ಭರವಸೆಯ, ಹೋರಾಟದ ಕೆಚ್ಚನ್ನು ತುಂಬಿತು. ಈ ಸಂದರ್ಭದಲ್ಲೇ ಮಂಡ್ಯದಲ್ಲಿ ದೊಡ್ಡ ಸಾರ್ವಜನಿಕ ಸಭೆ ನಡೆಸಲಾಯಿತು. ಉತ್ತರ ಕರ್ನಾಟಕದ ಹಿರಿಯ ಹೋರಾಟಗಾರರಾದ ಶ್ರೀ ಪಾಟೀಲ್ ಪುಟ್ಟಪ್ಪನವರು ಈ ಸಭೆಯಲ್ಲಿ ಭಾಗವಹಿಸುವ ಮೂಲಕ 'ಕನ್ನಡಿಗರೆಲ್ಲ ಒಂದೇ. ಕೃಷ್ಣೆ, ಕಾವೇರಿ, ಮಹದಾಯಿ ಸೇರಿದಂತೆ ಎಲ್ಲ ಸಮಸ್ಯೆಗಳು ಉತ್ತರ ದಕ್ಷಿಣ ಭೇಧವಿಲ್ಲದೇ ಎಲ್ಲ ಕನ್ನಡಿಗರ ಸಮಸ್ಯೆಗಳೇ' ಎಂದು ಸಾರಿದಂತಾಯಿತು. ಬೆಂಗಳೂರಿನಲ್ಲಿ ಹಿಂದೆಂದೂ ನಡೆದಿರದಷ್ಟು ದೊಡ್ಡದಾದ ಹತ್ತು ಸಾವಿರಕ್ಕೂ ಹೆಚ್ಚಿನ ಕನ್ನಡಿಗರ ಬೃಹತ್ ರ್‍ಯಾಲಿಯನ್ನು ನಡೆಸಲಾಯಿತು. ಕಾವೇರಿ ಹೋರಾಟವನ್ನು ಶಕ್ತಿಯುತವಾಗಿ ಸಂಘಟಿಸುವ ಸಲುವಾಗಿ ರಾಜ್ಯ ರೈತ ಸಂಘವೂ ಸೇರಿದಂತೆ ನಾಡಿನ ನಾನಾ ಸಂಘಟನೆಗಳ 'ಕೃಷ್ಣಾ ಕಾವೇರಿ ಹೋರಾಟ ಸಮನ್ವಯ ಸಮಿತಿ'ಯಲ್ಲಿ ಚಾಲನಾ ಶಕ್ತಿಯಾಗುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯು ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಿದೆ.ಕನ್ನಡಿಗರ ಇದುವರೆಗಿನ ಶಾಂತಿಯ ಹೋರಾಟಗಳು ನಮ್ಮನ್ನಾಳುವ ದೊರೆಗಳ ಕಣ್ಣು ಕಿವಿಗಳನ್ನು ಮುಟ್ಟಿಲ್ಲವೇನೋ ಎಂಬ ಅನುಮಾನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾಡಿನ ಎಲ್ಲ ಕನ್ನಡಿಗರು ಈ ಹೋರಾಟವನ್ನು ತೀವ್ರಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಈ ನಿಟ್ಟಿನಲ್ಲಿ ಇದೇ ತಿಂಗಳ ೨೬ರಿಂದ ಮೇ ೪ರ ತನಕ ಕರ್ನಾಟಕದಿಂದ ದೆಹಲಿಗೆ ತೆರಳುವ ಎಲ್ಲ ರೈಲುಗಳಲ್ಲಿ ಒಂದು ಲಕ್ಷ ಕನ್ನಡಿಗರು ಹೊರಡಲಿದ್ದು, ಟಿಕೆಟ್ ಇಲ್ಲದೆ ಪಯಣಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು, ಅಸಹಕಾರವನ್ನು ಪ್ರದರ್ಶಿಸಲಿದ್ದಾರೆ. ಮೇ ೧ ರಿಂದಲೇ ಅಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಸಲಿದ್ದೇವೆ. ಮೇ ೪ರಂದು ದೆಹಲಿಯ ಬೀದಿ ಬೀದಿಗಳಲ್ಲಿ ಒಂದು ಲಕ್ಷ ಕನ್ನಡಿಗರ ಬೃಹತ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು ಕನ್ನಡಿಗರ ಕೂಗು ದೆಹಲಿ ಧಣಿಗಳ ಕಿವಿ ಮುಟ್ಟಲಿದೆ. ಕನ್ನಡ ಬಾವುಟದ ಹಳದಿ ಕೆಂಪುಗಳು 'ಇನ್ನು ಈ ಅನ್ಯಾಯವನ್ನು ಸಹಿಸೆವು' ಎನ್ನುವ ಎಚ್ಚರಿಕೆಯೊಂದನ್ನು ನೀಡಲಿವೆ. ಅಂದಿನ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ನಾಡಿನ ಎಲ್ಲ ಸಂಸದರಿಗೆ, ಕಲಾವಿದರಿಗೆ ಹಾಗೂ ಸಾಹಿತ್ಯವೂ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರಿಗೆ ಈಗಾಗಲೇ ಮನವಿ ಮಾಡಲಾಗಿದೆ.ಕಾವೇರಿ ಹೋರಾಟದಲ್ಲಿ ಕನ್ನಡಿಗರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕಾದರೆ ಈ ಐತೀರ್ಪು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗಬಾರದು. ಕಾವೇರಿ ನ್ಯಾಯಮಂಡಲಿ ರದ್ದಾಗಬೇಕು. ರಾಷ್ಟ್ರೀಯ ಜಲನೀತಿಯನ್ನು ರೂಪಿಸಿ ಜಾರಿಗೆ ತರಬೇಕು. ಅಲ್ಲಿಯತನಕ ೧೯೯೧ಕ್ಕೂ ಮೊದಲಿನ ನೀರು ಹಂಚಿಕೆ ವ್ಯವಸ್ಥೆ ತಾತ್ಕಾಲಿಕವಾಗಿ ಮುಂದುವರೆಯಬೇಕು ಎನ್ನುವ ತೀರ್ಮಾನಿಗಳಿಗಾಗಿ ಒತ್ತಾಯಿಸೋಣ. ಈ ಹೋರಾಟವನ್ನು ಒಂದು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾಡಿನ ಎಲ್ಲ ಕನ್ನಡ ಬಾಂಧವರೂ ನಮ್ಮೊಂದಿಗೆ ಕೈಜೋಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಎಲ್ಲ ಕನ್ನಡಿಗರಲ್ಲಿ ಆಗ್ರಹಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತದೆ.