Tuesday, September 14, 2010

ಹಿಂದಿ ದಿವಸ/ಸಪ್ತಾಹ ದ ವಿರುದ್ಧ ಪ್ರತಿಭಟನೆ

ಪ್ರತಿವರ್ಷ ಸೆಪ್ಟೆಂಬರ್ ೧೪ರಂದು ಭಾರತದಾದ್ಯಂತ ಹಿಂದಿ ದಿವಸ್ ಅನ್ನು ಕೇಂದ್ರ ಸರ್ಕಾರ ಆಚರಿಸಿಕೊಂಡು ಬಂದಿದೆ.
ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ಕಾರ್ಯನಿರತರಾಗಿರುವ ಕೇಂದ್ರ ಸರ್ಕಾರದ ನೌಕರರು ಯಾವ ಮಟ್ಟಿಗೆ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸಿ ಬಳಸುತ್ತರೆನ್ನುವ ಬೆಗ್ಗೆ ವಿಶೇಷ ಒತ್ತು ನೀಡಿ ಈ ದಿನದಂದು ಹಿಂದಿ ಪ್ರಚಾರಕರಿಗೆ ಸನ್ಮಾನಿಸಲಾಗುತ್ತದೆ.
ಈ ಎಲ್ಲ ಆಚರಣೆಗಳನ್ನು ಸಾರ್ವಜನಿಕರ ತೆರಿಗೆ ಹಣ ಬಳಸಿ ಭಾರತ ಸರ್ಕಾರ ಆಚರಿಸುತ್ತಿದೆ. ಈ ಮೂಲಕ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಬಳಕೆಯನ್ನು ನಿರಂತರವಾಗಿ ಹೆಚ್ಚಿಸಲು ಯೋಜನೆಗಳನ್ನು ಹಾಕಿಕೊಂಡು ಹೆಜ್ಜೆಹೆಜ್ಜೆಯಾಗಿ ಜಾರಿಮಾಡುತ್ತಿದೆ. ಇದರಿಂದಾಗಿ ಕನ್ನಡಿಗರ ಶಿಕ್ಷಣ, ಉದ್ಯೋಗ, ವ್ಯಾಪಾರ ವಹಿವಾಟುಗಳಲ್ಲಿ ಹಿಂದೀ ಹೇರಿಕೆ ನಡೆಯುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯು, ಕೇಂದ್ರಸರ್ಕಾರದ ಈ ಅನ್ಯಾಯದ ಭಾಷಾನೀತಿಯನ್ನೂ, ಅದರಿಂದಾಗುತ್ತಿರುವ ಹಿಂದಿ ಹೇರಿಕೆಯನ್ನೂ ತೀವ್ರವಾಗಿ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಸೆಪ್ಟೆಂಬರ್ ೧೪ನ್ನು ಹಿಂದೀ ಹೇರಿಕೆ ವಿರೋಧಿ ದಿನವನ್ನಾಗಿ ಆಚರಿಸುತ್ತಿದೇವೆ. ಈ ವರ್ಷವೂ ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ನಡಸಲಾಯಿತು.
ಬೆಂಗಳೂರಿನಲ್ಲಿ ಮಾನ್ಯ ರಾಜ್ಯಪಾಲರಿಗೆ ಹಿಂದೀ ಹೇರಿಕೆಯ ದುಷ್ಪರಿಣಾಮಗಳನ್ನು ವಿವರಿಸಿ ಕನ್ನಡಿಗರ ಪ್ರತಿರೋಧ ವ್ಯಕ್ತಪಡಿಸುವ ಆಗ್ರಹಪೂರ್ವಕವಾದ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯಪಾಲರಿಗೆ ನೀಡಿದ ಮನವಿ ಪತ್ರ -

ಪತ್ರಿಕಾ ವರದಿಯನ್ನು ಇಲ್ಲಿ ನೋಡಿ-

Thursday, September 9, 2010

ತಡೆ ರಹಿತ ಹಿಂದಿ ಹೇರಿಕೆ ನಿಲ್ಲಲಿ

೨೦೦೯ ರ ಸೆಪ್ಟೆಂಬರ್ ನಲ್ಲಿ ಹಿಂದಿ ಹೇರಿಕೆ ವಿರುದ್ಧ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಮನದಾಳದ ಮಾತು

ಅಕ್ಕರೆಯ ಕನ್ನಡಿಗ,

ಆಗಸ್ಟ್ ತಿಂಗಳಲ್ಲಿ ಭಾರತದ ಎಲ್ಲೆಡೆ ಸ್ವಾತಂತ್ರದ ಹಬ್ಬವನ್ನು ನಮಗೆ ಬಿಡುಗಡೆ ದೊರೆತ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇದರ ಮರು ತಿಂಗಳಲ್ಲೇ ಸ್ವಾತಂತ್ರ್ಯವೆಂಬ ಪದದ ವಿಡಂಬನೆ ಮಾಡುವಂತೆ ನಮ್ಮ ಸ್ವಾತಂತ್ರ ಕಸಿದುಕೊಳ್ಳುವುದರ ಗುರುತಾದ ಹಿಂದಿ ದಿನಾಚರಣೆ, ಹಿಂದಿ ಸಪ್ತಾಹ, ಹಿಂದಿ ಪಕ್ಷಗಳನ್ನು ಆಚರಿಸಲಾಗುತ್ತಿರುವುದನ್ನು ಕಂಡಾಗ ವಿಪರ್ಯಾಸವೆನಿಸುತ್ತದೆ. ಹೌದು, ಸೆಪ್ಟೆಂಬರ್ ೧೪ರಂದು ಹಿಂದಿ ದಿನಾಚರಣೆಯ ಹೆಸರಲ್ಲಿ ಭಾರತ ಸರ್ಕಾರದ ಕೃಪಾಪೋಷಿತ ಅನೇಕ ಕಾರ್ಯಕ್ರಮಗಳನ್ನು ಭಾರತದ ತುಂಬ ನಡೆಸಲಾಗುತ್ತದೆ. ನಮ್ಮ ನಾಡಿನೊಳಗೇ ನಮ್ಮ ಅಸ್ತಿತ್ವಕ್ಕೆ ಸಂಚಕಾರ ತಂದಿರುವ, ಹಿಂದಿಯೇತರರನ್ನು ಭಾರತದ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿರುವ ಭಾರತದ ಭಾಷಾನೀತಿಯನ್ನು ಈ ದಿನವು ಪ್ರತಿನಿಧಿಸುತ್ತದೆ. ನಮ್ಮ ಸ್ವಾತಂತ್ರ ಹರಣದ ಪ್ರತೀಕವಾದ ಈ ಹಿಂದೀ ದಿನಾಚರಣೆಯನ್ನು ಕನ್ನಡಿಗರೆಲ್ಲಾ ವಿರೋಧಿಸಬೇಕಾಗಿದೆ.

ಭಾರತದ ಒಗ್ಗಟ್ಟು ಉಳಿಯಲು ಸಾಮಾನ್ಯ ಸಂಪರ್ಕ ಭಾಷೆಯಾಗಿ ಹಿಂದಿ ಇರಬೇಕು ಎನ್ನುವವರ ಜೊತೆಯಲ್ಲೇ, ಭಾರತ ಕೇಂದ್ರಸರ್ಕಾರದ ಅಧಿಕೃತ ಆಡಳಿತ ಭಾಷೆ ಎನ್ನುವ ಕಾರಣವೂ ಬೆರೆತುಕೊಂಡು ಕನ್ನಡನಾಡಿನ ಮೂಲೆಮೂಲೆಯಲ್ಲಿರೋ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದಿ ಹಬ್ಬವನ್ನು ಆಚರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಎಸಗುವ ಅಪಮಾನವಾಗಿದೆ. ಕನ್ನಡ ನಾಡಿನ ಸರ್ಕಾರವೂ ತ್ರಿಭಾಷಾ ಸೂತ್ರದ ಹೆಸರಲ್ಲಿ ಕನ್ನಡದ ಮಕ್ಕಳಿಗೆ ಬೇಡದೆಯೇ ಹಿಂದಿ ಕಲಿಕೆಯನ್ನು ಹೇರುತ್ತಿರುವುದು ಶೋಚನೀಯವಾಗಿದೆ. ಇಂಥಹ ಭಾಷಾನೀತಿಯ ಕಾರಣದಿಂದಾಗಿ ನಾಡಿನ ಮೇಲಾಗುತ್ತಿರುವ ದುಷ್ಪರಿಣಾಮಗಳು ಅನೇಕ. ತಡೆಯಿರದ ವಲಸೆ, ರೇಲ್ವೇ, ಬ್ಯಾಂಕು ಮೊದಲಾದ ಕಡೆಗಳಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳಿಗೆ ಹೊಡೆತ, ನಮ್ಮೂರಿನ ಅಂಗಡಿ ಮುಂಗಟ್ಟುಗಳಲ್ಲಿ ನಮ್ಮವರಿಗೆ ಹಿಂದಿ ಬರದೆ ಕೆಲಸ ಸಿಗದೆಂಬ ದುಸ್ಥಿತಿ, ಬಾಲ್ಯದಿಂದಲೇ ಕಲಿಕೆಯ ಹೊರೆ… ಇವೆಲ್ಲವೂ ನಮ್ಮ ನಾಡಿನಲ್ಲೇ ನಮ್ಮ ನುಡಿಯನ್ನು ಮೂಲೆಗುಂಪಾಗಿಸುವ ಪ್ರಯತ್ನಗಳೆಂಬುದನ್ನು ನಾಡಿಗರು ಗುರುತಿಸಬೇಕಾಗಿದೆ. ಹಿಂದಿ ಹೇರಿಕೆಗೆ ಮನರಂಜನಾ ಮಾಧ್ಯಮವನ್ನು ಬಳಸಿದಷ್ಟೇ ಪರಿಣಾಮಕಾರಿಯಾಗಿ ಸರ್ಕಾರಿ ಕಛೇರಿಗಳನ್ನೂ ಬಳಸಲಾಗುತ್ತಿದೆ. ಹಿಂದಿ ದಿನಾಚರಣೆ ಹೆಸರಲ್ಲಿ ಹಿಂದಿ ಕಲಿಯಲು ಪ್ರೋತ್ಸಾಹ, ಬಹುಮಾನ, ಭಡ್ತಿಯಂತಹ ಆಮಿಷಗಳನ್ನು ಒಂದೆಡೆ ಬಳಸಲಾಗುತ್ತಿದೆ. ಬ್ಯಾಂಕುಗಳೂ ಸೇರಿದಂತೆ ಪ್ರತಿವರ್ಷ ಇಂತಿಷ್ಟು ಪ್ರಮಾಣದಲ್ಲಿ ಹಿಂದಿಯ ಅನುಷ್ಠಾನ ಮಾಡಬೇಕೆಂಬ ವಾರ್ಷಿಕ ಗುರಿಗಳ ಮೂಲಕ ಆಡಳಿತಾತ್ಮಕ ಹೇರಿಕೆ ನಡೆದಿದೆ. ಭಾರತದ ಯಾವುದೇ ಮೂಲೆಯಲ್ಲಿನ ಯಾವುದೇ ಕೇಂದ್ರಸರ್ಕಾರಿ ಕಛೇರಿಯಲ್ಲಿ ಹಿಂದಿಯಲ್ಲಿ ಸೇವೆ ನೀಡದಿರುವುದು ಅಪರಾಧವೆನ್ನುವ ಬೆದರಿಕೆಗಳ ಮೂಲಕವೂ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಕನ್ನಡಿಗರಾದ ನಾವು ಹಿಂದಿ ಸಾಮ್ರಾಜ್ಯ ಸ್ಥಾಪನೆಯ ಈ ಹುನ್ನಾರವನ್ನು ಅರಿತು ಹಿಂದಿ ಹೇರಿಕೆಯನ್ನು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನೆಲ್ಲ ಕನ್ನಡಿಗರಲ್ಲಿ ಹಿಂದಿ ಹೇರಿಕೆಯ ಬಗ್ಗೆ, ಅದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ, ನಮ್ಮ ಅಸ್ತಿತ್ವವೇ ಇಲ್ಲವಾಗುವ ಬೆದರಿಕೆಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಕನ್ನಡಿಗರೇ, ಹಿಂದಿ ಹೇರಿಕೆಯನ್ನು ನಾವಿಂದು ತಡೆಯದಿದ್ದರೆ ನಾಳೆ ನಮ್ಮ ನಾಡಿನಲ್ಲಿ ನಾವೇ ಅನಾಥರಾಗಬೇಕಾದೀತು ಎಂಬುದನ್ನು ಅರಿತು ಒಂದಾಗಿ ಹಿಂದಿ ಹೇರಿಕೆಯನ್ನು ವಿರೋಧಿಸೋಣ.

ವಂದನೆಗಳು.

ಟಿ. ಏ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

Monday, September 6, 2010

ಹಿಂದಿ ದಿವಸದ ವಿರುದ್ಧ ಪ್ರತಿಭಟನೆ

೨೦೦೮ ರಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಸಿದ ಹೋರಾಟಗಳ ಬಗ್ಗೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಮನದಾಳದ ಮಾತು-

ಸ್ವಾಭಿಮಾನಿ ಕನ್ನಡಿಗರೇ,

ಕಳೆದ ವಾರ ಕರ್ನಾಟಕದ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕೇಂದ್ರಸರ್ಕಾರದ ಅಧಿಸೂಚನೆಯಂತೆ ನಡೆಸಲು ಉದ್ದೇಶಿಸಲಾಗಿದ್ದ ಹಿಂದಿ ದಿನದ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿತು. ಯಾವ ದೇಶ ಸಮಾನತೆಯ ಆಧಾರದ ಮೇಲೆ ನಿಲ್ಲಬೇಕಿತ್ತೋ ಅದು ಒಂದು ಜನಾಂಗದ ಭಾಷೆಯನ್ನು ಮತ್ತೊಂದು ಜನಾಂಗದ ಮೇಲೆ ಹೇರಲಾಗುತ್ತಿರುವುದು ಮತ್ತು ಭಾರತದೇಶದ ಕೇಂದ್ರಸರ್ಕಾರಿ ಆಡಳಿತ ಯಂತ್ರವೇ ಈ ಕೆಲಸ ನಡೆಸುತ್ತಿರುವುದು ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಎಂಬ ಪದಗಳಿಗೆ ಎಸಗಿದ ಘೋರ ಅಪಚಾರವಾಗಿದೆ.

ಹಿಂದಿಯೆನ್ನುವ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಶಾಲೆಗಳಲ್ಲಿ ಮಕ್ಕಳಿಗೆ ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಹೇಳಿಕೊಡಲಾಗುತ್ತಿರುವುದನ್ನೂ, ಆ ಮೂಲಕ ಎಳವೆಯಲ್ಲೇ ಕನ್ನಡದ ಬಗ್ಗೆ ಕೀಳರಿಮೆ ಹುಟ್ಟುಹಾಕುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಭಾರತೀಯ ಸಂವಿಧಾನದ ೩೪೩(೧)ರಿಂದ ೩೫೧ನೇ ಪರಿಚ್ಛೇದಗಳವರೆಗಿನ ಸಾಲುಗಳು ಭಾರತ ಒಕ್ಕೂಟದಲ್ಲಿನ ಭಾಷೆಗಳ ಬಗ್ಗೆ ತಿಳಿಸುತ್ತಿದೆ. ಜೊತೆಯಲ್ಲಿನ ಸಂವಿಧಾನದ ಎಂಟನೆ ಪಟ್ಟಿಯಲ್ಲಿ ಮಾನ್ಯತೆ ಇರುವ ಭಾಷೆಗಳ ಹೆಸರುಗಳೂ ಇವೆ. ಈ ಯಾವುದರಲ್ಲೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯಲಾಗಿಲ್ಲ. ಅಷ್ಟೇಕೆ, ಸಂವಿಧಾನದ ಯಾವ ಸಾಲಿನಲ್ಲೂ ಹಿಂದಿಯನ್ನು ರಾಷ್ಟ್ರಭಾಷೆಯೆನ್ನಲಾಗಿಲ್ಲ. ಆದರೂ ಹೀಗೆ ಸುಳ್ಳೇ ಪ್ರಚಾರ ಮಾಡುವುದಾದರೂ ಏಕೆ? ಅಕಸ್ಮಾತ್ ಭಾರತ ದೇಶ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಒಪ್ಪಿದ್ದರೂ ಕೂಡಾ ನಾವು ಅದನ್ನು ವಿರೋಧಿಸುತ್ತಿದ್ದೆವು. ಯಾಕೆಂದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಆಡಳಿತ ಭಾಷೆ. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಎಲ್ಲವನ್ನೂ ನಾವು ವಿರೋಧಿಸುತ್ತೇವೆ.

ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರ್ಕಾರಿ ಪ್ರಾಯೋಜಿತ ಈ ಹಿಂದಿ ಭಾಷೆಯ ಪ್ರಸಾರವನ್ನು ನಮ್ಮ ಮೇಲಿನ ಹಿಂದಿ ಹೇರಿಕೆಯೆಂದೇ ಗುರುತಿಸುತ್ತದೆ. ಏಕೆಂದರೆ ಹಿಂದಿಯೆನ್ನುವ ನಮಗೆ ಸಂಬಂಧವಿಲ್ಲದ ನುಡಿಯನ್ನು ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ತ್ರಿಭಾಷಾ ಸೂತ್ರವನ್ನು ಒಪ್ಪುವ ಮೂಲಕ ನಾಡಿಗರಿಗೆ ನಮ್ಮ ರಾಜ್ಯ ಸರ್ಕಾರಗಳೂ ಕೂಡಾ ಜನತೆಗೆ ತೀವ್ರ ಅನ್ಯಾಯ ಮಾಡಿವೆ. ಹಿಂದಿ ಭಾಷಿಕರು ನಮ್ಮ ನಾಡಿಗೆ ವಲಸೆ ಬಂದಲ್ಲಿ ಅವರಿಗೆ ಯಾವ ರೀತಿಯ ತೊಂದರೆಯೂ ಅಗದಿರಲಿ ಎನ್ನುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿರುವುದು ನಮಗೆ ಕಾಣುತ್ತಿದೆ. ಅಫಿಷಿಯಲ್ ಲಾಂಗ್ವೇಜ್ ಆಕ್ಟ್ ಎಂಬ ಕಾಯ್ದೆಯ ಮೂಲಕ ಹಿಂದಿ ಪ್ರಸಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ತಮಿಳುನಾಡಿಗೆ ಮಾತ್ರಾ ಈ ಕಾಯಿದೆ ಅನ್ವಯವಾಗುವುದಿಲ್ಲ ಎನ್ನುವ ಇಬ್ಬಗೆಯ ನಿಲುವು ತಳೆದಿದೆ. ಈ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಕನ್ನಡ ನಾಡಿಗೂ ಈ ಕಾಯ್ದೆಯಿಂದ ಬಿಡುಗಡೆ ಸಿಗಲಿ ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ.

ಕನ್ನಡ ನಾಡಿನ ಕೇಂದ್ರ ಸರ್ಕಾರಿ ಕಲಿಕಾ ಸಂಸ್ಥೆಗಳಾದ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಮುಂತಾದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ನಮ್ಮ ನಾಡಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯವಾಗಬೇಕು. ಕನ್ನಡ ಬಾರದ, ಹೊರನಾಡಿನಿಂದ ಉದ್ಯೋಗದ ಮೇಲೆ ನಮ್ಮ ನಾಡಿಗೆ ಬರುವವರಿಗೆ ಕನ್ನಡ ಕಲಿಯುವುದನ್ನೂ, ಕನ್ನಡದಲ್ಲಿ ಆಡಳಿತ ನಡೆಸುವುದನ್ನು ಕಡ್ಡಾಯ ಮಾಡಬೇಕು. ಕೇಂದ್ರ ಸರ್ಕಾರಿ ಕಛೇರಿಗಳ ಎಲ್ಲಾ ಅರ್ಜಿ, ನಮೂನೆ, ಸೂಚನೆಗಳು ಕನ್ನಡದಲ್ಲಿರಬೇಕು.

ಕರ್ನಾಟಕದ ಕೇಂದ್ರಸರ್ಕಾರಿ ಹುದ್ದೆಗಳಿಗೆ ನಡೆಸುವ ಬರಹದ ಮತ್ತು ಮೌಖಿಕ ಪರೀಕ್ಷೆಗಳು ಕನ್ನಡದಲ್ಲಿರಬೇಕು. ಹಿಂದಿ ಭಾಷೆಯನ್ನು ಕಲಿತಿರಬೇಕು ಹಾಗೂ ಹಿಂದಿಯಲ್ಲಿ ಅರ್ಜಿ ಸಲ್ಲಿಸಬೇಕು ಅನ್ನುವಂತಹ ನಿಯಮಗಳನ್ನು ನೇಮಕಾತಿಯಿಂದ ಕೈಬಿಡಬೇಕು. ಕೇಂದ್ರ ಸರ್ಕಾರಿ ನೌಕರಿಗೆ ನಡೆಸುವ ಸಂದರ್ಶನಗಳಲ್ಲಿ ಕನ್ನಡದಲ್ಲಿ ಉತ್ತರಿಸುವ ಹಕ್ಕು ಅಭ್ಯರ್ಥಿಗಳಿಗಿರಬೇಕು. ನಮ್ಮ ನಾಡಿನಲ್ಲಿ ಇರುವ ಹಾಗೂ ಹೊಸದಾಗಿ ಆರಂಭವಾಗುವ ಎಲ್ಲ ಕೇಂದ್ರ ಸರ್ಕಾರಿ ಹುದ್ದೆಗಳನ್ನು ನಮ್ಮ ನಾಡಿನವರಿಗೇ ಕೊಡಬೇಕು. ಸಾರ್ವಜನಿಕ ಸಂಪರ್ಕ ಬರುವ ಎಲ್ಲ ಕಡೆಗಳಲ್ಲಿ ಕನ್ನಡದ ಸೂಚನೆಗಳನ್ನು ಕಡ್ಡಾಯವಾಗಿ ಹಾಕಬೇಕು ಎನ್ನುವ ಹಕ್ಕೊತ್ತಾಯ ಮಾಡುತ್ತೇವೆ.

ಕನ್ನಡಿಗರ ಮೇಲಾಗುತ್ತಿರುವ ಎಲ್ಲ ರೀತಿಯ ಹಿಂದಿ ಹೇರಿಕೆಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂಬ ಸಂದೇಶವನ್ನು ಸಾಂಕೇತಿಕವಾಗಿ ಹಿಂದಿ ದಿವಸವನ್ನು ಪ್ರತಿಭಟಿಸುವ/ ಬಹಿಷ್ಕರಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಕರ್ನಾಟಕ ರಾಜ್ಯಸರ್ಕಾರವೂ ಕೂಡಾ ಈ ಕೂಡಲೇ ತ್ರಿಭಾಷಾ ಸೂತ್ರದ ನೀತಿಯಿಂದ ಹಿಂದೆ ಸರಿಯಬೇಕೆಂದೂ ಒತ್ತಾಯಿಸುತ್ತೇವೆ.

ಕನ್ನಡಿಗರೇ, ಹಿಂದಿಯನ್ನು ಒಪ್ಪುವ ಮೂಲಕ ನಮ್ಮ ನಾಡಿನಲ್ಲಿ ನಾವೇ ಅನಾಥರಾಗುವ ದಿನಗಳು ಮುಂದೆ ಬರದಂತೆ ತಡೆಯಲು, ನಮ್ಮ ನಾಡಿನ ಸಾರ್ವಭೌಮ ಭಾಷೆಗೆ ಧಕ್ಕೆ ಬರದಂತೆ ತಡೆಯಲು, ನಮ್ಮ ಮಕ್ಕಳ ಉದ್ಯೋಗಾವಕಾಶಗಳು ಹಿಂದಿ ಜನಗಳ ಪಾಲಾಗದಿರಲು ಇಂದೇ ನಾವು ಈ ಹಿಂದಿ ಹೇರಿಕೆಯನ್ನು ಶತಾಯ ಗತಾಯ ತಡೆಯಬೇಕಾಗಿದೆ. ನಾಡಹಿತ ಕಾಪಾಡಲು ನಡೆಸಲಾಗುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಿರೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇನೆ.

ವಂದನೆಗಳು
ಟಿ.ಏ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Thursday, September 2, 2010

ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ.


ಡಾ. ಸರೋಜಿನಿ ಮಹಿಷಿರವರು ಕರ್ನಾಟಕದಲ್ಲಿರುವ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ನೀಡಿಕೆಯಲ್ಲಿ ಆದ್ಯತೆಯಿರಬೇಕೆಂಬ ಶಿಫಾರೆಸ್ಸನ್ನು ಒಳಗೊಂಡ ವರದಿಯನ್ನು ಎರಡು ದಶಕಗಳ ಹಿಂದೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು. ಈ ವರದಿಯನ್ನು ಜಾರಿಗೆ ತಂದರೆ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರೆಯುವುದಂತು ನಿಜ. ಆದರೆ ನಮ್ಮ ನಾಡಿನಲ್ಲಿ ಸರಕಾರ ನಡೆಸಿರುವ ಮತ್ತು ನಡೆಸುತ್ತಿರುವ ರಾಜಕಾರಣಿಗಳ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಸರೋಜಿನಿ ಮಹಿಷಿರವರ ವರದಿ ಇಷ್ಟು ವರ್ಷವಾದರೂ ಜಾರಿಗೆ ಬಂದಿಲ್ಲ.

ಡಾ.ಸರೋಜಿನಿ ಮಹಿಷಿಯವರ ವರದಿಯನ್ನು ಜಾರಿಗೆ ತಂದು ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಹೆಚ್ಚಿನ ಉದ್ಯೋಗವಕಾಶ ದೊರೆಕಿಸಿಕೊಡಬೇಕಾದುದ್ದು ರಾಜ್ಯ ಸರಕಾರದ ಆದ್ಯ ಕರ್ತವ್ಯ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಯು ಡಾ.ಸರೋಜಿನಿ ಮಹಿಷಿಯವರ ವರದಿಯನ್ನು ಜಾರಿಗೆ ತರಬೇಕೆಂದು ನಿರಂತರವಾಗಿ ರಾಜ್ಯಸರಕಾರವನ್ನು ಒತ್ತಾಯಿಸುತ್ತಾ ಬಂದಿದೆ.

ಇದೇ ನಿಟ್ಟಿನಲ್ಲಿ ಕರವೇ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ೨-೯-೨೦೧೦ ರಂದು ಪ್ರತಿಭಟನೆ ನಡೆಸಿ ಸರೋಜಿನಿ ಮಹಿಷಿಯವರ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.