Thursday, September 9, 2010

ತಡೆ ರಹಿತ ಹಿಂದಿ ಹೇರಿಕೆ ನಿಲ್ಲಲಿ

೨೦೦೯ ರ ಸೆಪ್ಟೆಂಬರ್ ನಲ್ಲಿ ಹಿಂದಿ ಹೇರಿಕೆ ವಿರುದ್ಧ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಮನದಾಳದ ಮಾತು

ಅಕ್ಕರೆಯ ಕನ್ನಡಿಗ,

ಆಗಸ್ಟ್ ತಿಂಗಳಲ್ಲಿ ಭಾರತದ ಎಲ್ಲೆಡೆ ಸ್ವಾತಂತ್ರದ ಹಬ್ಬವನ್ನು ನಮಗೆ ಬಿಡುಗಡೆ ದೊರೆತ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇದರ ಮರು ತಿಂಗಳಲ್ಲೇ ಸ್ವಾತಂತ್ರ್ಯವೆಂಬ ಪದದ ವಿಡಂಬನೆ ಮಾಡುವಂತೆ ನಮ್ಮ ಸ್ವಾತಂತ್ರ ಕಸಿದುಕೊಳ್ಳುವುದರ ಗುರುತಾದ ಹಿಂದಿ ದಿನಾಚರಣೆ, ಹಿಂದಿ ಸಪ್ತಾಹ, ಹಿಂದಿ ಪಕ್ಷಗಳನ್ನು ಆಚರಿಸಲಾಗುತ್ತಿರುವುದನ್ನು ಕಂಡಾಗ ವಿಪರ್ಯಾಸವೆನಿಸುತ್ತದೆ. ಹೌದು, ಸೆಪ್ಟೆಂಬರ್ ೧೪ರಂದು ಹಿಂದಿ ದಿನಾಚರಣೆಯ ಹೆಸರಲ್ಲಿ ಭಾರತ ಸರ್ಕಾರದ ಕೃಪಾಪೋಷಿತ ಅನೇಕ ಕಾರ್ಯಕ್ರಮಗಳನ್ನು ಭಾರತದ ತುಂಬ ನಡೆಸಲಾಗುತ್ತದೆ. ನಮ್ಮ ನಾಡಿನೊಳಗೇ ನಮ್ಮ ಅಸ್ತಿತ್ವಕ್ಕೆ ಸಂಚಕಾರ ತಂದಿರುವ, ಹಿಂದಿಯೇತರರನ್ನು ಭಾರತದ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿರುವ ಭಾರತದ ಭಾಷಾನೀತಿಯನ್ನು ಈ ದಿನವು ಪ್ರತಿನಿಧಿಸುತ್ತದೆ. ನಮ್ಮ ಸ್ವಾತಂತ್ರ ಹರಣದ ಪ್ರತೀಕವಾದ ಈ ಹಿಂದೀ ದಿನಾಚರಣೆಯನ್ನು ಕನ್ನಡಿಗರೆಲ್ಲಾ ವಿರೋಧಿಸಬೇಕಾಗಿದೆ.

ಭಾರತದ ಒಗ್ಗಟ್ಟು ಉಳಿಯಲು ಸಾಮಾನ್ಯ ಸಂಪರ್ಕ ಭಾಷೆಯಾಗಿ ಹಿಂದಿ ಇರಬೇಕು ಎನ್ನುವವರ ಜೊತೆಯಲ್ಲೇ, ಭಾರತ ಕೇಂದ್ರಸರ್ಕಾರದ ಅಧಿಕೃತ ಆಡಳಿತ ಭಾಷೆ ಎನ್ನುವ ಕಾರಣವೂ ಬೆರೆತುಕೊಂಡು ಕನ್ನಡನಾಡಿನ ಮೂಲೆಮೂಲೆಯಲ್ಲಿರೋ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದಿ ಹಬ್ಬವನ್ನು ಆಚರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಎಸಗುವ ಅಪಮಾನವಾಗಿದೆ. ಕನ್ನಡ ನಾಡಿನ ಸರ್ಕಾರವೂ ತ್ರಿಭಾಷಾ ಸೂತ್ರದ ಹೆಸರಲ್ಲಿ ಕನ್ನಡದ ಮಕ್ಕಳಿಗೆ ಬೇಡದೆಯೇ ಹಿಂದಿ ಕಲಿಕೆಯನ್ನು ಹೇರುತ್ತಿರುವುದು ಶೋಚನೀಯವಾಗಿದೆ. ಇಂಥಹ ಭಾಷಾನೀತಿಯ ಕಾರಣದಿಂದಾಗಿ ನಾಡಿನ ಮೇಲಾಗುತ್ತಿರುವ ದುಷ್ಪರಿಣಾಮಗಳು ಅನೇಕ. ತಡೆಯಿರದ ವಲಸೆ, ರೇಲ್ವೇ, ಬ್ಯಾಂಕು ಮೊದಲಾದ ಕಡೆಗಳಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳಿಗೆ ಹೊಡೆತ, ನಮ್ಮೂರಿನ ಅಂಗಡಿ ಮುಂಗಟ್ಟುಗಳಲ್ಲಿ ನಮ್ಮವರಿಗೆ ಹಿಂದಿ ಬರದೆ ಕೆಲಸ ಸಿಗದೆಂಬ ದುಸ್ಥಿತಿ, ಬಾಲ್ಯದಿಂದಲೇ ಕಲಿಕೆಯ ಹೊರೆ… ಇವೆಲ್ಲವೂ ನಮ್ಮ ನಾಡಿನಲ್ಲೇ ನಮ್ಮ ನುಡಿಯನ್ನು ಮೂಲೆಗುಂಪಾಗಿಸುವ ಪ್ರಯತ್ನಗಳೆಂಬುದನ್ನು ನಾಡಿಗರು ಗುರುತಿಸಬೇಕಾಗಿದೆ. ಹಿಂದಿ ಹೇರಿಕೆಗೆ ಮನರಂಜನಾ ಮಾಧ್ಯಮವನ್ನು ಬಳಸಿದಷ್ಟೇ ಪರಿಣಾಮಕಾರಿಯಾಗಿ ಸರ್ಕಾರಿ ಕಛೇರಿಗಳನ್ನೂ ಬಳಸಲಾಗುತ್ತಿದೆ. ಹಿಂದಿ ದಿನಾಚರಣೆ ಹೆಸರಲ್ಲಿ ಹಿಂದಿ ಕಲಿಯಲು ಪ್ರೋತ್ಸಾಹ, ಬಹುಮಾನ, ಭಡ್ತಿಯಂತಹ ಆಮಿಷಗಳನ್ನು ಒಂದೆಡೆ ಬಳಸಲಾಗುತ್ತಿದೆ. ಬ್ಯಾಂಕುಗಳೂ ಸೇರಿದಂತೆ ಪ್ರತಿವರ್ಷ ಇಂತಿಷ್ಟು ಪ್ರಮಾಣದಲ್ಲಿ ಹಿಂದಿಯ ಅನುಷ್ಠಾನ ಮಾಡಬೇಕೆಂಬ ವಾರ್ಷಿಕ ಗುರಿಗಳ ಮೂಲಕ ಆಡಳಿತಾತ್ಮಕ ಹೇರಿಕೆ ನಡೆದಿದೆ. ಭಾರತದ ಯಾವುದೇ ಮೂಲೆಯಲ್ಲಿನ ಯಾವುದೇ ಕೇಂದ್ರಸರ್ಕಾರಿ ಕಛೇರಿಯಲ್ಲಿ ಹಿಂದಿಯಲ್ಲಿ ಸೇವೆ ನೀಡದಿರುವುದು ಅಪರಾಧವೆನ್ನುವ ಬೆದರಿಕೆಗಳ ಮೂಲಕವೂ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಕನ್ನಡಿಗರಾದ ನಾವು ಹಿಂದಿ ಸಾಮ್ರಾಜ್ಯ ಸ್ಥಾಪನೆಯ ಈ ಹುನ್ನಾರವನ್ನು ಅರಿತು ಹಿಂದಿ ಹೇರಿಕೆಯನ್ನು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನೆಲ್ಲ ಕನ್ನಡಿಗರಲ್ಲಿ ಹಿಂದಿ ಹೇರಿಕೆಯ ಬಗ್ಗೆ, ಅದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ, ನಮ್ಮ ಅಸ್ತಿತ್ವವೇ ಇಲ್ಲವಾಗುವ ಬೆದರಿಕೆಯ ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಕನ್ನಡಿಗರೇ, ಹಿಂದಿ ಹೇರಿಕೆಯನ್ನು ನಾವಿಂದು ತಡೆಯದಿದ್ದರೆ ನಾಳೆ ನಮ್ಮ ನಾಡಿನಲ್ಲಿ ನಾವೇ ಅನಾಥರಾಗಬೇಕಾದೀತು ಎಂಬುದನ್ನು ಅರಿತು ಒಂದಾಗಿ ಹಿಂದಿ ಹೇರಿಕೆಯನ್ನು ವಿರೋಧಿಸೋಣ.

ವಂದನೆಗಳು.

ಟಿ. ಏ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ