ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಣಾಳಿಕೆ
ಕನ್ನಡ-ಕನ್ನಡಿಗ-ಕರ್ನಾಟಕಗಳೇ ಕೇಂದ್ರವಾಗಿರುವ ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ೨೦೧೦ನೇ ವರ್ಷದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಪಾಲಿಕೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷವಾಕ್ಯದ ಸಾಕಾರಕ್ಕೆ ಈ ಮೂಲಕ ಮುಂದಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಮತದಾರರಿಗೆ ಈ ಚುನಾವಣೆಯಲ್ಲಿ ಕರವೇ ಬೆಂಬಲಿತ ಅಭ್ಯರ್ಥಿಗಳಿಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಈ ಮೂಲಕ ಕೋರುತ್ತೇವೆ.
ಕರ್ನಾಟಕವನ್ನು ಕಳೆದ ಅರವತ್ತು ವರ್ಷಗಳಿಂದ ಆಳಿದ್ದು ರಾಷ್ಟ್ರೀಯ ಪಕ್ಷಗಳು. ಹರಿದು ಹಂಚಿಹೋಗಿದ್ದ ನಮ್ಮ ನಾಡು ಒಂದಾದಾಗ ಇದ್ದ ಎಲ್ಲಾ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ ಎಂಬುದು ಇವುಗಳ ಕಾರ್ಯವೈಖರಿಗೆ ಸಾಕ್ಷಿ. ಗಡಿ ಸಮಸ್ಯೆ, ನದಿ ನೀರು ಹಂಚಿಕೆ ಸಮಸ್ಯೆಯಂತಹ ತಗಾದೆಗಳು ಇಂದಿಗೂ ಜೀವಂತ. ಕೇಂದ್ರಸರ್ಕಾರಕ್ಕೆ ಹರಿದು ಹೋಗುವ ತೆರಿಗೆ ಹಣದ ಪ್ರಮಾಣ ಅಪಾರವಾಗಿದ್ದರೂ... ನಮ್ಮ ನಾಡಿಗೆ ಬಂದ ಯೋಜನೆಗಳು, ರಸ್ತೆ, ರೈಲು ಮಾರ್ಗಗಳು, ನೆರೆ-ಬರ ಪರಿಹಾರಗಳು ಎಲ್ಲವೂ ನಗಣ್ಯ. ಕೃಷ್ಣಾ ಕಾವೇರಿ ಮಹದಾಯಿ ನದಿನೀರು ಹಂಚಿಕೆಯಿರಲಿ, ಬೆಳಗಾವಿ, ಕಾಸರಗೋಡು, ಹೊಗೆನಕಲ್ ಗಡಿ ತಕರಾರುಗಳಿರಲಿ, ರೈಲ್ವೇ ಯೋಜನೆಗಳಿರಲಿ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಯಾಗಲೀ ಯಾವುದೂ ಕೂಡಾ ಸರಳವಾಗಿ ದಕ್ಕಿಸಿಕೊಡಲಾಗದ ಕೈಲಾಗದತನ ಇವುಗಳದ್ದು. ನಾಡಿನ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಿದ ಒಂದು ನಿದರ್ಶನವೂ ನಮ್ಮ ಮುಂದಿಲ್ಲ. ಕನ್ನಡನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗಳಿಸಿಕೊಡುವಾಗಲಾಗಲೀ, ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ವಿರುದ್ಧವಾಗಲೀ ದನಿಯೆತ್ತಿ ಹೋರಾಡಿದ್ದು ಈ ಯಾವ ರಾಜಕೀಯ ಪಕ್ಷಗಳೂ ಅಲ್ಲ, ಬದಲಾಗಿ ನಾಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ. ಈ ನಾಡಿನ ಹಿತ ಕಾಪಾಡುವ, ನಾಡನ್ನು ಏಳಿಗೆಯ ದಾರಿಯತ್ತ ಒಯ್ಯುವ ಬದ್ಧತೆ ಇರುವುದು ಕನ್ನಡ ಕನ್ನಡಿಗ ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷಕ್ಕೆ ಮಾತ್ರವೇ. ಕರ್ನಾಟಕದಲ್ಲಿ ಈ ಕೊರತೆಯನ್ನು ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯು ಮುಂದಾಗಿದೆ. ಹಾಗಾಗಿ ಕರ್ನಾಟಕದ ಏಳಿಗೆ, ಕನ್ನಡದ ಸಾರ್ವಭೌಮತ್ವ ಸ್ಥಾಪನೆಗೆ ಪೂರಕವಾದ ಕಾರ್ಯಸೂಚಿಗಳೇ ನಮ್ಮ ಪ್ರಣಾಳಿಕೆ. ನಿಮ್ಮೆಲ್ಲರ ಬೆಂಬಲದಿಂದ ಈ ಗುರಿ ಈಡೇರಿಕೆಯತ್ತ ನಮ್ಮ ನಡೆ.
ನೆರೆರಾಜ್ಯಗಳೊಂದಿಗಿನ ಗೌರವಯುತ ಸಂಬಂಧ, ಕೇಂದ್ರಸರ್ಕಾರದಿಂದ ನಮ್ಮ ನಾಡಿಗೆ ಸಿಗಬೇಕಾದ ಸಂಪನ್ಮೂಲದಲ್ಲಿನ ಪಾಲು, ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳುವಿಕೆ, ರಾಜ್ಯದ ಎಲ್ಲಾ ಪ್ರದೇಶಗಳ ಏಳಿಗೆಗೆ ಯೋಜನೆಗಳು, ನಗರ ನಗರಗಳ ನಡುವೆ ಸಾರಿಗೆ ಸಂಪರ್ಕ ಜಾಲ, ನದಿ ನೀರು ಪರಿಸರ ಸಂರಕ್ಷಣೆ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಮನಾದ ಉತ್ತೇಜನ, ಸ್ವಾಭಿಮಾನದ ಬದುಕು ನಾಡಿಗರದ್ದಾಗಲು ಶ್ರಮಿಸುವಿಕೆ, ನಾಡಿನ ಒಳ ಆಡಳಿತ ಯಂತ್ರಕ್ಕೆ ಹಿಡಿದಿರುವ ಭಷ್ಟಾಚಾರದ ತುಕ್ಕು ಬಿಡಿಸಿ ಜನಪರ ಆಡಳಿತ ಜಾರಿ - ಇವೇ ಮೊದಲಾದ ಆಶಯಗಳು ನಮ್ಮವು. ಒಟ್ಟಾರೆ ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಮಂತ್ರ. ಈ ಬಾರಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗಳಲ್ಲಿ ಭಾಗವಹಿಸುವ ಮೂಲಕ ಈ ನಾಡು ಕಟ್ಟುವ ಪಯಣದಲ್ಲಿ ರಾಜಕೀಯದ ಮೊದಲ ಹೆಜ್ಜೆ. ನಿಮ್ಮ ಹಾರೈಕೆಗಳೇ ನಮಗೆ ಶ್ರೀರಕ್ಷೆ.
ನಾಗರೀಕ ಸೌಲಭ್ಯಗಳು:
- ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ರಸ್ತೆಗಳ ವಿಸ್ತರಣೆ, ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
- ಉದ್ಯಾನನಗರಿ ಹೆಸರಿಗೆ ಕಳೆಗಟ್ಟುವಂತೆ ಪ್ರತಿ ಬಡಾವಣೆಯಲ್ಲಿ ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆ.
- ಗಿಡ ನೆಡುವ ಕಾರ್ಯಕ್ರಮಗಳಿಗೆ ಉತ್ತೇಜನ. ಉಚಿತ ಸಸಿ ವಿತರಣೆ ಮತ್ತು ನಿರ್ವಹಣೆ.
- ಮಕ್ಕಳ ಆಟದ ಮೈದಾನ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ.
- ಲಲಿತ ಕಲೆಗಳ ಉತ್ತೇಜನಕ್ಕಾಗಿ ಬಡಾವಣೆ ರಂಗಮಂದಿರಗಳು, ಕಲಾಕೇಂದ್ರಗಳ ರಚನೆ/ ನಿರ್ವಹಣೆ
- ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಬಡಮಕ್ಕಳಿಗೆ ಕಲಿಕೆಗೆ ಸಹಾಯ.
- ಸಣ್ಣಗಲ್ಲಿಗಳಿಗೆ ಕಾಂಕ್ರೀಟ್, ದೊಡ್ಡರಸ್ತೆಗಳಿಗೆ ಡಾಂಬರು, ಸುಭದ್ರವಾದ ಪಾದಚಾರಿ ಮಾರ್ಗಗಳು.
- ಆರೋಗ್ಯಕೇಂದ್ರಗಳನ್ನು ಮೇಲ್ದರ್ಜೆ ಏರಿಸಲಾಗುವುದು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚರಿಕಾ ಕೇಂದ್ರಗಳ ಸ್ಥಾಪನೆ.
- ಸುಸಜ್ಜಿತ ಆಂಬ್ಯುಲೆನ್ಸ್ ಸೇವೆಯನ್ನು ಪರಿಣಾಮಕಾರಿಗೊಳಿಸುವುದು.
- ಬೀದಿದೀಪಗಳ ಸುವ್ಯವಸ್ಥೆ. ಸೌರಶಕ್ತಿ ಚಾಲಿತ ಬೀದಿದೀಪಗಳ ಸ್ಥಾಪನೆಗೆ ಆದ್ಯತೆ.
- ಕೇಂದ್ರಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ನಗರ ನವೀಕರಣ ಯೋಜನೆಗಳ ಅಡಿಯಲ್ಲಿ ನಗರದ ಒಳಚರಂಡಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸುವುದು. ಮೋರಿಗಳ/ ರಾಜಾಕಾಲುವೆಗಳ ಅತಿಕ್ರಮಣ ತೆರವು.
- ಅಂತರ್ಜಲ ಮಟ್ಟ ಹೆಚ್ಚಿಸಲು ಅಗತ್ಯ ಯೋಜನೆಗಳನ್ನು ರೂಪಿಸುವುದು. ಮಳೆಕೊಯ್ಲು ಯೋಜನೆಯನ್ನು ವಿಸ್ತರಿಸುವುದು. ಬೀದಿಬೀದಿಗಳಲ್ಲಿ ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವುದು.
- ಮಾರುಕಟ್ಟೆಗಳು ಮತ್ತು ಕಸಾಯಿಖಾನೆಗಳ ನಿರ್ವಹಣೆಯಲ್ಲಿ ಶುಚಿತ್ವಕ್ಕೆ ಒತ್ತುಕೊಡಲಾಗುವುದು.
- ಸಾರ್ವಜನಿಕ ಜಾಗಗಳನ್ನು ಅತಿಕ್ರಮಿಸುವ ಚಾಳಿಗೆ ಕಡಿವಾಣ. ಅತಿಕ್ರಮಿಸಿರುವ ಪುಟ್‌ಪಾತ್, ಪಾರ್ಕು, ಮೈದಾನಗಳನ್ನು ತೆರವು ಮಾಡಿಸಿ ಸಾರ್ವಜನಿಕರ ಅನುಕೂಲಕ್ಕಾಗೇ ಮೀಸಲಾಗಿಡುವುದು.
- ಚೊಕ್ಕ ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ. ನಗರದಲ್ಲಿ ಕಸವಿಲೇವಾರಿಯನ್ನು ಆಧುನಿಕರಿಸುವುದು. ಪರಿಸರ ಸ್ನೇಹಿ ಜನಸ್ನೇಹಿ ಕಸ ಸಂಗ್ರಹಣೆ ವ್ಯವಸ್ಥೆಯನ್ನು ಬಲಪಡಿಸುವುದು.
- ನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಮೂಲಭೂತಸೌಕರ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ವಿದ್ಯಾರ್ಥಿಗಳನ್ನು ಆಕರ್ಶಿಸಲು ಯೋಜನೆ ರೂಪಿಸುವುದು.
- ಸಾರ್ವಜನಿಕ ಶೌಚಾಲಯಗಳನ್ನು ಎಲ್ಲಾ ಕಡೆಗೆ ವಿಸ್ತರಿಸಿ, ಸರಿಯಾಗಿ ಚೊಕ್ಕಟವಾಗಿಟ್ಟುಕೊಳ್ಳುವುದಕ್ಕೆ ಬೇಕಾದ ಯೋಜನೆ ರೂಪಿಸುವುದು.
- ಬೀದಿನಾಯಿಗಳ, ಉಂಡಾಡಿ ದನಗಳ ಹಾವಳಿ ತಡೆಗೆ ಸಾಕುಪ್ರಾಣಿಗಳ ಸಾಕುವಿಕೆ ಕಾಯ್ದೆಗೆ ಸೂಕ್ತ ತಿದ್ದುಪಡಿ.
- ಬೆಂಗಳೂರನ್ನು ಪ್ರವಾಸಿ ತಾಣವನ್ನಾಗಿಸಿ, ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಸ್ಥಳೀಯ ಹಬ್ಬಗಳಾದ ಕರಗ, ಕಳ್ಳೆಕಾಯಿ ಪರಿಶೆ, ಅವರೆ ಮೇಳ, ಲಾಲ್ ಬಾಗ್ ಹೂಮೇಳ ಮೊದಲಾದವುಗಳನ್ನು ಸಾಂಸ್ಕೃತಿಕ ಪ್ರವಾಸೋದ್ಯಮವನ್ನಾಗಿ ರೂಪಿಸಲಾಗುವುದು.
ಪಾರದರ್ಶಕ ಆಡಳಿತ ವ್ಯವಸ್ಥೆ
- ಸರಳತೆ, ಪಾರದರ್ಶಕತೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣವಿರುವ ಆಡಳಿತ ವ್ಯವಸ್ಥೆ.
- ನಿಮ್ಮ ಜನ ಪ್ರತಿನಿಧಿ ನಿಮಗೆ ಇಪ್ಪತ್ನಾಲ್ಕು ಗಂಟೆಯೂ ಲಭ್ಯ. ತಿಂಗಳಿಗೊಮ್ಮೆ ಜನಸಂಪರ್ಕ ಸಭೆ. ನಗರ ಪಾಲಿಕೆ ಸದಸ್ಯರಿಂದ ಆಗುತ್ತಿರುವ ಸಾಧನೆ ಸಮೀಕ್ಷೆಯ ಮುಕ್ತ ಚರ್ಚೆ.
- ನಗರ ಪಾಲಿಕೆ ಕಛೇರಿ ಕೆಲಸಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಆದ್ಯತೆ.
- ಮಾಹಿತಿ ತಂತ್ರಜ್ಞಾನವೂ ಸೇರಿದಂತೆ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಪಾರದರ್ಶಕವಾದ, ವಿನಾಕಾರಣ ವಿಳಂಬವಾಗದಂತಹ ಚುರುಕುತನವನ್ನು ಆಡಳಿತ ಯಂತ್ರಕ್ಕೆ ತರಲಾಗುವುದು.
- ವಾರ್ಡ್ ಸಮಿತಿಗಳನ್ನು ಪರಿಣಾಮಕಾರಿಯಾಗಿಸಿ, ವಾರ್ಡ್ ಅಭಿವೃದ್ಧಿಗೆ ಸಮಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದು, ಜಾರಿಗೊಳಿಸುವುದು ಮತ್ತು ಪರಿಶೀಲಿಸುವುದು.
- ಆಡಳಿತ ಭಾಷೆಯಾಗಿ ಕನ್ನಡದ ಸಂಪೂರ್ಣ ಜಾರಿಗಾಗಿ ಶ್ರಮಿಸುತ್ತೇವೆ.
- ಕರ್ನಾಟಕ ಸರ್ಕಾರ ಹೊರಡಿಸಿರುವ ನಾಮಫಲಕಗಳ ಕಾಯ್ದೆ ೨೪-ಎ ಯ ಸಂಪೂರ್ಣ ಜಾರಿ.
- ನಗರದ ವಿವಿಧ ರಸ್ತೆಗಳಿಗೆ, ಬಡಾವಣೆಗಳಿಗೆ ಹೊಸದಾಗಿ ಹೆಸರಿಡಬೇಕಾದಾಗ ನಾಡಿನ ಸಂಸ್ಕೃತಿ, ಜನ ಮತ್ತು ಜನಪದವನ್ನು ಬಿಂಬಿಸುವ ಹೆಸರಿಡಲು ಬೇಕಾದ ಅಗತ್ಯ ಕಾಯ್ದೆಯನ್ನು/ ನಿಯಮವನ್ನು ರೂಪಿಸಲಾಗುವುದು.
- ಹೊರನಾಡಿನಿಂದ ಬಂದಿರುವ ವಲಸಿಗರಿಗೆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಅನುಕೂಲವಾಗುವಂತೆ ಕನ್ನಡ ಕಲಿಸುವ ಕಾರ್ಯಕ್ರಮಗಳಿಗೆ ಒತ್ತು.
- ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ವಲಸೆ ಬಂದಿರುವ ಬಡ ಜನತೆಗೆ ಪಡಿತರ, ಮತದಾನ ಗುರುತು ಚೀಟಿಗಳು, ವಸತಿ ಯೋಜನೆಗಳು.
- ನಮ್ಮ ನಾಡಿನ ಪರಂಪರೆ ಇತಿಹಾಸಗಳನ್ನು ಪ್ರತಿಬಿಂಬಿಸುವ ಸ್ಮಾರಕ/ ಪ್ರದೇಶಗಳನ್ನು ಕಾಪಾಡಲು ಆದ್ಯತೆ. ಮೂಲ ಹೆಸರು ಸೊಗಡುಗಳನ್ನು ಉಳಿಸಿಕೊಳ್ಳಲು ಶ್ರಮಿಸುವುದು.
- “ನಮ್ಮ ಬೆಂಗಳೂರು”: ನಾಡಿನ ಯುವ ಜನರಲ್ಲಿ ನಾಡಿನ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸುವ ವಿನೂತನವೂ ವಿಶಿಷ್ಠವೂ ಆದ ಜಾಗೃತಿ ಅಭಿಯಾನ ಕಾರ್ಯಕ್ರಮ.
- ತೆರಿಗೆ ತುಂಬುವ ಅರ್ಜಿ, ನಾನಾ ಸೇವೆಗಳ ಬಿಲ್ಲುಗಳನ್ನು ಕನ್ನಡದಲ್ಲಿ ದೊರೆಯುವಂತೆ ಮಾಡುವುದು.
- ಪಾಲಿಕೆ ವ್ಯಾಪ್ತಿಯಲ್ಲಿ ಜನರಿಗೆ ಕನ್ನಡದಲ್ಲಿ ಎಲ್ಲಾ ಸೇವೆ ಒದಗಿಸುವುದನ್ನು ಕಡ್ಡಾಯಗೊಳಿಸುವುದು. ಕನ್ನಡದಲ್ಲಿ ಸೇವೆಯನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆ ರೂಪಿಸಲು ಶ್ರಮಿಸುವುದು.