Wednesday, March 7, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೧. ಕನ್ನಡಿಗರ ಉದ್ದಿಮೆಗಳ ಉಳಿವು ಮತ್ತು ಉದ್ಯೋಗಕ್ಕಾಗಿ ಹೋರಾಟ

ಕರ್ನಾಟಕ ರಕ್ಷಣಾ ವೇದಿಕೆಯು ಶುರುವಾಗಿ ಸುಮಾರು ಹನ್ನೊಂದು ವರ್ಷಗಳಾದವು. ಈ ಹನ್ನೊಂದು ವರ್ಷಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ನಡೆದು ಬಂದ ದಾರಿ ಬಲು ರೋಚಕ. ಇಂದು ನಾಡಿನ ಅತ್ಯಂತ ಬಲಿಷ್ಠ ಕನ್ನಡಪರ ಸಂಘಟನೆಯಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯು, ಇಂದಿನ ಈ ಸ್ಥಿತಿಯನ್ನು ತಲುಪಲು ಬಹುಪಾಲು ಕಾರಣ ನಾಡಿನ ಎಲ್ಲೆಡೆಯಿಂದ ದೊರೆತ ಜನಬೆಂಬಲ. ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುತ್ತಾ ನಾಡಿನ ಉದ್ದಗಲಕ್ಕೂ ಹಳದಿ ಕೆಂಪು ಬಾವುಟದಡಿಯಲ್ಲಿ ಕನ್ನಡಿಗರನ್ನು ಸಂಘಟಿಸುತ್ತಾ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕಗಳ ರಕ್ಷಣೆ ಮತ್ತು ಏಳಿಗೆಯ ಹೊಣೆ ಹೊತ್ತು ಈ ಪಯಣ ಸಾಗಿದೆ. ಅದಮ್ಯ ಕನ್ನಡಪ್ರೇಮದಿಂದ ನಾವು ಈವರೆಗೂ ನಡೆಸಿರುವ ಸಮಗ್ರ ಹೋರಾಟಗಳ ಚಿತ್ರಣವನ್ನು ನಿಮ್ಮೊಡನೆ ಹಂಚಿಕೊಳ್ಳಲು ಮುಂದಾಗಿದ್ದೇವೆ.
ಕನ್ನಡಿಗರ ಉದ್ದಿಮೆಗಳ ಉಳಿವು ಮತ್ತು ಉದ್ಯೋಗಕ್ಕಾಗಿ ಹೋರಾಟ
ಕನ್ನಡಿಗರ ಮತ್ತು ಕನ್ನಡ ನಾಡಿನ ಏಳಿಗೆಯನ್ನೇ ಪರಮಗುರಿಯನ್ನಾಗಿಸಿ ನೋಡಿದಾಗ ನಾಡಿನ ಉದ್ದಿಮೆಗಳು ಮತ್ತು ಉದ್ಯೋಗಾವಕಾಶಗಳಿಗೆ ಇರುವ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ನಾಡಿನ ಆರ್ಥಿಕತೆ ಮತ್ತು ನಮ್ಮ ಜನರ ಅನ್ನದ ಪ್ರಶ್ನೆ ಬಗೆಹರಿದಾಗಲೇ ಏಳಿಗೆ ಕಾಣುವುದು ಸಾಧ್ಯ ಎಂದೂ ಅರಿವಾಗುತ್ತದೆ. ಹಾಗಾದರೆ ನಮ್ಮೆಲ್ಲರ ಏಳಿಗೆಯ ಮೂಲ ಅಡಗಿರುವುದೇ ಉತ್ಪಾದನಾ ಚಟುವಟಿಕೆಗಳು, ಆರ್ಥಿಕ ಚಟುವಟಿಕೆಗಳು ಹೆಚ್ಚಿದಾಗಲೇ ಅಲ್ಲವೆ? ನಮ್ಮ ಜನರಿಗೆ ಕೈತುಂಬ ಕೆಲಸ ದೊರೆಯದ ಹೊರತು ನಮ್ಮ ಕಣ್ಣಿಗೆಂತು ನಿದ್ದೆ? ಒಂದು ನಾಡಿನಲ್ಲಿ ಕಟ್ಟಿಕೊಳ್ಳುವ ಪ್ರತಿಯೊಂದು ಸವಲತ್ತು, ಸೌಕರ್ಯ, ಉದ್ದಿಮೆಗಳು ಇರುವುದೇ ಆ ನಾಡಿನ ಉದ್ಧಾರಕ್ಕಾಗಿ ಅನ್ನುವ ಸಹಜ ಸತ್ಯ ನಮ್ಮ ಮುಂದಿದ್ದಾಗ ನಮ್ಮ ಗುರಿ ಸ್ಪಷ್ಟತೆ ಪಡೆಯುತ್ತದೆ. ನಮ್ಮ ಜನರಿಗೆ ಕೆಲಸ ಕೊಡಲು ಸಾಧ್ಯವಿಲ್ಲವೆನ್ನುವ ಉದ್ದಿಮೆಗಳ ಅಗತ್ಯ ನಮ್ಮ ನಾಡಿಗೆ ಇಲ್ಲವೇ ಇಲ್ಲ ಎಂದೂ ಸ್ಪಷ್ಟವಾಗುತ್ತದೆ. ಆ ಕಾರಣದಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಉದ್ದಿಮೆಗಳ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದು ಅವನ್ನು ಹೆಚ್ಚಿಸಲು ಮತ್ತು ಆ ವಿಷಯದಲ್ಲಿ ಒದಗುವ ಕುತ್ತನ್ನು ನಿವಾರಿಸಲು ಸದಾ ಶ್ರಮಿಸುತ್ತಿದೆ.

ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕನ್ನಡಿಗರ ಉದ್ದಿಮೆಗಳು ಮತ್ತು ಉದ್ಯೋಗಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಮುಖ್ಯವಾದ ಕೆಲವು ಹೋರಾಟಗಳ ವಿವರ ಇಂತಿದೆ:

ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವುದರಿಂದ ನಮ್ಮ ನಾಡಿನ ಸ್ಥಳೀಯರಿಗೆ ಕೆಲಸಗಳು ದೊರಕುವಂತೆ ಆಗುತ್ತದೆ, ಈ ಮೂಲಕ ಕನ್ನಡಿಗರ ಬಾಳು ಹಸನಾಗುವಂತೆ ಮಾಡಲು ಸಾಧ್ಯವಾಗುತ್ತದೆ, ಆದ್ದರಿಂದ ನಾವು ಈವರೆಗೂ ಅನೇಕ ಬಾರಿ ಈ ವಿಷಯವಾಗಿ ಜನ ಜಾಗೃತಿ ಮೂಡಿಸುತ್ತಾ, ಸರೋಜಿನಿ ಮಹಿಷಿ ವರದಿಯ ಜಾರಿಗೆ ಸರ್ಕಾರದ ಮೇಲೆ ಒತ್ತಡ ತಂದಿದ್ದೇವೆ.

ಹುಬ್ಬಳ್ಳಿಯಲ್ಲಿ ಕೇಂದ್ರಕಛೇರಿ ಹೊಂದಿರುವ ನೈಋತ್ಯ ರೇಲ್ವೇ ವಲಯದ ಡಿ ದರ್ಜೆ ಕೆಲಸಗಳಿಗೆ ನೇಮಕಾತಿ ಮಾಡುವ ಸಮಯದಲ್ಲಿ ಅರ್ಜಿ ತುಂಬುವಾಗಲೇ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ತುಂಬಬೇಕೆಂಬ ನಿಬಂಧನೆ ಹಾಕಿ ಆ ಮೂಲಕ ಹಿಂದಿಭಾಷಿಕರಿಗೆ ಸಲ್ಲದ ಅವಕಾಶ ಮಾಡಿಕೊಟ್ಟ ಕ್ರಮದ ವಿರುದ್ಧ ತೀವ್ರವಾಗಿ ಹೋರಾಟ ಮಾಡಲಾಯಿತು. ಪರೀಕ್ಷಾ. ರೇಲ್ವೆ ಕಛೇರಿಗಳ ಮುಂದೆ ನಮ್ಮ ಹಕ್ಕೊತ್ತಾಯ ಮಂಡಿಸಿ ಧರಣಿ ಮಾಡಲಾಯಿತು. ನಮ್ಮ ಹೋರಾಟಕ್ಕೆ ಮಣಿದ ನೈಋತ್ಯ ರೇಲ್ವೇ ಇಲಾಖೆ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ತಡೆಹಿಡಿಯಿತು. ಇದಾದ ನಂತರ ದೇಶದ ಹಲವು ರಾಜ್ಯಗಳಲ್ಲಿ ಕರವೇ ಹೋರಾಟದಿಂದ ಪ್ರಭಾವಿತರಾದ ರಾಜಕೀಯ ಪಕ್ಷಗಳು ನೇಮಕಾತಿಯಲ್ಲಿ ಆಗುತ್ತಿರುವ ತೊಂದರೆ ಹಾಗೂ ತಾರತಮ್ಯದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಿದವು. ಇದರ ಫಲವಾಗಿ ಇಂದು ಕೇಂದ್ರ ಸರ್ಕಾರ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಮಹತ್ತರವಾದ ಬದಲಾವಣೆಗಳನ್ನು ತಂದಿದೆ. ಈಗ ಆಯಾ ರಾಜ್ಯದ ಅಭ್ಯರ್ಥಿಗೆ ತನ್ನದೇ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಹಾಗೂ ಎಲ್ಲಾ ಕಡೆಯಲ್ಲೂ ಒಂದೇ ಬಾರಿಗೆ ನೇಮಕಾತಿ ನಡೆಯುವುದರಿಂದ ಹೊರರಾಜ್ಯದ ಜನರು ಇಲ್ಲಿ ಪರೀಕ್ಷೆ ಬರೆಯುವುದ ಕಷ್ಟಸಾಧ್ಯ ಆಗಿರುವುದರಿಂದ ನಮ್ಮ ಜನರಿಗೆ ಹೆಚ್ಚಿನ ಉದ್ಯೋಗಗಳು ದೊರಕುವಲ್ಲಿ ಸಹಾಯಕವಾಗಿವೆ. ಇಂತಹ ಮಹತ್ತರವಾದ ಬದಲಾವಣೆಗೆ ನಮ್ಮ ಹೋರಾಟ ನಾಂದಿ ಹಾಡಿತು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ತಮ್ಮ ಬೆಲೆಬಾಳುವ ಜಮೀನನ್ನು ಕಳೆದುಕೊಂಡ ಜನರಿಗೆ ಮತ್ತು ಸಂಸ್ಥೆಯ ಎಲ್ಲ ವಿಭಾಗಗಳಲ್ಲಿನ ಸಿಂಹಪಾಲು ಉದ್ಯೋಗಾವಕಾಶಗಳನ್ನು ಕನ್ನಡಿಗರಿಗೇ ದೊರಕಿಸಿಕೊಡುವಂತೆ ಹೋರಾಟ ಮಾಡಲಾಯಿತು. ಕನ್ನಡಿಗರನ್ನು ಕಡೆಗಣಿಸಿದ್ದ ಈ ಸಂಸ್ಥೆಯ ವಿರುದ್ಧ ಹಲವು ಬಾರಿ ಪ್ರತಿಭಟನೆಗಳನ್ನು ಹಾಗೂ ಪಾದಯಾತ್ರೆಯನ್ನು ಮಾಡಿ ಜನರ ಹಾಗೂ ಸರ್ಕಾರದ ಗಮನವನ್ನು ಈ ಅನ್ಯಾಯದ ವಿರುದ್ಧ ಸೆಳೆಯುವಲ್ಲಿ ಸಫಲವಾಯಿತು. ಇದರ ಪರಿಣಾಮವಾಗಿ ಇಂದು ಇಲ್ಲಿ ಅತಿ ಹೆಚ್ಚು ಪಾಲು ಉದ್ಯೋಗಗಳು ಕನ್ನಡಿಗರಿಗೆ ದೊರಕಿವೆ.

ಹೆಚ್.ಎ.ಎಲ್ . ಬೆಂಗಳೂರು ವಿಭಾಗದ ಹಲವಾರು ಘಟಕಗಳಿಗೆ ಹೊಸದಾಗಿ ನೇಮಕಾತಿ ನಡೆಸಲು ಮುಂದಾಗಿದ್ದ ಹೆಚ್.ಎ.ಎಲ್, ಸುಮಾರು ೬೭೭ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರೆ ನೀಡಿತ್ತು. ಕರೆದಿರುವ ಬಹುತೇಕ ಎಲ್ಲ ಹುದ್ದೆಗಳಿಗೂ ಡಿಪ್ಲಮೋ ಅಥವಾ ಐ.ಟಿ.ಐ. ಪಾಸಾಗಿರುವ ಅಭ್ಯರ್ಥಿಗಳೇ ಬೇಕಾಗಿದ್ದು, ಆ ಎಲ್ಲ ತರಹದ ಹುದ್ದೆಗಳಿಗೂ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ಸ್ಥಳೀಯರಿಗೇ ಆದ್ಯತೆ ನೀಡಬೇಕಿತ್ತು ಮತ್ತು ಅದಕ್ಕೆ ಪೂರಕವಾಗಿ ಕರ್ನಾಟಕದ "ಉದ್ಯೋಗ ವಿನಿಮಯ ಕೇಂದ್ರದಲ್ಲಿ" ನೊಂದಾಯಿಸಿರುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುವುದೆಂದು ನಿಯಮ ಮಾಡಬೇಕಿತ್ತು. ಆದರೆ ಇದಾವುದನ್ನೂ ಮಾಡದೇ ಈ ಹುದ್ದೆಗಳಿಗೆ ಹೊರ ರಾಜ್ಯದ ಅಭ್ಯರ್ಥಿಗಳನ್ನು ತುಂಬುವ ಕೆಲಸಕ್ಕೆ ಮುಂದಾಗಿದ್ದ ಹೆಚ್.ಎ.ಎಲ್. ಸಂಸ್ಥೆಯ ವಿರುದ್ಧ ಪ್ರತಿಭಟಿಸಿ, ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಲಾಯಿತು. ಕಡೆಗೆ ತಮ್ಮ ತಪ್ಪು ಅರಿತುಕೊಂಡ ಸಂಸ್ಥೆ ಕನ್ನಡಿಗರಿಗೆ ಉದ್ಯೋಗವನ್ನು ನೀಡುವ ಭರವಸೆಯನ್ನು ನೀಡಿತು.

ಹಾಗೆಯೇ, ಬೆಂಗಳೂರಿನ ಐಟಿ ಬಿಟಿ ಸಂಸ್ಥೆಗಳೂ ಸೇರಿದಂತೆ ಎಲ್ಲೆಡೆ ಕನ್ನಡಿಗರಿಗೆ ಕೆಲಸ ನೀಡಬೇಕೆಂದು ಒತ್ತಾಯಿಸಿ ಅನೇಕ ಧರಣಿ ಮಾಡಲಾಗಿದೆ. ಕ್ಯಾಂಟೀನ್, ಭದ್ರತಾ ಪಡೆ, ವಾಹನಗಳು ಇತ್ಯಾದಿ ಪೂರಕ ಉದ್ದಿಮೆಗಳಲ್ಲೂ ಕನ್ನಡೇತರರನ್ನು ತಂದು ತುಂಬುವುದನ್ನು ವಿರೋಧಿಸಿ, ಕನ್ನಡಿಗರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಯಿತು.

ಇದರ ಜೊತೆಯಲ್ಲೇ ಕನ್ನಡಿಗ ಉದ್ಯಮಿಗಳಿಗೆ ಅನವಶ್ಯಕ ಕಿರುಕುಳವನ್ನು ನೀಡಿದನ್ನು ಪ್ರತಿಭಟಿಸಿ ಉದ್ಯಮಿಗಳ ಪರವಾಗಿ ಬೆಂಗಳೂರಿನಲ್ಲಿ ಭಾರಿ ಜಾಥಾವನ್ನು ನಡೆಸಲಾಗಿತ್ತು. ನಾಡಿನ ಕುಲಕಸುಬುಗಳಾದ ನೇಕಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ, ಅಕ್ಕಸಾಲಿಕೆ ಮೊದಲಾದವುಗಳನ್ನು ಉಳಿಸಿಕೊಳ್ಳಲು, ಅವಕ್ಕೆ ಅಗತ್ಯ ಬೆಂಬಲ ದೊರಕಿಸಿಕೊಳ್ಳಲು ಶ್ರಮಿಸಲಾಗುತ್ತಿದೆ.

ಇಷ್ಟೇ ಅಲ್ಲದೆ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿನ ಭದ್ರತಾ ಸಿಬ್ಬಂದಿ, ಕಚೇರಿ ನಿರ್ವಹಣಾ ಅಧಿಕಾರಿಗಳು, ಇತ್ಯಾದಿ ಬಹುತೇಕ ಉದ್ಯೋಗಗಳಿಗೆ ಕನ್ನಡೇತರರನ್ನು ನೇಮಿಸಿಕೊಂಡು, ಕನ್ನಡಿಗರಿಗೆ ಅನ್ಯಾಯ ಮಾಡಲಾಗಿತ್ತು. ಇಂತಹ ಕನ್ನಡ ವಿರೋಧಿ ಧೋರಣೆಯಿರುವ ಮೆಟ್ರೋ ಸಂಸ್ಥೆಯ ವಿರುದ್ಧ ಧ್ವನಿಯೆತ್ತಿ, ಮೆಟ್ರೋದಲ್ಲಿ ಎಲ್ಲಾ ವಿಭಾಗಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯಿಂದ ಬೆಂಗಳೂರಿನಲ್ಲಿರುವ ಬಿ.ಎಂ.ಅರ್.ಸಿ.ಎಲ್ ಮುಖ್ಯ ಕಛೇರಿಯ ಮುಂದೆ ಡಿಸೆಂಬರ್ ೨, ೨೦೧೧ ರಂದು ಪ್ರತಿಭಟನೆ ನಡೆಸಿದ್ದೆವು. ಕನ್ನಡಿಗರ ಪರವಾಗಿ ನಾವು ಮಾಡಿದ್ದ ಈ ಹಕ್ಕೊತ್ತಾಯ ಪರಿಣಾಮ ಬೀರಿದ್ದು, ಪ್ರತಿಭಟನೆ ವೇಳೆ ನಾವು ಮನವಿಪತ್ರದಲ್ಲಿ ಪ್ರಸ್ತಾಪಿಸಿದ್ದ ಕೆಲವೊಂದು ವಿಷಯಗಳಿಗೆ ಬಿ.ಎಂ.ಆರ್.ಸಿ.ಎಲ್. ಕಂಪನಿ ಪ್ರತಿಕ್ರಿಯೆ ನೀಡಿದೆ. ಪ್ರತಿಕ್ರಯಿಸುತ್ತಾ, ಉದ್ಯೋಗದ ವಿಚಾರದಲ್ಲಿ ಕನ್ನಡಿಗರಿಗೇ ಆದ್ಯತೆ ನೀಡುವುದಾಗಿ, ಮತ್ತು ಕನ್ನಡ ಬಾರದ ಎಲ್ಲ ಉದ್ಯೋಗಿಗಳಿಗೂ ಕನ್ನಡದಲ್ಲಿ ಓದು ಬರೆಯಲು ಮತ್ತು ಮಾತನಾಡಲು ಕಲಿಸುವುದಾಗಿ ತಿಳಿಸಿದೆ. ಇದು ಕೇವಲ ಆಶ್ವಾಸನೆಯಾಗದೆ ನಿಜವಾಗಿಯೂ ಜಾರಿಗೊಳ್ಳುವಂತಾಗಲು ಒತ್ತಾಯ ತರುವುದು ನಮ್ಮೆಲ್ಲರ ಮುಂದಿನ ಜವಾಬ್ದಾರಿಯಾಗಿದೆ.

ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಆದ್ಯತೆ ನೀಡದ ಸಂಸ್ಥೆಗಳ ವಿರುದ್ಧ ಜನಜಾಗೃತಿಗೆ ಆದ್ಯತೆ ನೀಡಲಾಗುವುದು ಮತ್ತು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ನಮ್ಮ ಹೋರಾಟಗಳನ್ನು ನಿರಂತರವಾಗಿ ಮುಂದುವರೆಸಲಾಗುವುದು.
ಕನ್ನಡಿಗರ ಉದ್ಯೋಗ ಮತ್ತು ಉದ್ದಿಮೆ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: