Wednesday, March 21, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ: ೫. ಮನರಂಜನಾ ಕ್ಷೇತ್ರದಲ್ಲಿ ಕನ್ನಡ ಸಾರ್ವಭೌಮತ್ವಕ್ಕಾಗಿ ಹೋರಾಟ

ಒಂದು ನಾಡಿನ ಜನಜೀವನದ ಬಹುಮುಖ್ಯ ಅಂಗ ಆ ನಾಡಿನ ಮನರಂಜನಾ ಮಾಧ್ಯಮ ಕ್ಷೇತ್ರ. ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ನಮ್ಮ ನಾಡಿನಲ್ಲಿ ಮನರಂಜನಾ ಕ್ಷೇತ್ರದಲ್ಲೂ ಕನ್ನಡದ ಸಾರ್ವಭೌಮತ್ವ ಸ್ಥಾಪನೆಯೂ ನಮ್ಮ ಗುರಿಗಳಲ್ಲೊಂದು. ಕನ್ನಡ ಮನರಂಜನಾ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ನಡೆಸಿದ ಹೋರಾಟಗಳು ಅನೇಕ. ೨೦೦೪ರ ಸುಮಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯು, ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎನ್ನುವ ಕಾರಣದಿಂದಾಗಿ ಪರಭಾಷಾ ಚಿತ್ರಗಳ ಬಿಡುಗಡೆಗಾಗಿ ಒಂದು ನಿಯಮವನ್ನು ರೂಪಿಸಿ ಅದರಂತೆ ನಿಗದಿತ ಪ್ರತಿಗಳಷ್ಟನ್ನು ಮಾತ್ರಾ, ಅದೂ ಮೂಲಚಿತ್ರ ಬಿಡುಗಡೆಯಾದ ಏಳುವಾರದ ಅಂತರದ ನಂತರ ಬಿಡುಗಡೆ ಮಾಡಬೇಕೆಂಬ ನಿಯಮ ಜಾರಿಗೆ ತಂದಿತು. ಈ ನಿಯಮವನ್ನು ಜಾರಿಗೆ ತರುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಚಿತ್ರರಂಗದ ಬೆಂಬಲಕ್ಕೆ ಸಂಪೂರ್ಣವಾಗಿ ಸನ್ನದ್ಧವಾಗಿ ನಿಂತಿತು. ಒಂದು ಹಂತದಲ್ಲಿ ಕನ್ನಡಿಗರ ಈ ಹೋರಾಟ ಉಗ್ರಸ್ವರೂಪ ಪಡೆದುಕೊಂಡಿತು. ಹೋರಾಟದಲ್ಲಿ ಸಹಕರಿಸದೆ ಪರಭಾಷಾ ಚಿತ್ರಗಳನ್ನು ಎಗ್ಗುಸಿಗ್ಗಿಲ್ಲದೆ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳ ವಿರುದ್ಧ ಉಗ್ರವಾಗಿ ಪ್ರತಿಭಟಿಸಲಾಯ್ತು. ಎಂದಿನಂತೆ ವೇದಿಕೆಯ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ, ಲಾಠಿಬೂಟುಗಳ ಸನ್ಮಾನಗಳು ನಡೆದು ಅನೇಕರಿಗೆ ಜೈಲುವಾಸಗಳೂ ಆದವು. ಏನಾದರೇನು? ಈ ಹೋರಾಟದ ಪರಿಣಾಮವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಕನ್ನಡ ಚಿತ್ರ ಪ್ರದರ್ಶನ ಆರಂಭವಾಯಿತು.

ಹಾಗೆಯೇ ನಮ್ಮ ಹೋರಾಟವು ನಿಯಮ ಮುರಿದ ಕರ್ನಾಟಕ ವಾಣಿಜ್ಯ ಮಂಡಲಿಯ ಸದಸ್ಯರ ವಿರುದ್ಧವೂ ನಡೆಯಿತು. ಶಿವಾಜಿ ತಮಿಳು ಚಲನಚಿತ್ರ ನೂರಾರು ಕೇಂದ್ರದಲ್ಲಿ ಬಿಡುಗಡೆಗೊಳ್ಳಲು ಅಣಿಯಾಗಿದ್ದಾಗ ತೀವ್ರ ಪ್ರತಿಭಟನೆಗಳು ನಡೆದು ಬಿಡುಗಡೆಯನ್ನು ಹದಿಮೂರು ಕೇಂದ್ರಗಳಿಗೆ ಸೀಮಿತಗೊಳಿಸಲಾಯಿತು. ಬೆಂಗಳೂರಿನಲ್ಲಿ ಆರಂಭವಾದ ಖಾಸಗಿ ಎಫ್‌ಎಂ ವಾಹಿನಿಗಳು ಸಂಪೂರ್ಣವಾಗಿ ಕನ್ನಡವನ್ನು ಕಡೆಗಣಿಸಿ ಹಿಂದಿ ಹಾಡುಗಳ ಪ್ರಸಾರಕ್ಕೆ ಮುಂದಾದಾಗ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕಿಳಿಯಿತು. ಕನ್ನಡಿಗರ ಎಚ್ಚರಿಕೆ ಮಾತುಗಳಿಗೆ ಮಣಿಯದೇ ತಮ್ಮ ಹಟವನ್ನು ಮುಂದುವರಿಸಿದಾಗ ಅಂತಹ ರೇಡಿಯೋ ಕೇಂದ್ರಗಳ ವಿರುದ್ಧ ಉಗ್ರವಾದ ಪ್ರತಿಭಟನೆಗಳನ್ನು ನಡೆಸಲಾಯಿತು. ಇಂತಹ ರೇಡಿಯೋ ವಾಹಿನಿಗಳ ಕಾರ್ಯಕ್ರಮಗಳನ್ನು ಬೀದಿ ಬೀದಿಗಳಲ್ಲಿ ಪ್ರತಿಭಟಿಸಲಾಯಿತು. ಇಂತಹ ಸಂಘಟಿತ ಹೋರಾಟದ ಫಲವಾಗಿ ಇದೀಗ ಬೆಂಗಳೂರಿನ ಬಹುತೇಕ ಖಾಸಗಿ ಎಫ಼್.ಎಂ ವಾಹಿನಿಗಳಲ್ಲೀಗ ಕನ್ನಡ ರಾರಾಜಿಸುತ್ತಿದೆ. ವಾರವೊಂದರಲ್ಲಿ ಮೂರ್ನಾಲ್ಕು ಗಂಟೆ ಕನ್ನಡ ಪ್ರಸಾರ ಮಾಡುತ್ತಿದ್ದ ವಾಹಿನಿಗಳು, ನಮ್ಮದು ಬಾಲಿವುಡ್ ಹಾಡುಗಳ ಕೇಂದ್ರ ಎನ್ನುತ್ತಿದ್ದ ಕೇಂದ್ರಗಳು ಇದೀಗ ನಮ್ಮದು ೧೦೦% ಕನ್ನಡ ೧೦೧% ಕನ್ನಡ ಅನ್ನುವಂತಾಗಿದೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: