Monday, March 12, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೩. ನಾಡಿನ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ

ನಾಡಿನ ರೈತ ಸಮುದಾಯದ ಸಮಸ್ಯೆಗಳಿಗೆ ಸದಾ ಕರ್ನಾಟಕ ರಕ್ಷಣಾ ವೇದಿಕೆಯು ಸ್ಪಂದಿಸುತ್ತಿದ್ದು ರೈತಪರವಾದ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ.
ದುಡಿದ ದುಡಿಮೆಯನ್ನೆಲ್ಲಾ ಕರಗಿಸಿ ಮನೆಗಳನ್ನು ಮುಳುಗಿಸುತ್ತಿದ್ದ, ನಾಡಿನ ರೈತ ಕುಟುಂಬಗಳ ಸಾಲು ಸಾಲು ಸಾವಿಗೆ ಕಾರಣವಾಗಿದ್ದ ಆನ್ ಲೈನ್ ಲಾಟರಿಯು ನಿಷೇಧವಾಗಲು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಉಗ್ರಹೋರಾಟ ಬಹುಪಾಲು ಕಾರಣವೆನ್ನಬಹುದು. ಅಂದು ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿ ಆನ್ ಲೈನ್ ಲಾಟರಿ ನಿಷೇಧವಾಗುವಂತೆ ಮಾಡಲಾಯಿತು.
ತೆಂಗು ಬೆಳೆಗೆ ನುಸಿ ಪೀಡೆ ಬಂದು ನಾಡಿನ ರೈತ ತತ್ತರಿಸುತ್ತಿದ್ದಾಗ ತಾತ್ಕಾಲಿಕ ಪರಿಹಾರವಾಗಿ ಕಡೆಪಕ್ಷ ನೀರಾವನ್ನಾದರೂ ಇಳಿಸಿ ಮಾರಲು ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ನಾಡಿನೆಲ್ಲೆಡೆ ರೈತ ಬಾಂಧವರೊಂದಿಗೆ ಸೇರಿ ನೀರಾ ಚಳವಳಿಯನ್ನು ನಡೆಸಲಾಯಿತು.
ರಸಗೊಬ್ಬರ ಕೊರತೆ, ಕಳಪೆ ಬೀಜದ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನಾದ್ಯಂತ ನಾನಾ ಕಡೆಗಳಲ್ಲಿ ಜಾಥಾಗಳನ್ನೂ, ಪ್ರತಿಭಟನೆಗಳನ್ನೂ ಸಂಘಟಿಸಲಾಯಿತು. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ರೈತ ಮುಂದಾದಾಗ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿ ಆ ಭಾಗದ ಜನತೆ ತತ್ತರಿಸುತ್ತಿದ್ದಾಗ, ಗದಗ ಜಿಲ್ಲೆಯಲ್ಲಿ ನೆರೆಯಿಂದ ಕಂಗಾಲಾಗಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯು ಸ್ಥಳೀಯ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಪರಿಹಾರ ವಿತರಣೆ ಕಾರ್ಯ ಸುಸೂತ್ರವಾಗಿ ನಡೆಯಲು ಕಾರಣವಾಯಿತು.
ನಮ್ಮ ರೈತರ ಅಸ್ತಿತ್ವಕ್ಕೇ ಧಕ್ಕೆ ತರುತ್ತಿದ್ದ, ನೆರೆರಾಜ್ಯಗಳಿಂದ ಆಗುತ್ತಿದ್ದ ಕಳಪೆ ಹಾಲು ಪೂರೈಕೆಯ ವಿರುದ್ಧವಾಗಿ ದಿಟ್ಟ ಹೋರಾಟ ನಡೆಸಲಾಯಿತು. ಬೆಂಗಳೂರಿನಲ್ಲಿ ಹೊಸದಾಗಿ ಬಿ.ಡಿ.ಎ. ಆರಂಭಿಸಲು ಯೋಜಿಸಿದ್ದ ಅರ್ಕಾವತಿ ಬಡಾವಣೆಗಾಗಿ ಸುತ್ತಲಿನ ಹಳ್ಳಿಗಳ ನೂರಾರು ರೈತಾಪಿ ಜನರನ್ನು ಒಕ್ಕಲೆಬ್ಬಿಸುವ, ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ಉಗ್ರವಾಗಿ ಪ್ರತಿಭಟಿಸಲಾಯ್ತು.
ಅಂತರರಾಜ್ಯ ನದಿ ಹಂಚಿಕೆಯಾಗಿರಲೀ, ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯವಾಗಿರಲೀ ಮಣ್ಣಿನ ಮಕ್ಕಳ ಹಿತ ಕಾಯಲು ಕರ್ನಾಟಕ ರಕ್ಷಣಾ ವೇದಿಕೆ ಅನೇಕಾನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು, ರಾಜ್ಯ ರೈತಸಂಘದೊಂದಿಗೆ ವಿಷಯಾಧಾರಿತ ಹೋರಾಟಗಳಲ್ಲಿ ಕೈಜೋಡಿಸಿದೆ. ಇಂದಿನ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಮ್ಮ ನಾಡಿನ ರೈತರಿಗೆ ಬೇಕಾಗಿರುವ ಪರಿಣಿತಿ, ತಂತ್ರಜ್ಞಾನ, ಮಾಹಿತಿಗಳ ಬಗ್ಗೆ ತರಬೇತಿ ನೀಡುವ, ಬೆಳೆದ ಬೆಳೆಗೆ ಸೂಕ್ತ ಲಾಭ ಗಳಿಸಲು ಅನುಕೂಲವಾಗುವ, ತಮ್ಮ ಬೆಳೆಗೆ ಮಾರುಕಟ್ಟೆ ಗಳಿಸಿಕೊಳ್ಳುವ, ವಿಸ್ತರಿಸಿಕೊಳ್ಳುವ ಎಲ್ಲಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವ ಯೋಜನೆಗಳನ್ನು ರೂಪಿಸುತ್ತಿದೆ. ನಾಡಿನ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವೆಡೆ ಮುಂದೆಯೂ ಅನೇಕ ಹೋರಾಟಗಳನ್ನು ಮಾಡಲಾಗುವುದು.