Sunday, April 1, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೬. ಕನ್ನಡ ನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಹೋರಾಟ

ಆರಂಭದಲ್ಲಿ ನಾಡಿನ ಗಣ್ಯ ಸಾಹಿತಿ ವಲಯಕ್ಕೆ ಮಾತ್ರಾ ಸೀಮಿತವಾಗಿದ್ದ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಕ್ಕೊತ್ತಾಯವನ್ನು ನಾಡಿನ ಸ್ವಾಭಿಮಾನದ ಚಳವಳಿಯನ್ನಾಗಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಸಾವಿರಾರು ಕನ್ನಡಿಗರ ಜಾಥಾವನ್ನು ಸಂಘಟಿಸಲಾಗಿತ್ತು. ಕೇಂದ್ರಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ರೈಲುತಡೆಯಂತಹ ಅನೇಕಾನೇಕ ಹೋರಾಟಗಳು ನಡೆದವು. ವರ್ಷಗಳ ಕಾಲ ಕನ್ನಡದ ವೀರಸೇನಾನಿಗಳು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಒತ್ತಾಯಿಸಿ ನಡೆಸಿದ ಚಳವಳಿ ಇದೀಗ ಫಲ ನೀಡಿದೆ. ಆದರೂ ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ, ಕನ್ನಡ, ಕನ್ನಡಿಗರೆಂದರೆ ಅದೆಷ್ಟು ಅಸಡ್ಡೆ ಇದೆ ಅನ್ನುವುದನ್ನು ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಹೋರಾಟ ಮಾಡಬೇಕಾಗಿರುವ ಪರಿಸ್ಥಿತಿಯೇ ತೋರಿಸಿಕೊಡುತ್ತಿದೆ. ಮೊದಲಿಗೆ ೨೦೦೪ರಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಪಟ್ಟ ಕಟ್ಟುವಾಗ ಯಾವ ಸಮಿತಿ, ಯಾವ ನಿಬಂಧನೆಯೂ ಇರಲಿಲ್ಲ. ಇದೀಗ ಕನ್ನಡದ ವಿಷಯಕ್ಕೆ ಬಂದಾಗ ಇವೆಲ್ಲವನ್ನೂ ಹುಟ್ಟುಹಾಕಲಾಯಿತು. ಮೊದಲಿಗೆ ಭಾಷಾ ಹಳಮೆ ಒಂದು ಸಾವಿರ ವರ್ಷಗಳು ಎಂದಾಗ ಕನ್ನಡಕ್ಕೆ ಅಂತಹ ಹಳಮೆ ಇದೆ ಎನ್ನುವುದು ನಿರ್ವಿವಾದವಾಗಿ ಸಾಬೀತು ಮಾಡಲಾಯಿತು. ಕೂಡಲೇ ಆ ನಿಬಂಧನೆಯನ್ನು ಸಾವಿರದೈನೂರು ವರ್ಷಗಳಿಗೆ ಏರಿಸಲಾಯಿತು. ಯಾವ ಯಾವ ನಿಬಂಧನೆಗಳನ್ನು ತಮಿಳು ಪೂರೈಸುತ್ತದೋ ಮತ್ತು ಇತರೆ ಭಾಷೆಗಳು ಪೂರೈಸುವುದಿಲ್ಲವೋ ಅವನ್ನು ನಿಬಂಧನೆಗಳನ್ನಾಗಿಸಿ ನಿಮಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗದು ಎಂದು ಹೇಳುವ ಉದ್ದೇಶವಿರುವುದನ್ನು ಈ ನಡೆ ತೋರಿಸುವುದಿಲ್ಲವೇ? ಒಟ್ಟಿನಲ್ಲಿ ಕನ್ನಡ ತೆಲುಗು ಭಾಷಾ ಪಂಡಿತರು ಸಾವಿರದೈನೂರು ವರ್ಷಗಳ ಭಾಷಾ ಹಳಮೆಯನ್ನು ಹೊಡೆದಾಡಿ ಸಾಬೀತು ಮಾಡಬೇಕಾಯಿತು.


ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವುದನ್ನು ತಡೆಯಲು ಅಥವಾ ಸಾಧ್ಯವಾದಷ್ಟು ಮುಂದೂಡಲು ಹೇಗೆ ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸಲಾಯಿತು ಎಂಬುದನ್ನು ನೋಡಿದರೆ ಒಕ್ಕೂಟ ವ್ಯವಸ್ಥೆಯೆಂಬುದು ನಿಜಕ್ಕೂ ಕೆಲಸ ಮಾಡುತ್ತಲೇ ಇಲ್ಲವೇನೋ ಅನ್ನಿಸುತ್ತದೆ. ಯಾಕೆ ವಿಶ್ವ ತಮಿಳು ಸಂಘ ತನಗೆ ಸಂಬಂಧವಿಲ್ಲದಿದ್ದರೂ ಸಮಿತಿಯನ್ನೇ ರದ್ದು ಮಾಡಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಾಂಧಿ ಎನ್ನುವವರ ಮೂಲಕ ಏಕೆ ದಾಖಲಿಸಿತು? ತಮಿಳುನಾಡು ಸರ್ಕಾರ ತನಗೂ ಈ ಮೊಕದ್ದಮೆಗೂ ಯಾವ ಸಂಬಂಧವೂ ಇಲ್ಲ ಅಂದಿದ್ದು ಯಾಕೆ? ಈ ತಕರಾರು ಅರ್ಜಿಯನ್ನು ಇನ್ನೇನು ಸಮಿತಿ ತನ್ನ ಕೊನೆಯ ನಿರ್ಣಾಯಕ ಸಭೆಯನ್ನು ನಡೆಸುವ ಮುನ್ನ ಸಲ್ಲಿಸಲಾಯಿತು ಏಕೆ? ಒಕ್ಕೂಟ ವ್ಯವಸ್ಥೆಯೆಂದರೆ ಇಂತಹ ತೊಡರುಗಾಲು ಹಾಕುವುದೇ ಏನು? ಇಂತಹ ತಾರತಮ್ಯದ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಿದ್ದು, ಕನ್ನಡಕ್ಕೆ ಹೆಸರಿಗೆ ಮಾತ್ರಾ ಸಿಕ್ಕಿರುವ ಶಾಸ್ತ್ರೀಯ ಭಾಷಾ ಸ್ಥಾನಮಾನ ಪೂರ್ಣಪ್ರಮಾಣದಲ್ಲಿ ಸಿಗುವ ತನಕ ವಿಶ್ರಮಿಸುವ ಮಾತೇ ಇಲ್ಲ.

ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: