Tuesday, April 3, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೭. ಕನ್ನಡಿಗರ ಮೇಲಿನ ಹಿಂದಿ ಹೇರಿಕೆ ವಿರುದ್ಧ ನಿರಂತರ ಹೋರಾಟ

ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಕಡೆಗಣಿಸಿ ದಶಕಗಳಿಂದ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಸರ್ಕಾರದ ನಡವಳಿಕೆ ಒಕ್ಕೂಟವೊಂದರಲ್ಲಿ ಎಲ್ಲರೂ ಸಮಾನರು ಅನ್ನುವ ಮಾತನ್ನೇ ಅಳಿಸಿಹಾಕುತ್ತಿದೆ. ಕೇಂದ್ರಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯಿಂದಾಗಿ ಕನ್ನಡನುಡಿ ಮತ್ತು ಕನ್ನಡಿಗರ ಬದುಕುಗಳು ಅಳಿಸಿಹೋಗುತ್ತಿರುವುದನ್ನು ಕಂಡುಕೊಂಡಿದ್ದು ಎಲ್ಲ ಸ್ವರೂಪದ ಹಿಂದಿ ಹೇರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ೨೦೦೬ ರಿಂದ ನಿರಂತರವಾಗಿ ಹೋರಾಡುತ್ತಿದೆ.
ಶಾಲಾಮಕ್ಕಳ ಮೇಲೆ ತ್ರಿಭಾಷಾ ಸೂತ್ರದ ಶೂಲ ಹೇರಿ ಚಿಕ್ಕಂದಿನಿಂದಲೇ ಹಿಂದಿಹೇರಿಕೆಯನ್ನು ಆರಂಭಿಸಲಾಗುತ್ತದೆ. ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುವ ಹಸಿ ಹಸಿ ಸುಳ್ಳನ್ನು ನಮ್ಮ ಮಕ್ಕಳ ತಲೆಗೆ ತುಂಬಲಾಗುತ್ತದೆ. ದೇಶದ ಒಗ್ಗಟ್ಟಿನ ಕಥೆ ಹೇಳಿ, ದೇಶ ಒಡೆಯುವ ಬೆದರಿಕೆ ಹುಟ್ಟಿಸಿ ಹಿಂದಿಯನ್ನು ಒಪ್ಪಿಸುವ ಪ್ರಯತ್ನಗಳಾಗುತ್ತಿವೆ. ಬ್ಯಾಂಕ್, ರೇಲ್ವೆ ಕೆಲಸಗಳು ಬೇಕಾದರೆ ಅರ್ಜಿ ಹಿಂದಿಯಲ್ಲಿ ಬರೆಯಿರಿ ಎನ್ನುವ ನಿಯಮವೇ ಈ ದೇಶದಲ್ಲಿದೆ. ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದಿ ಕಲಿಯದಿದ್ದರೆ ಉಳಿಗಾಲವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರಸರ್ಕಾರ ತನ್ನ ಅಧಿಕೃತ ಆಡಳಿತ ಭಾಷೆಯನ್ನಾಗಿ ಇಂಗ್ಲಿಷ್ ಜೊತೆ ಬರಿಯ ಹಿಂದಿಯನ್ನು ಮಾತ್ರಾ ಒಪ್ಪಿದೆ. ಆ ಕಾರಣಕ್ಕಾಗಿ ನಮ್ಮ ತೆರಿಗೆಯ ಹಣದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೇವಲ ಹಿಂದಿಪ್ರಚಾರವೆಂಬ ಹಿಂದಿ ಹೇರಿಕೆಗಾಗಿಯೇ ಪ್ರತಿವರ್ಷ ವೆಚ್ಚ ಮಾಡಲಾಗುತ್ತದೆ. ಲಜ್ಜೆಯಿಲ್ಲದೆ ಹಿಂದಿಯನ್ನು ಹೇರುವುದೇ ತನ್ನ ಉದ್ದೇಶವೆಂದು ಕೇಂದ್ರಸರ್ಕಾರ ಸಾರಿ ಸಾರಿ ಹೇಳಿಕೊಳ್ಳುತ್ತಿದೆ.ಹಿಂದಿ ಭಾಷಿಕ ಭಾರತದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ಅಲ್ಲಿನ ಸರ್ಕಾರಿ ಕಛೇರಿಯಲ್ಲಿ ಹಿಂದಿಯಲ್ಲೇ ಸೇವೆ ಕೇಳಿ ಪಡೆಯುವ ಹಕ್ಕನ್ನು ಈ ವ್ಯವಸ್ಥೆ ದಯಪಾಲಿಸಿದೆ. ಇದಕ್ಕೆಲ್ಲಾ ಕಳಸವಿಟ್ಟಂತೆ ಪ್ರತಿವರ್ಷ ಹಿಂದಿ ದಿನಾಚರಣೆ, ಹಿಂದಿ ಪಕ್ಷಾಚರಣೆ, ಹಿಂದಿ ಮಾಸಾಚರಣೆ ಮಾಡುತ್ತಾ ಕನ್ನಡಿಗರ ಬದುಕನ್ನೇ ಈ ಹಿಂದಿ ಭೂತಕ್ಕೆ ಬಲಿಕೊಡಲು ಹೊರಟಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಬದುಕಿಗೆ ಗ್ರಹಣದಂತೆ ಆವರಿಸಿರುವ ಈ ಹಿಂದಿ ಕೊಳೆಯನ್ನು ತೊಡೆಯಲು ದೃಡ ನಿಶ್ಚಯ ಮಾಡಿದ್ದು, ಕನ್ನಡಿಗರಲ್ಲಿ ಜಾಗೃತಿ ಹುಟ್ಟುಹಾಕುತ್ತಿದೆ. ಹಿಂದಿ ದಿನಾಚರಣೆಯನ್ನು ಪ್ರತಿಭಟಿಸುವ ಮೂಲಕ, ಅಂತಹ ಕಾರ್ಯಕ್ರಮಗಳಲ್ಲೇ ಹಿಂದಿ ಹೇರಿಕೆಯ ವಿರಾಟ್ ಸ್ವರೂಪದ ಬಗ್ಗೆ ಜಾಗೃತಿ ಭಾಷಣಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದೆ. ಕೇಂದ್ರಸರ್ಕಾರ ತನ್ನಭಾಷಾ ನೀತಿಯನ್ನು ಬದಲಿಸಿಕೊಳ್ಳದೇ, ಕನ್ನಡನಾಡಿನಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಮಾನ್ಯ ಮಾಡದೇ ಹಿಂದಿಯನ್ನು ಹೇರಿಕೆ ಮಾಡುತ್ತಿರುವುದನ್ನು ನಿಲ್ಲಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆಯುವುದು ನಿಶ್ಚಿತವಾಗಿದೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: