Wednesday, December 10, 2008

ಉಚ್ಚ ನ್ಯಾಯಾಲಯದಲ್ಲಿ ಸಂದ ಜಯ

ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ಅತಿ ದೊಡ್ಡ ಸಾಮಾಜಿಕ ಸಂಘಟನೆಯಾಗಿದ್ದು ಹತ್ತಾರು ಲಕ್ಷ ಸದಸ್ಯರನ್ನು ಹೊಂದಿದೆ. ತನ್ನ ಕನ್ನಡ ಪರ ಕಾಳಜಿಯಿಂದ ನಾಡಿನ ಜನತೆಯ ಮೆಚ್ಚಿನ ಸಂಘಟನೆಯಾಗುವುದರ ಜೊತೆಯಲ್ಲೇ ಕನ್ನಡಿಗರ ನಾಳೆಗಳ ಆಶಾಕಿರಣವಾಗಿದೆ. ಸಂಘಟನೆಯ ಬೆಳವಣಿಗೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸುವ ಉದ್ದೇಶದಿಂದ ಕೆಲವ್ಯಕ್ತಿಗಳು ಸಂಘಟನೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ತಮ್ಮ ಕೆಟ್ಟ ನಡವಳಿಕೆಯಿಂದಾಗಿ ಸಂಘಟನೆಯಿಂದ ಹೊರಹಾಕಲ್ಪಟ್ಟಿದ್ದರೂ ಅನಧಿಕೃತವಾಗಿ ತಮ್ಮಗಳನ್ನೇ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೆಂದು ಬಿಂಬಿಸಿಕೊಳ್ಳುತ್ತಿದ್ದರು.

ಹೀಗೆ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ದುರುಪಯೋಗಿಸಿಕೊಳ್ಳುವುದನ್ನು ತಡೆಯಲು ದಿನಾಂಕ ೧೮.೦೯.೨೦೦೬ರಂದು ಶ್ರೀ ನಾರಾಯಣಗೌಡರ ನೇತೃತ್ವವನ್ನು ಮಾನ್ಯ ಮಾಡುವ ಆದೇಶವನ್ನು ಹೊರಡಿಸುವ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳು, ಸಂಘ ಮತ್ತು ಸಂಸ್ಥೆ, ಬೆಂಗಳೂರು ಇವರು ಕ್ರಮ ಕೈಗೊಂಡಿದ್ದರು.

ಜಿಲ್ಲಾ ನೋಂದಣಾಧಿಕಾರಿಗಳ ಈ ಆದೇಶವನ್ನು ರಾಜ್ಯ ಹೈಕೋರ್ಟಿನಲ್ಲಿ ಶಿವರಾಮೇಗೌಡ ಮತ್ತಿತರರು ಪ್ರಶ್ನಿಸಿದ್ದರು. ಸಂಘಟನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಮಾನ್ಯ ರಾಜ್ಯ ಉಚ್ಚನ್ಯಾಯಾಲಯ ಇವರುಗಳ ತಕರಾರು ಅರ್ಜಿಯನ್ನು ವಜಾ ಮಾಡಿ ಜಿಲ್ಲಾ ನೋಂದಣಾಧಿಕಾರಿಗಳು ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.