Sunday, April 15, 2012

ಬೆಳಗಾವಿ ಕುರಿತು ಎಂ.ಇ.ಎಸ್. ಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ ಖಂಡಿಸಿ ಪ್ರತಿಭಟನೆ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಪಿತೂರಿ ನಡೆಸಿ ಮುಂಬಯಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಡದ್ರೋಹಿ ಎಂ.ಇ.ಎಸ್. ಸಂಘಟನೆಗೆ ಮಹಾರಾಷ್ಟ್ರ ಸರ್ಕಾರದ ಶಾಸಕರು ಬೆಂಬಲ ಸೂಚಿಸಿದ್ದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ನೆನ್ನೆ ಏಪ್ರಿಲ್ ೧೪, ೨೦೧೨ - ಶನಿವಾರದಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ವೇಳೆ ಗಡಿ ಭಾಗದಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲು ಬೆಂಬಲ ನೀಡುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ನಾವು ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಕನ್ನಡಪ್ರಭ ವರದಿ:

ವಿಜಯಕರ್ನಾಟಕ ವರದಿ:

Tuesday, April 10, 2012

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಮತ್ತು ಕನ್ನಡಿಗರ ಉದ್ಯೋಗಕ್ಕಾಗಿ ನಡೆಸಿದ ಹೋರಾಟಕ್ಕೆ ಜಯ

ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮುಂಚೆಯೇ, ೨೦೦೮ ರ ಮೇ ವೇಳೆಗೇ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕೆಂಬ ಮತ್ತು ಅಲ್ಲಿ ಎಲ್ಲ ರೀತಿಯಲ್ಲಿ ಕನ್ನಡಕ್ಕೆ ಆದ್ಯತೆ ಹಾಗೂ ಅಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹಪಾಲು ದೊರೆಯಬೇಕೆಂಬ ಬೇಡಿಕೆಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯು ತನ್ನ ಹೋರಾಟ ಆರಂಭಿಸಿತ್ತು.

ಹೋರಾಟದ ವೇಳೆ ನಾವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಂದಿಟ್ಟಿದ್ದ ಕೆಲವು ಪ್ರಮುಖ ಬೇಡಿಕೆಗಳು ಹೀಗಿವೆ:

೧. ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು
೨. ವಿಮಾನ ನಿಲ್ದಾಣದಲ್ಲಿರುವ ಉದ್ಯೋಗಗಳು ಕನ್ನಡಿಗರಿಗೆ ದೊರಕಬೇಕು. ವಿಮಾನ ನಿಲ್ದಾಣಕ್ಕೆ ೪೦೦೦ ಎಕರೆ ಭೂಮಿ ನೀಡಿದ ೩೦೦೦ ರೈತ ಕುಟುಂಬದವರಿಗೆ ಆದ್ಯತೆ ನೀಡಬೇಕು.
೩. ವಿಮಾನ ನಿಲ್ದಾಣ ದಲ್ಲಿರುವ ನಾಮಫಲಕಗಳು ಮತ್ತು ಗ್ರಾಹಕ ಸೇವೆ ಕನ್ನಡದಲ್ಲಿರಬೇಕು.

೨೦೦೮ ರಲ್ಲಿ ಆರಂಭವಾದ ಈ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರವಾಗಿ ನಡೆಸಿಕೊಂಡು, ಹಲವು ಪ್ರತಿಭಟನಾ ನಡಿಗೆಗಳು, ಸರ್ಕಾರಕ್ಕೆ ಮತ್ತು ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸುವಿಕೆ ಹಾಗೂ ಇತರೆ ಹಲವು ಹೋರಾಟಗಳನ್ನು ಮಾಡಿದ್ದರ ಫಲವಾಗಿ ಇಂದು ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ "ನಾಡಪ್ರಭು ಕೆಂಪೇಗೌಡರ" ಹೆಸರನ್ನು ಇಡಲು ಸರ್ಕಾರ ತೀರ್ಮಾನಿಸಿದೆ. ಇದು ಕರವೇ ಹೋರಾಟಕ್ಕೆ ಮತ್ತು ಸಮಸ್ತ ಕನ್ನಡಿಗರಿಗೆ ಸಂದ ಜಯ.

ಇಷ್ಟೇ ಅಲ್ಲದೆ, ಈಗಾಗಲೆ ಭರ್ತಿಯಾಗಿರುವ ಹಲವಾರು ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆತಿದೆ. ಮುಂದೆಯೂ ವಿಮಾನ ನಿಲ್ದಾಣದಲ್ಲಿ ಶುರುವಾಗುವ ಇತರ ಉದ್ಯೋಗಾವಕಾಶಗಳಲ್ಲೂ ಕನ್ನಡಿಗರಿಗೆ ಆದ್ಯತೆ ದೊರಕಿಸಿಕೊಳ್ಳಲು ಹೋರಾಟಗಳನ್ನು ನಡೆಸಲಾಗುವುದು. ಜೊತೆಗೆ, ಇಡೀ ವಿಮಾನ ನಿಲ್ದಾಣದಲ್ಲಿ ಕನ್ನಡದ ವಾತಾವಾರಣ, ಕನ್ನಡದಲ್ಲಿ ದೊಡ್ಡದಾದ ನಾಮಫಲಕಗಳು ಮತ್ತು ಎಲ್ಲ ಗ್ರಾಯಕ ಸೇವೆ ಕನ್ನಡದಲ್ಲಿ ಸಿಗುವಂತಾಗಲು ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟ ನಡೆಸಲಿದೆ.

ಈ ವಿಚಾರವಾಗಿ ನಾವು ಇದುವರೆಗೂ ನಡೆಸಿರುವ ಕೆಲ ಮುಖ್ಯ ಹೊರಾಟಗಳ ವಿವರ ಮತ್ತು ಪತ್ರಿಕಾ ವರದಿಗಳು ಇಂತಿವೆ:

Tuesday, April 3, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೭. ಕನ್ನಡಿಗರ ಮೇಲಿನ ಹಿಂದಿ ಹೇರಿಕೆ ವಿರುದ್ಧ ನಿರಂತರ ಹೋರಾಟ

ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಕಡೆಗಣಿಸಿ ದಶಕಗಳಿಂದ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಸರ್ಕಾರದ ನಡವಳಿಕೆ ಒಕ್ಕೂಟವೊಂದರಲ್ಲಿ ಎಲ್ಲರೂ ಸಮಾನರು ಅನ್ನುವ ಮಾತನ್ನೇ ಅಳಿಸಿಹಾಕುತ್ತಿದೆ. ಕೇಂದ್ರಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯಿಂದಾಗಿ ಕನ್ನಡನುಡಿ ಮತ್ತು ಕನ್ನಡಿಗರ ಬದುಕುಗಳು ಅಳಿಸಿಹೋಗುತ್ತಿರುವುದನ್ನು ಕಂಡುಕೊಂಡಿದ್ದು ಎಲ್ಲ ಸ್ವರೂಪದ ಹಿಂದಿ ಹೇರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ೨೦೦೬ ರಿಂದ ನಿರಂತರವಾಗಿ ಹೋರಾಡುತ್ತಿದೆ.
ಶಾಲಾಮಕ್ಕಳ ಮೇಲೆ ತ್ರಿಭಾಷಾ ಸೂತ್ರದ ಶೂಲ ಹೇರಿ ಚಿಕ್ಕಂದಿನಿಂದಲೇ ಹಿಂದಿಹೇರಿಕೆಯನ್ನು ಆರಂಭಿಸಲಾಗುತ್ತದೆ. ಹಿಂದಿ ನಮ್ಮ ರಾಷ್ಟ್ರಭಾಷೆ ಎನ್ನುವ ಹಸಿ ಹಸಿ ಸುಳ್ಳನ್ನು ನಮ್ಮ ಮಕ್ಕಳ ತಲೆಗೆ ತುಂಬಲಾಗುತ್ತದೆ. ದೇಶದ ಒಗ್ಗಟ್ಟಿನ ಕಥೆ ಹೇಳಿ, ದೇಶ ಒಡೆಯುವ ಬೆದರಿಕೆ ಹುಟ್ಟಿಸಿ ಹಿಂದಿಯನ್ನು ಒಪ್ಪಿಸುವ ಪ್ರಯತ್ನಗಳಾಗುತ್ತಿವೆ. ಬ್ಯಾಂಕ್, ರೇಲ್ವೆ ಕೆಲಸಗಳು ಬೇಕಾದರೆ ಅರ್ಜಿ ಹಿಂದಿಯಲ್ಲಿ ಬರೆಯಿರಿ ಎನ್ನುವ ನಿಯಮವೇ ಈ ದೇಶದಲ್ಲಿದೆ. ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದಿ ಕಲಿಯದಿದ್ದರೆ ಉಳಿಗಾಲವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರಸರ್ಕಾರ ತನ್ನ ಅಧಿಕೃತ ಆಡಳಿತ ಭಾಷೆಯನ್ನಾಗಿ ಇಂಗ್ಲಿಷ್ ಜೊತೆ ಬರಿಯ ಹಿಂದಿಯನ್ನು ಮಾತ್ರಾ ಒಪ್ಪಿದೆ. ಆ ಕಾರಣಕ್ಕಾಗಿ ನಮ್ಮ ತೆರಿಗೆಯ ಹಣದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೇವಲ ಹಿಂದಿಪ್ರಚಾರವೆಂಬ ಹಿಂದಿ ಹೇರಿಕೆಗಾಗಿಯೇ ಪ್ರತಿವರ್ಷ ವೆಚ್ಚ ಮಾಡಲಾಗುತ್ತದೆ. ಲಜ್ಜೆಯಿಲ್ಲದೆ ಹಿಂದಿಯನ್ನು ಹೇರುವುದೇ ತನ್ನ ಉದ್ದೇಶವೆಂದು ಕೇಂದ್ರಸರ್ಕಾರ ಸಾರಿ ಸಾರಿ ಹೇಳಿಕೊಳ್ಳುತ್ತಿದೆ.ಹಿಂದಿ ಭಾಷಿಕ ಭಾರತದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ಅಲ್ಲಿನ ಸರ್ಕಾರಿ ಕಛೇರಿಯಲ್ಲಿ ಹಿಂದಿಯಲ್ಲೇ ಸೇವೆ ಕೇಳಿ ಪಡೆಯುವ ಹಕ್ಕನ್ನು ಈ ವ್ಯವಸ್ಥೆ ದಯಪಾಲಿಸಿದೆ. ಇದಕ್ಕೆಲ್ಲಾ ಕಳಸವಿಟ್ಟಂತೆ ಪ್ರತಿವರ್ಷ ಹಿಂದಿ ದಿನಾಚರಣೆ, ಹಿಂದಿ ಪಕ್ಷಾಚರಣೆ, ಹಿಂದಿ ಮಾಸಾಚರಣೆ ಮಾಡುತ್ತಾ ಕನ್ನಡಿಗರ ಬದುಕನ್ನೇ ಈ ಹಿಂದಿ ಭೂತಕ್ಕೆ ಬಲಿಕೊಡಲು ಹೊರಟಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಬದುಕಿಗೆ ಗ್ರಹಣದಂತೆ ಆವರಿಸಿರುವ ಈ ಹಿಂದಿ ಕೊಳೆಯನ್ನು ತೊಡೆಯಲು ದೃಡ ನಿಶ್ಚಯ ಮಾಡಿದ್ದು, ಕನ್ನಡಿಗರಲ್ಲಿ ಜಾಗೃತಿ ಹುಟ್ಟುಹಾಕುತ್ತಿದೆ. ಹಿಂದಿ ದಿನಾಚರಣೆಯನ್ನು ಪ್ರತಿಭಟಿಸುವ ಮೂಲಕ, ಅಂತಹ ಕಾರ್ಯಕ್ರಮಗಳಲ್ಲೇ ಹಿಂದಿ ಹೇರಿಕೆಯ ವಿರಾಟ್ ಸ್ವರೂಪದ ಬಗ್ಗೆ ಜಾಗೃತಿ ಭಾಷಣಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದೆ. ಕೇಂದ್ರಸರ್ಕಾರ ತನ್ನಭಾಷಾ ನೀತಿಯನ್ನು ಬದಲಿಸಿಕೊಳ್ಳದೇ, ಕನ್ನಡನಾಡಿನಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಮಾನ್ಯ ಮಾಡದೇ ಹಿಂದಿಯನ್ನು ಹೇರಿಕೆ ಮಾಡುತ್ತಿರುವುದನ್ನು ನಿಲ್ಲಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆಯುವುದು ನಿಶ್ಚಿತವಾಗಿದೆ.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ:

Sunday, April 1, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೬. ಕನ್ನಡ ನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಹೋರಾಟ

ಆರಂಭದಲ್ಲಿ ನಾಡಿನ ಗಣ್ಯ ಸಾಹಿತಿ ವಲಯಕ್ಕೆ ಮಾತ್ರಾ ಸೀಮಿತವಾಗಿದ್ದ ಶಾಸ್ತ್ರೀಯ ಭಾಷಾ ಸ್ಥಾನಮಾನದ ಹಕ್ಕೊತ್ತಾಯವನ್ನು ನಾಡಿನ ಸ್ವಾಭಿಮಾನದ ಚಳವಳಿಯನ್ನಾಗಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಸಾವಿರಾರು ಕನ್ನಡಿಗರ ಜಾಥಾವನ್ನು ಸಂಘಟಿಸಲಾಗಿತ್ತು. ಕೇಂದ್ರಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ರೈಲುತಡೆಯಂತಹ ಅನೇಕಾನೇಕ ಹೋರಾಟಗಳು ನಡೆದವು. ವರ್ಷಗಳ ಕಾಲ ಕನ್ನಡದ ವೀರಸೇನಾನಿಗಳು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಒತ್ತಾಯಿಸಿ ನಡೆಸಿದ ಚಳವಳಿ ಇದೀಗ ಫಲ ನೀಡಿದೆ. ಆದರೂ ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ, ಕನ್ನಡ, ಕನ್ನಡಿಗರೆಂದರೆ ಅದೆಷ್ಟು ಅಸಡ್ಡೆ ಇದೆ ಅನ್ನುವುದನ್ನು ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಹೋರಾಟ ಮಾಡಬೇಕಾಗಿರುವ ಪರಿಸ್ಥಿತಿಯೇ ತೋರಿಸಿಕೊಡುತ್ತಿದೆ. ಮೊದಲಿಗೆ ೨೦೦೪ರಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಪಟ್ಟ ಕಟ್ಟುವಾಗ ಯಾವ ಸಮಿತಿ, ಯಾವ ನಿಬಂಧನೆಯೂ ಇರಲಿಲ್ಲ. ಇದೀಗ ಕನ್ನಡದ ವಿಷಯಕ್ಕೆ ಬಂದಾಗ ಇವೆಲ್ಲವನ್ನೂ ಹುಟ್ಟುಹಾಕಲಾಯಿತು. ಮೊದಲಿಗೆ ಭಾಷಾ ಹಳಮೆ ಒಂದು ಸಾವಿರ ವರ್ಷಗಳು ಎಂದಾಗ ಕನ್ನಡಕ್ಕೆ ಅಂತಹ ಹಳಮೆ ಇದೆ ಎನ್ನುವುದು ನಿರ್ವಿವಾದವಾಗಿ ಸಾಬೀತು ಮಾಡಲಾಯಿತು. ಕೂಡಲೇ ಆ ನಿಬಂಧನೆಯನ್ನು ಸಾವಿರದೈನೂರು ವರ್ಷಗಳಿಗೆ ಏರಿಸಲಾಯಿತು. ಯಾವ ಯಾವ ನಿಬಂಧನೆಗಳನ್ನು ತಮಿಳು ಪೂರೈಸುತ್ತದೋ ಮತ್ತು ಇತರೆ ಭಾಷೆಗಳು ಪೂರೈಸುವುದಿಲ್ಲವೋ ಅವನ್ನು ನಿಬಂಧನೆಗಳನ್ನಾಗಿಸಿ ನಿಮಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗದು ಎಂದು ಹೇಳುವ ಉದ್ದೇಶವಿರುವುದನ್ನು ಈ ನಡೆ ತೋರಿಸುವುದಿಲ್ಲವೇ? ಒಟ್ಟಿನಲ್ಲಿ ಕನ್ನಡ ತೆಲುಗು ಭಾಷಾ ಪಂಡಿತರು ಸಾವಿರದೈನೂರು ವರ್ಷಗಳ ಭಾಷಾ ಹಳಮೆಯನ್ನು ಹೊಡೆದಾಡಿ ಸಾಬೀತು ಮಾಡಬೇಕಾಯಿತು.


ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವುದನ್ನು ತಡೆಯಲು ಅಥವಾ ಸಾಧ್ಯವಾದಷ್ಟು ಮುಂದೂಡಲು ಹೇಗೆ ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸಲಾಯಿತು ಎಂಬುದನ್ನು ನೋಡಿದರೆ ಒಕ್ಕೂಟ ವ್ಯವಸ್ಥೆಯೆಂಬುದು ನಿಜಕ್ಕೂ ಕೆಲಸ ಮಾಡುತ್ತಲೇ ಇಲ್ಲವೇನೋ ಅನ್ನಿಸುತ್ತದೆ. ಯಾಕೆ ವಿಶ್ವ ತಮಿಳು ಸಂಘ ತನಗೆ ಸಂಬಂಧವಿಲ್ಲದಿದ್ದರೂ ಸಮಿತಿಯನ್ನೇ ರದ್ದು ಮಾಡಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಾಂಧಿ ಎನ್ನುವವರ ಮೂಲಕ ಏಕೆ ದಾಖಲಿಸಿತು? ತಮಿಳುನಾಡು ಸರ್ಕಾರ ತನಗೂ ಈ ಮೊಕದ್ದಮೆಗೂ ಯಾವ ಸಂಬಂಧವೂ ಇಲ್ಲ ಅಂದಿದ್ದು ಯಾಕೆ? ಈ ತಕರಾರು ಅರ್ಜಿಯನ್ನು ಇನ್ನೇನು ಸಮಿತಿ ತನ್ನ ಕೊನೆಯ ನಿರ್ಣಾಯಕ ಸಭೆಯನ್ನು ನಡೆಸುವ ಮುನ್ನ ಸಲ್ಲಿಸಲಾಯಿತು ಏಕೆ? ಒಕ್ಕೂಟ ವ್ಯವಸ್ಥೆಯೆಂದರೆ ಇಂತಹ ತೊಡರುಗಾಲು ಹಾಕುವುದೇ ಏನು? ಇಂತಹ ತಾರತಮ್ಯದ ವಿರುದ್ಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಿದ್ದು, ಕನ್ನಡಕ್ಕೆ ಹೆಸರಿಗೆ ಮಾತ್ರಾ ಸಿಕ್ಕಿರುವ ಶಾಸ್ತ್ರೀಯ ಭಾಷಾ ಸ್ಥಾನಮಾನ ಪೂರ್ಣಪ್ರಮಾಣದಲ್ಲಿ ಸಿಗುವ ತನಕ ವಿಶ್ರಮಿಸುವ ಮಾತೇ ಇಲ್ಲ.

ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: