Monday, September 12, 2011

ಹಿಂದೀ ಹೇರಿಕೆ ವಿರುದ್ಧದ ಹೋರಾಟಗಳ ವಿವರಗಳು

ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಮೇಲೆ ನಡೆಯುತ್ತಿರುವ ಹಿಂದೀ ಹೇರಿಕೆಯನ್ನ ಖಂಡಿಸುತ್ತದೆ ಮತ್ತು ಹಿಂದೀ ಹೇರಿಕೆಯ ವಿರುದ್ದ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ಹಿಂದೀ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.


ನಮ್ಮ ವೇದಿಕೆಯಿಂದ ಹಿಂದಿ ಹೇರಿಕೆ ವಿರುದ್ಧ ನಡೆಸಿರುವ ಹೋರಾಟಗಳು-

2006:
ಕರ್ನಾಟಕ ರಕ್ಷಣಾ ವೇದಿಕೆಯು ಸೆಪ್ಟಂಬರ್ ೧೪ ಹಿಂದಿ ಹೇರಿಕೆ ವಿರೋಧಿ ದಿನವನ್ನಾಗಿ ಆಚರಿಸಲು ಶುರುಮಾಡಿತು. ಸೆಪ್ಟಂಬರ್ ೧೦ರಂದು ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ಹಿಂದಿ ಹೇರಿಕೆಯ ಬಗ್ಗೆ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಗಿತ್ತು. ನಾಡಿನ ಹಿರಿಯ ಚಿಂತಕರಾದ ಶ್ರೀ ರಾಜ್ ಕುಮಾರ್ ಹಾಗೂ ಡಾ. ಆಶೋಕ್ ದೊಡ್ಡಮೇಟಿ ಅವರಿಂದ ಭಾರತದ ಒಕ್ಕೂಟ ವ್ಯವಸ್ಥೆ, ಭಾಷಾವಾರು ಪ್ರಾಂತ್ಯಗಳ ಅನಿವಾರ್ಯತೆ, ಸಂವಿಧಾನದ ದೃಷ್ಠಿಯಲ್ಲಿ ಭಾರತೀಯ ಭಾಷೆಗಳು, ಹಿಂದಿಯ ಸಾರ್ವಭೌಮತ್ವ ಸ್ಥಾಪನೆಯ ಪ್ರಯತ್ನಗಳು, ಹಿಂದಿ ಹೇರಿಕೆಯ ನಾನಾ ರೂಪಗಳು, ಹಿಂದಿ ಹೇರಿಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಅನೇಕ ವಿಚಾರಗಳು ಮಂಡಿಸಲ್ಪಟ್ಟವು.
ಸೆಪ್ಟಂಬರ್ ೧೪ ರಂದು ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಕರವೇಯ ಕಾರ್ಯಕರ್ತರು ಕೇಂದ್ರ ಸರ್ಕಾರದ ಕಛೇರಿಗಳ ಮುಂದೆ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಕೇಂದ್ರಿಯ ಸದನದ ಮುಂದೆ ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಆಕಾಶವಾಣಿಯ ಮುಂದು ಪ್ರತಿಭಟಿಸುತ್ತಿದ್ದ ಕಾರ್ಯಕರ್ತರನ್ನು ೧೫ ದಿನಗಳ ಸೆರೆವಾಸದಲ್ಲಿ ಇಡಲಾಗಿತ್ತು.
2007:
ಹಿಂದಿ ಸಪ್ತಾಹದ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಬೆಂಗಳೂರಿನ ಕೇಂದ್ರ ವಾರ್ತಾ ಇಲಾಖೆ ಕೋರಮಂಗಲದಲ್ಲಿ ನಡೆಸಿದ ಹಿಂದಿ ಸಾಪ್ತಾಹ ದಿನಾಚರಣೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ವಿರೋಧಿಸಲಾಯಿತು.
ಇದಲ್ಲದೇ ಎಂ. ಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ಹಿಂದಿ ಭಾಷಾ ಸಪ್ತಾಹ ಆಚರಣೆಗೆ ಕರವೇ ಕಾರ್ಯಕರ್ತರು ತಡೆಯೊಡ್ಡಿದರು. ಕೇಂದ್ರ ಸರ್ಕಾರ ಹಿಂಬಾಗಿಲಿನಿಂದ ಕನ್ನಡಿಗರ ಮೇಲೆ ಹಿಂದಿ ಹೇರುವುದನ್ನು ವಿರೋಧಿಸಲಾಯಿತು.
2008:
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಹಿಂದಿಯಷ್ಟೇ ಅರ್ಹತೆ ಇದ್ದರೂ ಕೇಂದ್ರ ಸರ್ಕಾರ ಕನ್ನಡದ ಅಭಿವೃದ್ಧಿಗೆ ಕಿಂಚಿತ್ತೂ ಆದ್ಯತೆ ನೀಡದಿರುವುದು ರಾಜ್ಯಕ್ಕೆ ಎಸಗಿರುವ ದ್ರೋಹವಾಗಿದೆ ಹಾಗೂ ಹಿಂದಿ ಭಾಷೆಯನ್ನು ಬೆಳೆಸಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ರಾಜ್ಯದಲ್ಲಿನ ಅಧೀನ ಕಛೇರಿಗಳಲ್ಲಿ ಹಿಂದಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ಹುನ್ನಾರ ನಡೆಸಿದೆ. ಹಿಂದಿ ಜನರ ಕಪಿ ಮುಷ್ಠಿಯಲ್ಲಿರುವ ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಗೋರಿ ಕಟ್ಟಲು ಹೊರಟಿರುವುದನ್ನು ಸಹಿಸಲು ಸಾಧ್ಯವಿಲ್ಲ, ಇದೇ ರೀತಿ ಮಲತಾಯಿ ಧೋರಣೆ ಮುಂದುವರೆದರೆ ರಾಜ್ಯದ ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ರಾಜ್ಯದ ಎಲ್ಲಾ ಕೇಂದ್ರ ಸರ್ಕಾರ ಕಛೇರಿಗಳು ಹಾಗೂ ಉದ್ದಿಮೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಒತ್ತಾಯಿಸಲಾಗಿತ್ತು. ಕನ್ನಡಿಗರ ಮೇಲೆ ಕೇಂದ್ರ ಸರಕಾರ ಹಿಂದಿ ಹೇರಿಕೆಯನ್ನು ಮಾಡುತ್ತಿರುವುದನ್ನು ವಿರೋಧಿಸಿ ಬೆಂಗಳೂರು, ಮೈಸೂರು, ಕೊಪ್ಪಳ, ಗದಗ. ಬೆಳಗಾವಿ, ಚಿತ್ರದುರ್ಗ ಮತ್ತು ರಾಜ್ಯಾದ್ಯಂತ ಇನ್ನಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
2009:
ಕೇಂದ್ರ ಸರಕಾರ, ಕೇಂದ್ರ ಸರಕಾರದ ಕಚೇರಿಗಳಲ್ಲಿ "ಹಿಂದಿ ಸಪ್ತಾಹ" ಕಾರ್ಯಕ್ರಮವನ್ನು ನಡೆಸಿ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಮೂಲಕ, ಕನ್ನಡವನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ. "ಹಿಂದಿ ಸಪ್ತಾಹ" ಕಾರ್ಯಕ್ರಮವನ್ನು ರದ್ದುಪಡಿಸಿಲು ನಾಡಿನ ಜನತೆ ಹಾಗು ಎಲ್ಲ ರಾಜಕೀಯ ಪಕ್ಷಗಳು ಸಂಘಟಿತ ಹೋರಾಟ ನಡೆಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು ಹಾಗೂ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಲಾಗಿತ್ತು.
2010:
ಕರ್ನಾಟಕ ರಕ್ಷಣಾ ವೇದಿಕೆಯು, ಕೇಂದ್ರಸರ್ಕಾರದ ದೋಷಪೂರಿತವಾದ ಭಾಷಾನೀತಿಯನ್ನೂ, ಅದರಿಂದಾಗುತ್ತಿರುವ ಹಿಂದೀ ಹೇರಿಕೆಯನ್ನೂ ತೀವ್ರವಾಗಿ ಖಂಡಿಸುತ್ತಾ ಬಂದಿದೆ. ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಸೆಪ್ಟೆಂಬರ್ ೧೪ನ್ನು ಹಿಂದೀ ಹೇರಿಕೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರಸರ್ಕಾರದ ಹಿಂದೀಭಾಷೆಯ ಪರವಾದ ನಿಲುವುಗಳ ವಿರುದ್ಧ ಪ್ರತಿಭಟನೆ ಡೆಸಲಾಯಿತು. ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು. ನಂತರ ಮಾನ್ಯ ರಾಜ್ಯಪಾಲರನ್ನು ಕಂಡು ಹಿಂದೀ ಹೇರಿಕೆಯ ದುಷ್ಪರಿಣಾಮಗಳನ್ನು ವಿವರಿಸಿ ಕನ್ನಡಿಗರ ಪ್ರತಿರೋಧ ವ್ಯಕ್ತಪಡಿಸುವ ಆಗ್ರಹಪೂರ್ವಕವಾದ ಮನವಿಯನ್ನು ಸಲ್ಲಿಸಲಾಯಿತು.