ದೆಹಲಿಯಲ್ಲಿ ಮೊಳಗಿದ ರಣಕಹಳೆ
ದೆಹಲಿ ಮುತ್ತಿಗೆಯ ವೀರ ಘೋಷಣೆಯೊಂದಿಗೆ ನಾಡಿನ ಸಾವಿರಾರು ಕನ್ನಡಿಗರು ದೆಹಲಿಯ ಬೀದಿ ಬೀದಿಗಳಲ್ಲಿ ಇಂದು ನಡೆಸಿದ ಜಾಥ ಕನ್ನಡಿಗನ ಸಹನೆ ಮುಗಿದು ಹೋಗಿರುವುದನ್ನು ದೆಹಲಿಯ ದೊರೆಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಯಿತು. ಕೃಷ್ಣಾ-ಕಾವೇರಿ ಹೋರಾಟ ಸಮನ್ವಯ ಸಮಿತಿಯ ಅಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ನಡೆದ ಈ ಜಾಥ ದೆಹಲಿಯ ಬಿರ್ಲಾ ಮಂದಿರದಿಂದ ಆರಂಭವಾಗಿ ಜಂತರ್ ಮಂತರ್ ತಲುಪಿತು.
ಮರೆವಣಿಗೆ ಮೈಲಿಗಿಂತಲೂ ದೊಡ್ಡದಾಗಿತ್ತು. ನಂತರ ಆರಂಭವಾದ ಧರಣಿಯಲಿ ಹಲವಾರು ಸಂಘಟಣೆಗಳ ನಾಯಕರುಗಳು ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು " ಪ್ರಧಾನಮಂತ್ರಿಗಳಾಗಲೀ ಅಥವಾ ಅವರ ಪ್ರತಿನಿಧಿಗಳಾಗಲೀ ಬಂದು ಕನ್ನಡಿಗರ ಅಹವಾಲನ್ನು ಆಲಿಸಬೇಕೆಂದು ಒತ್ತಾಯಿಸಿ ಕರೆ ಇತ್ತರು. ಇದಕ್ಕೆ ಸರಿಯಾದ ಸ್ಪಂದನೆ ದೊರಯದೇ ಹೋದಾಗ ಅಲ್ಲಿ ನೆರೆದಿದ್ದ ೨೦,೦೦೦ಕ್ಕೂ ಹೆಚ್ಚಿನ
ಕನ್ನಡಿಗರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ಪ್ರಯತ್ನದಲ್ಲಿ ಅಷ್ಟೂ ಜನರನ್ನು ಬಂಧಿಸಲಾಯಿತು. ನರೆದಿದ್ದ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಟಿ.ಎ.ನಾರಾಯಣ ಗೌಡರು
"ನಾವು ಇಲ್ಲಿಗೆ ಪ್ರಚಾರಕ್ಕೆ ಬಂದಿಲ್ಲ, ಇಲ್ಲಿ ಬಂದಿರುವವರೆಲ್ಲಾ ಕಾವೇರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧವಾಗಿರುವ
ಹೋರಾಟಗಾರರು. ಜೈಲುವಾಸ, ಲಾಠೀ ಎಟು, ಬೂಟಿನೇಟು ಹೊಸದಲ್ಲ ಮತ್ತು ಅವಕ್ಕೆ ನಮ್ಮನ್ನು ಬಗ್ಗಿಸುವ , ಸದೆ ಬಡಿಯುವ ಶಕ್ತಿಯೂ ಇಲ್ಲ. ನಮ್ಮ ಹೋರಾಟ ಇವತ್ತು ಒಂದು ದಿನದ್ದು ಅಂತ ದೆಹಲಿಯ ಪೋಲಿಸರು ಭಾವಿಸಿರಬಹುದು. ಆದರೆ ನಾವು ನಮಗೆ ನ್ಯಾಯದ ಭರವಸೆ ಸಿಗುವ ತನಕ ಮರಳುವರಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಮೇಲೆ ಹೀಗೆ ಅನ್ಯಾಯವನ್ನು ನಿರಂತರವಾಗಿ ನಡೆಸುತ್ತಲೆ ಬಂದದ್ದಾದರೆ, ಈ ಒಕ್ಕೂಟ ವ್ಯವಸ್ಥೆಯ ಆಗತ್ಯ ಕನ್ನಡಿಗರಿಗಿಲ್ಲ.
ನಮ್ಮದೆಲ್ಲವನ್ನು ಬಲಿಕೋಡುತ್ತ ಈ ಒಕ್ಕೂಟ ನಮ್ಮ ಮೇಲೆ ಎಸುಗುವ ಎಲ್ಲಾ ಅನ್ಯಾಯಗಳನ್ನು, ಮಲತಾಯಿ ದೋರಣೆಗಳನ್ನು ಸಹಿಸುತ್ತ ನಮ್ಮ ಜನರ ಬದುಕನ್ನು ಬಲಿಕೊಟ್ಟಾದರೂ ಇದರೊಳಗೆ ಇರಬೇಕೆನ್ನುವ ಹಠ ನಮಗಿಲ್ಲ , ಈಗಲೂ ಈ ಅನ್ಯಾಯಗಳನ್ನು ಸರಿಪಡಿಸದಿದ್ದಲ್ಲಿ ಕರ್ನಾಟಕ ಈ ರಾಷ್ಟ್ರೀಯತೆಯ ಸುಳ್ಳು ಒಕ್ಕೂಟ ವ್ಯವಸ್ಥೆಯಿಂದ ಹೊರಬರಬೇಕಾದಿತು. ನಮ್ಮ ಶಾಂತಿಯುತ ಪ್ರತಿಭಟನೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಂಚೆ,ರೈಲು,ಆದಾಯ ತೆರಿಗೆ ಸೇರಿಂದತೆ ಕೇಂದ್ರ ಸರಕಾರದ ಯಾವ ಕಚೇರಿಗಳೂ ಕೆಲಸ ಮಾಡದಂತೆ ಚಳುವಳಿ ನಡೆಸಲಾಗುವುದು, ಕೇಂದ್ರದ ವಿರುದ್ಧ ಕನ್ನಡಿಗರ ಕ್ರಾಂತಿಯ ಹೋರಾಟ ಆರಂಭವಾಗುವ ಮುನ್ನ ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು
ನಮಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ನುಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಹಂಸಲೇಖ ಅವರು ಚಲನ ಚಿತ್ರರಂಗದ ನಟ-ನಟಿಯರು
ಇನ್ನೂ ಹೋರಾಟಕ್ಕೆ ಧುಮಕದಿರುವುದನ್ನು ಪ್ರಸ್ತಾಪಿಸಿಸುತ್ತ ಇದುವರೆಗೂ ಈ ಅಯೊಗ್ಯರಿಗೆ ಹತ್ತಾರೂ ಕನ್ನಡ ನಾಡು ನುಡಿಗಳ ಗೀತೆಗಳನ್ನು ಬರೆದುಕೊಟ್ಟೆ, ಇನ್ನೂ ಮುಂದೆ
ಆ ತಪ್ಪು ಮಾಡುವದಿಲ್ಲ ಎಂದು ನುಡಿದರು.
ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷರು ಈ ಸಭೆಯಲ್ಲಿ ಪಾಲ್ಗೊಂಡು ಕನ್ನಡಿಗರ ಈ ಹೋರಾಟ ನ್ಯಾಯುಯುತವಾಗಿದ್ದು ಇದನ್ನು ದೇಶದ ಎಲ್ಲಾ ರೈತ ಬಾಂಧವರು
ಬೆಂಬಲಿಸುವದಾಗಿ ಘೋಷಿಸಿದರು. ಸಂಸದರಾದ ಶ್ರೀ ಶಿವಣ್ಣ, ಶಾಸಕರಾದ ರಘು ಮತ್ತು ರೈತ ಸಂಘ-ಹಸಿರು ಸೇನೆಯ ಕೊಡಿಹಳ್ಳಿ ಚಂದ್ರಶೇಖರ್ ಪಾಲ್ಗೋಂಡಿದ್ದರು.
ಪ್ರತಿಭಟನೆಗಳೂ ನಾಳೆಯೂ ಮುಂದುವರೆಯಲಿದ್ದು, ದೆಹಲಿಯಲ್ಲಿ ಬೀಡು ಬಿಟ್ಟಿರುವ ಹೋರಾಟಗಾರರು ಕೇಂದ್ರ ಸರಕಾರದ ಕಣ್ಣು-ಬಾಯಿ ತೆಗಿಸಿಯೇ ಬರಬೇಕೆಂದು ತೀರ್ಮಾನಿಸಿದ್ದಾರೆ