Thursday, March 8, 2012

ಕರವೇ ಹೋರಾಟಗಳ ಸಮಗ್ರ ಚಿತ್ರಣ : ೨. ಅಂತರರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ

ನಮ್ಮ ಕನ್ನಡನಾಡು ಸದಾ ಪ್ರಕೃತಿ ಮಾತೆಯಿಂದ ಹರಸಲ್ಪಟ್ಟ ಸಮೃದ್ಧವಾದ ನದಿ ಹರಿವಿನ ನಾಡು. ಇಲ್ಲಿನ ನೆಲವನ್ನು ಹಸನು ಮಾಡಲೆಂದೆ ಧರೆಗೆ ಒಂದಲ್ಲ ಹತ್ತಾರು ನದಿಗಳು ಹರಿದುಬಂದಿವೆ. ಕನ್ನಡಿಗರ ಪುಣ್ಯಫಲವೆಂಬಂತೆ ಒದಗಿ ಬಂದಿರುವ ಈ ನದಿನೀರನ್ನು ಯೋಗ್ಯವಾಗಿ ಬಳಸಿಕೊಂಡಲ್ಲಿ ನಮ್ಮ ನಾಡಲ್ಲಿ ಚಿನ್ನದ ಬೆಳೆಯನ್ನೇ ಬೆಳೆಯಬಹುದು. ಆದರೆ ಕನ್ನಡಿಗರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಮ್ಮ ತಟ್ಟೆಯಲ್ಲಿನ ರೊಟ್ಟಿಗೆ ನೆರೆಯ ರಾಜ್ಯಗಳು ಕೈ ಹಾಕಲು ಮುಂದಾಗಿವೆ. ಉತ್ತರದಲ್ಲಿ ಕೃಷ್ಣಾನದಿ ನೀರು ಹಂಚಿಕೆಯಾಗಲೀ, ಆಲಮಟ್ಟಿ ಜಲಾಯಶದ ಎತ್ತರದ ವಿಷಯವೇ ಆಗಲಿ, ಮಹದಾಯಿ ನದಿಯ ಕಳಸ-ಭಂಡೂರಾ ನಾಲೆಯ ಯೋಜನೆಯಾಗಲೀ, ಕಾವೇರಿಯಾಗಲೀ, ಚಿತ್ರಾವತಿ ನದಿಯ ಅಣೆಕಟ್ಟಿನ ನಿರ್ಮಾಣ ಕಾರ್ಯವಾಗಲೀ ನೆರೆಯ ರಾಜ್ಯಗಳು ತಕರಾರು ಮಾಡುತ್ತಲೇ ಬಂದಿವೆ. ಇಲ್ಲಿನವರೆಗೆ ನಮ್ಮ ನಾಡಿನ ಜನಪ್ರತಿನಿಧಿಗಳು ಈ ಬಗ್ಗೆ ಅನುಸರಿಸಿದ ನೀತಿ, ಬಳಸಿದ ರಾಜಕೀಯ ತಂತ್ರಗಳು ಅಷ್ಟೇನೂ ಯಶಸ್ವಿಯಾಗಿಲ್ಲ. ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳು ತಮಗೆ ದೆಹಲಿಯಲ್ಲಿರುವ ಹಿಡಿತವನ್ನು ಉಪಯೋಗಿಸಿಕೊಂಡು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದನ್ನು ನೋಡಿಯೂ ಸುಮ್ಮನಿರುವ ಕನ್ನಡನಾಡಿನ ಜನನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಮ್ಮ ನಾಡಿಗೆ ಇಂಥಾ ದುಸ್ಥಿತಿ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಈ ಎಲ್ಲ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ನಮ್ಮ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ತನ್ನ ದಿಟ್ಟ ಹೋರಾಟಗಳಿಂದ ಮಾಡುತ್ತಲೇ ಬಂದಿದೆ.
ಕನ್ನಡಿಗರ ಹಾಗೂ ನಾಡಿನ ಏಳಿಗೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಹರಿಯುವ ಅನೇಕ ನದಿಗಳ ನೀರು ಹಂಚಿಕೆ ಕುರಿತ ವಿವಾದಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕರವೇ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಮುಖ್ಯವಾದ ಕೆಲವು ಹೋರಾಟಗಳ ವಿವರ ಇಂತಿದೆ:
ಕಾವೇರಿ ಐತೀರ್ಪಿನ ವಿರುದ್ಧ ನಡೆಸಿದ ಚಳವಳಿ
ಹಿಂದೆ ೨೦೦೩ರಲ್ಲಿ ರಾಜ್ಯದ ಎಸ್.ಎಂ.ಕೃಷ್ಣಾ ಮುಂದಾಳ್ತನದ ಕಾಂಗ್ರೆಸ್ ಸರ್ಕಾರ ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ವರದಿಗೆ ಮಣೆಹಾಕಿ, ನಮ್ಮ ನಾಡಿನ ಅಣೆಕಟ್ಟೆಗಳಲ್ಲಿ ನೀರಿನ ತೀವ್ರವಾದ ಕೊರತೆಯಿದ್ದಾಗಲೂ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲು ಮುಂದಾಯ್ತು. ಆಗ ಕಾವೇರಿ ಕಣಿವೆಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರವಾದ ಹೋರಾಟಕ್ಕೆ ಮುಂದಾಯ್ತು. ರಾಜ್ಯಸರ್ಕಾರ ಚಳವಳಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸಿ ತೀವ್ರವಾದ ದಬ್ಬಾಳಿಕೆ ನಡೆಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಬಂದಿದ್ದ ಮುಖ್ಯಮಂತ್ರಿಗಳ ವಿರುದ್ಧವಾಗಿ ಪೊಲೀಸರ ಅಭೇಧ್ಯ ರಕ್ಷಣಾ ಕೋಟೆಯನ್ನು ಮುರಿದು ಕಪ್ಪುಬಾವುಟ ತೋರಿಸಿ ಪ್ರದರ್ಶನ ನಡೆಸಲಾಯ್ತು.
ಫೆಬ್ರವರಿ ೫, ೨೦೦೭ ಮತ್ತೊಮ್ಮೆ ಕನ್ನಡಿಗರ ಎದೆಯ ಮೇಲೆ ನಾಡಿನ ಜನತೆಯ ಮರಣ ಶಾಸನವನ್ನು ಕಾವೇರಿ ನ್ಯಾಯ ಮಂಡಲಿ ಬರೆಯಲು ಅಡಿಯಿಟ್ಟ ಕರಾಳ ದಿನ. ಯಾವ ವೈಜ್ಞಾನಿಕ ತಳಹದಿಯೂ ಇಲ್ಲದ, ನದಿ ಹಂಚಿಕೆಯ ರಾಷ್ಟ್ರೀಯ ನೀತಿಯೇ ಇರದಿದ್ದರೂ ಕನ್ನಡ ನಾಡಿಗೆ ಹಸಿ ಹಸಿ ಅನ್ಯಾಯ ಮಾಡುವಂತಿದ್ದ ತೀರ್ಪು ಮಧ್ಯಾಹ್ನ ೨.೧೫ಕ್ಕೆ ದೆಹಲಿಯಲ್ಲಿ ಹೊರ ಬಿತ್ತು. ಕೇವಲ ಹದಿನೈದು ನಿಮಿಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ, ನಗರ ಪಟ್ಟಣಗಳ ಬೀದಿಬೀದಿಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಅನ್ಯಾಯದ ತೀರ್ಪಿನ ವಿರುದ್ಧ ಪ್ರತಿಭಟಿಸಲಾರಂಭಿಸಿದರು. ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಸಾಗಿದ ಚಳುವಳಿ ಕೇಂದ್ರಸರ್ಕಾರಿ ಕಛೇರಿಗಳಿಗೆ ಮುತ್ತಿಗೆ, ರಾಜ್ಯದಾದ್ಯಂತ ರೈಲು ತಡೆ, ಕರ್ನಾಟಕ ಬಂದ್ ನಂತಹ ಉಗ್ರ ಪ್ರತಿಭಟನೆಗಳಾಗಿ ತಿರುಗಿತು. ಕರ್ನಾಟಕ ಬಂದ್ ಆಚರಣೆ ಸಂದರ್ಭದಲ್ಲಂತೂ ನಮ್ಮ ಕಾರ್ಯಕರ್ತರ ಧೈರ್ಯ ಸಾಹಸಗಳು ಅಸೀಮವಾಗಿದ್ದವು. ನಾಡಿನ ಚಳವಳಿಯ ಇತಿಹಾಸದಲ್ಲೇ ಮೊದಲಬಾರಿ ವಿಮಾನಗಳ ಸಂಚಾರಗಳನ್ನು ತಡೆಯಲಾಯಿತು. ಈ ಸಮಯದಲ್ಲಿ ಬಂದೂಕು ಹಿಡಿದು ಬಂದ ಕೇಂದ್ರದ ರಕ್ಷಣಾ ಪಡೆಗಳನ್ನು ಎದುರಿಸಿ ತಮ್ಮ ಜೀವ ಒತ್ತೆಯಿಟ್ಟು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿಮಾನ ಹಾರಾಟವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ತಡೆದದ್ದು ಮುಂತಾದ ನಾನಾ ಹಂತದ ಪ್ರತಿಭಟನೆಗೆ ಕಾರಣವಾಯ್ತು. ಕಾವೇರಿ ಐತೀರ್ಪಿನ ನಂತರ ತಲಕಾವೇರಿಯಿಂದ ಬೆಂಗಳೂರಿನ ತನಕ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮಾರ್ಗವಾಗಿ ಬೆಂಗಳೂರಿನವರೆಗೆ ನಡೆಸಿದ ಬೃಹತ್ ಜಾಗೃತಿ ಜಾಥಾ ಜನರಲ್ಲಿ ಕೇಂದ್ರ ಸರ್ಕಾರದ ಈ ತೀರ್ಪಿನ ವಿರುದ್ಧ ಜನಮತ ಮೂಡಿಸಲು ನೆರವಾಯಿತು. ನವದೆಹಲಿಯಲ್ಲಿ ರಾಜ್ಯದ ೨೫,೦೦೦ಕ್ಕೂ ಹೆಚ್ಚಿನ ಜನರ ಅತಿ ದೊಡ್ಡ ಜಾಥಾವನ್ನು ನಡೆಸಲಾಯಿತು. ದೆಹಲಿಯ ಇತಿಹಾಸದಲ್ಲೇ ಇಂತಹ ದೊಡ್ದ ಪ್ರಮಾಣದ ಕನ್ನಡಿಗರ ಪ್ರತಿಭಟನೆ ನಡೆದಿರಲಿಲ್ಲ. ಈ ಎಲ್ಲ ಹೋರಾಟಗಳ ಫಲವಾಗಿಯೇ ಕರ್ನಾಟಕ ರಾಜ್ಯ ಸರ್ಕಾರದ ಅರ್ಜಿಯನ್ನು ಅಂದು ಸರ್ವೋಚ್ಛ ನ್ಯಾಯಾಲಯ ಸ್ವೀಕರಿಸಿತು. ಕೇಂದ್ರಸರ್ಕಾರ ಕನ್ನಡಿಗರ ಹಿತಕ್ಕೆ ಮಾರಕವಾದ ಈ ಐತೀರ್ಪನ್ನು ಇದುವರೆವಿಗೂ ತನ್ನ ಗೆಜೆಟಿಯರ್ನಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ.

ಚಿತ್ರಾವತಿ ಆಣೆಕಟ್ಟು ನಿರ್ಮಾಣಕ್ಕೆ ತೊಡಕಾಗಿದ್ದ ಆಂಧ್ರದ ವಿರುದ್ಧ ನಡೆಸಿದ ಹೋರಾಟ

ಕೋಲಾರ ಜಿಲ್ಲೆಯ ಗಡಿ ಪ್ರದೇಶವಾದ ಪೆರಗೋಡಿನ ಕುಡಿಯುವ ನೀರಿನ ಯೋಜನೆಯಾದ ಚಿತ್ರಾವತಿ ಅಣೆಕಟ್ಟೆ ನಿರ್ಮಾಣಕ್ಕೆ ನೆರೆಯ ಆಂಧ್ರ ತೊಡಕುಂಟು ಮಾಡಿದಾಗ ಬೆಂಗಳೂರಿನಿಂದ ಪಾದಯಾತ್ರೆ ನಡೆಸಿ ಭಾಗ್ಯನಗರಿ(ಬಾಗೇಪಲ್ಲಿ)ಯಲ್ಲಿ ದೊಡ್ಡ ಜಾಥಾ ನಡೆಸಿ ಅಣೆಕಟ್ಟೆ ನಿರ್ಮಾಣಕ್ಕೆ ಕರಸೇವೆ ಮಾಡಲಾಯಿತು. ಪೆರಿಟಾಲ ರವಿ ಎನ್ನುವ ಆಂಧ್ರದ ಗೂಂಡಾ ರಾಜಕಾರಣಿಯ ಬಾಂಬ್ ಬೆದರಿಕೆಗೆ, ಕೊಲೆ ಬೆದರಿಕೆಗೆ ಬಗ್ಗದೆ ಚಿತ್ರಾವತಿ ಅಣೆಕಟ್ಟೆಗೆ ಕರಸೇವೆ ನಡೆಸಲಾಯಿತು. ಇದೀಗ ಆ ಭಾಗದ ಜನತೆಯ ಕುಡಿವ ನೀರಿನ ಬವಣೆ ತಕ್ಕಮಟ್ಟಿಗೆ ಪರಿಹಾರವಾಗಿದೆ

ಮಹದಾಯಿ ನದಿಯ ಕಳಸ-ಭಂಡೂರಾ ಯೋಜನೆಗೆ ಅಡ್ಡಿಪಡಿಸಿದ ಗೋವಾದ ವಿರುದ್ಧ ಹೋರಾಟ

ಹುಬ್ಬಳ್ಳಿ, ಧಾರವಾಡ, ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಅತ್ಯಂತ ಅಗತ್ಯವಾಗಿರುವ ಕಳಸ - ಭಂಡೂರ ಯೋಜನೆ ನಾನಾ ಕಾರಣಗಳಿಂದ ವಿಳಂಬವಾಗುತ್ತಿರುವುದಷ್ಟೇ ಅಲ್ಲದೆ ಮತ ಬ್ಯಾಂಕಿನ ರಾಜಕಾರಣಕ್ಕೆ, ನೆರೆ ರಾಜ್ಯಗಳ ಕುಟಿಲತೆಗೆ ಬಲಿಯಾಗುವ ಭೀತಿ ಎದುರಿಸುತ್ತಿದೆ. ನಮ್ಮ ನಾಡಿನ ಖಾನಾಪುರದಲ್ಲಿ ಹುಟ್ಟುವ ಮಹದಾಯಿ ನದಿಯಲ್ಲಿ ಕರ್ನಾಟಕದ ಪಾಲಿನ ೪೫ ಟಿ‌ಎಂಸಿ ನೀರಿನ ಬಳಕೆಯ ಹಕ್ಕನ್ನು ಬಳಸಿ ಕಳಸ ಭಂಡೂರ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ರೀತ್ಯ ೭.೫೬ ಟಿ‌ಎಂಸಿಯಷ್ಟು ನೀರನ್ನು ಮಲಪ್ರಭಾ ನದಿಗೆ ಸೇರಿಸಲಾಗುತ್ತದೆ. ಈ ಮೂಲಕ ಈಗಾಗಲೆ ಸೊರಗಿರುವ ಮಲಪ್ರಭಾ ನದಿಗೆ ಮತ್ತೆ ಚೈತನ್ಯ ತುಂಬಲಿದ್ದು ಹುಬ್ಬಳ್ಳಿ, ಧಾರವಾಡ ಮೊದಲಾದ ನಗರಗಳಲ್ಲಿ ಬಿಗಡಾಯಿಸಿರುವ ಕುಡಿವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ನಮ್ಮ ಪಾಲಿಗೆ ಜೀವದಾಯಿನಿಯಾದ ಈ ಯೋಜನೆಗೆ ಮೊದಲು ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ನಂತರ ವಾಪಸ್ ಪಡೆದು ದ್ರೋಹ ಮಾಡಿದೆ. ನೆರೆಯ ಗೋವಾ ರಾಜ್ಯವು ಈ ವಿಷಯದಲ್ಲಿ ತಕರಾರು ಎತ್ತಿ ಯೋಜನೆಗೆ ಅಡ್ಡಿ ಮಾಡುತ್ತಿದೆ. ಗಡಿ ವಿಷಯದಲ್ಲಿ ಸೋತಿರುವ ಮಹಾರಾಷ್ಟ್ರ ರಾಜ್ಯವು, ಈ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಿ ಗೋವಾದ ಬೆಂಬಲಕ್ಕೆ ನಿಂತಿದೆ. ಗೋವಾ ರಾಜ್ಯದ ಜೀವನದಿಯಾದ ಮಹದಾಯಿ(ಮಾಂಡೋವಿ) ಬತ್ತಿಹೋಗುತ್ತದೆ, ಅರಣ್ಯ ಸಂಪತ್ತು, ಜೀವ ಸಂಕುಲ ನಾಶವಾಗುತ್ತದೆ, ಕರ್ನಾಟಕ ರಾಜ್ಯವು ಕುಡಿಯುವ ನೀರಿನ ನೆಪದಲ್ಲಿ ನೀರಾವರಿ ಯೋಜನೆ ಮಾಡುತ್ತಿದೆ ಎಂದು ಸುಳ್ಳು ಆಪಾದನೆ ಮಾಡುತ್ತಾ ಪರಿಸರವಾದದ ಮುಖವಾಡ ತೊಟ್ಟು, ಜನಾಂದೋಲನಗಳನ್ನು ಹುಟ್ಟು ಹಾಕಿ, ನೆರೆಯ ಗೋವಾದ ಜನರನ್ನು ಕನ್ನಡಿಗರ ವಿರುದ್ಧ ತಪ್ಪು ಮಾಹಿತಿ ನೀಡಿ ಎತ್ತಿ ಕಟ್ಟುತ್ತಾ, ನಮ್ಮ ಹಕ್ಕನ್ನು ನಿರಾಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಸಮರ ಹೂಡಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು, ಜೂನ್ ೨೨ ೨೦೦೭ ರಂದು ಹುಬ್ಬಳ್ಳಿ ಜನರಲ್ಲಿ ಜಾಗೃತಿ ಮೂಡಿಸಲು ಬೃಹತ್ ಜಾಗೃತ ಜಾಥವನ್ನು ಹಮ್ಮಿಕೊಂಡಿತ್ತು. ಹುಬ್ಬಳ್ಳಿ ಮತ್ತು ಧಾರವಾಡದ ಜೊತೆಗೆ ತಮ್ಮ ಹೋರಾಟದ ನಿಲುವನ್ನು ತೋರಲು, ಬೆಳಗಾವಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಂದ ಜನ ಸಾಗರ ಹರಿದು ಬಂದಿತ್ತು. ಮಧ್ಯಾಹ್ನ ೩ ಘಂಟೆಗೆ, ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ೫೦೦೦ ಸಾವಿರ ಜನರನ್ನೊಳೊಗಂಡ ಜಾಥಕ್ಕೆ ಚಾಲನೆ ಸಿಕ್ಕಿತು. ಈ ಜಾಥವು ಮಳೆಯಲ್ಲಿಯೂ ಸಹ ಕಳಸ ಬಂಡೂರಿ ನಾಲೆಯ ಪರ ಘೋಷಣೆ ಕೂಗುತ್ತ ಹೋರಾಟ ನಡೆಸಲಾಯಿತು.

ಕೃಷ್ಣಾ ನದಿ ನಿರು ಹಂಚಿಕೆ ವಿಷಯವಾಗಿ ನಡೆಸಿದ ಹೋರಾಟಗಳು

ಕೃಷ್ಣಾ ನದಿಗೆ ಕಟ್ಟಲಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು ಹೆಚ್ಚಿಸುವ ಸಲುವಾಗಿ ಬಾಗಲಕೋಟೆಯಲ್ಲಿ ದೊಡ್ಡ ಜಾಥಾ ನಡೆಸಿ ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ನಮಗಗಿದ್ದ ಅನ್ಯಾಯದ ವಿರುದ್ಧ ದನಿಯೆತ್ತುವ ಕೆಲವನ್ನು ಕರವೇ ಮಾಡಿತ್ತು. ಕೊನೆಗೆ ಕೃಷ್ಣಾ ನದಿ ನೀರು ಹಂಚಿಕೆಯ ತೀರ್ಪು ಹೊರಬಿದ್ದಾಗ ಹಲವು ವಿಷಯಗಳಲ್ಲಿ ತೀರ್ಪು ನಮ್ಮ ಪರವಾಗಿದ್ದರೂ, ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕದಂತಾಯಿತು. ರಾಜ್ಯಕ್ಕೆ ದಕ್ಕಬೇಕಾಗಿದ್ದ ಸುಮಾರು 100 ಟಿ.ಎಂ.ಸಿ ನೀರೂ ಆಂಧ್ರಪ್ರದೇಶದ ಪಾಲಾಯಿತು. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ನಮ್ಮ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು, ನಮಗೆ ಸಿಕ್ಕಿರುವುದು ಸಾಕು ಅನ್ನುವ ಧೋರಣೆ ಹೊಂದಿದ್ದರು. ರಾಜ್ಯ ಸರ್ಕಾರದ ಈ ಧೋರಣೆಯನ್ನು ವಿರೋಧಿಸಿದ ನಮ್ಮ ವೇದಿಕೆ, ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ಜನರಲ್ಲಿ ಜಾಗೃತಿ ನಡೆಸಿತು. ಹಲವು ಹೋರಾಟದ ವೇದಿಕೆಗಳಲ್ಲಿ ಇದನ್ನು ಪ್ರಸ್ತಾಪಿಸಿ ನ್ಯಾಯ ಪಡೆಯಲು ಇನ್ನೂ ಹೋರಾಡುತಿದ್ದೇವೆ.
ಹೀಗೆ ಕನ್ನಡ ನಾಡಿನ ಯಾವುದೇ ಮೂಲೆಯಲ್ಲಿನ ನೀರಾವರಿ ಸಮಸ್ಯೆಯಾಗಲೀ ಇಡೀ ನಾಡಿನ ಕನ್ನಡಿಗರು ಒಂದಾಗಿ ಅದಕ್ಕೆ ಸ್ಪಂದಿಸುವಂತೆ ನಾಡಿನ ಕನ್ನಡಿಗರಲ್ಲಿ ಹಿಂದೆಂದೂ ಕಾಣದ ಒಗ್ಗಟ್ಟಿನ ಮಹಾಶಕ್ತಿಯ ಉದಯವಾಗಲು ಕರ್ನಾಟಕ ರಕ್ಷಣಾ ವೇದಿಕೆ ಕಾರಣವಾಯಿತು. ಕರ್ನಾಟಕದಲ್ಲಿ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಇದರಿಂದ ನಾಡಿನ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲಾ, ಹಾಗು ನಮ್ಮ ಸರ್ಕಾರವು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಿರುವ ಹಣ ಬಹಳ ಕಡೆಮೆಯಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ನಾಡಿಗೆ ಬರಬೇಕಾಗಿರುವ ಸವಲತ್ತುಗಳನ್ನು ದೊರಕಿಸಿಕೊಡಲು ನಮ್ಮ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲಾ. ಇವೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸರ್ಕಾರದ ಹಾಗೂ ಜನಪ್ರತಿನಿಧಿಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ ಹಾಗೂ ಈ ಎಲ್ಲಾ ವಿಷಯಗಳಲ್ಲಿ ನ್ಯಾಯ ದೊರಕುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ.
ಮುಂದಿನ ದಿನಗಳಲ್ಲಿ ನದಿ ನೀರು ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಎಲ್ಲ ಅನ್ಯಾಯಗಳ ವಿರುದ್ಧ ನಮ್ಮ ದನಿಯೆತ್ತಿ ಇನ್ನೂ ಹೆಚ್ಚಿನ ಹೋರಾಟಗಳನ್ನು ನಿರಂತರವಾಗಿ ಮುಂದುವರೆಸಲಾಗುವುದು.
ಈ ವಿಚಾರದಲ್ಲಿ ನಾವು ಈವರೆಗೂ ನಡೆಸಿರುವ ಹೋರಾಟಗಳ ಹೆಚ್ಚಿನ ವಿವರಗಳು, ಪತ್ರಿಕಾ ವರದಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ: