Wednesday, December 22, 2010

ರೈಲ್ವೆ ಹುದ್ದೆಗಳಿಗೆ ಕರ್ನಾಟಕದವರನ್ನೇ ನೇಮಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ರೈಲ್ವೆ ಇಲಾಖೆ ಈ ಬಾರಿ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದು ಕಳೆದಬಾರಿ 4701 ಸ್ಥಾನಗಳಿಗೆ ಅರ್ಜಿ ಹಾಕಿದ್ದವರೂ ಮತ್ತೊಮ್ಮೆ ಅರ್ಜಿ ಹಾಕಬಹುದು ಎನ್ನುವ ಮೂಲಕ ಹೊರರಾಜ್ಯದವರನ್ನು ಮತ್ತೊಮ್ಮೆ ಕರ್ನಾಟಕದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಹುನ್ನಾರ ನಡೆಸಿದೆ. ಈ ಹಿಂದೆಯೂ ರೈಲ್ವೆ ಇಲಾಖೆಯು 2007 ರಲ್ಲಿ ಡಿ ಗ್ರೂಪ ಹುದ್ದೆಗಳಿಗೆ ಬಿಹಾರಿಗಳನ್ನು ತುಂಬಲು ಮುಂದಾಗಿತ್ತು. ಆಗ ಅದನ್ನು ಪ್ರತಿಭಟಿಸಿ ಹೋರಾಟ ನಡೆಸಿದ್ದೆವು ಮತ್ತು ಕಳೆದ ೩ ವರ್ಷಗಳಿಂದ ಸತತವಾಗಿ ಈ ಬಗ್ಗೆ ಹೋರಾಟ ನಡೆಸುತ್ತಾ ಬಂದಿದ್ದೇವೆ.

ಇದೇ ಸಂಬಂಧವಾಗಿ ಈ ಬಾರಿ ನಡೆಸುವ ಪರೀಕ್ಷೆಗಳಿಗೆ ಕರ್ನಾಟಕದವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಹೊರ ರಾಜ್ಯದವರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನೆನ್ನೆ ಮತ್ತೊಮ್ಮೆ ಬೆಂಗಳೂರಿನ ನೈರುತ್ಯ ರೈಲ್ವೆ ಕಚೇರಿ ಮುಂಭಾಗ ಹೋರಾಟ ನಡೆಸಿದೆವು.

ಅದೇ ಸಂದರ್ಭದಲ್ಲಿ ಕಳೆದ ವರ್ಷವೇ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ತೀರ್ಮಾನಿಸಿದಂತೆ ಇಲಾಖೆ ನಡೆಸುವ ಪರೀಕ್ಷೆಯನ್ನು ಕನ್ನಡಿಗರು ಕನ್ನಡದಲ್ಲೇ ಬರೆಯುವ ಅವಕಾಶ ಮತ್ತು ಇಡೀ ದೇಶದಲ್ಲಿ ಒಂದೇ ಸಮಯದಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆಯನ್ನು ಮುಂಬರುವ ಪರೀಕ್ಷೆಯಿಂದಲೇ ಜಾರಿಗೆ ತರಬೇಕೆಂದು ಒತ್ತಾಯಿಸಿದೆವು. ಹೋರಾಟದ ಪತ್ರಿಕಾ ವರದಿಗಳನ್ನು ಕೆಳಗೆ ಲಗತ್ತಿಸಿದೆ.




Monday, December 20, 2010

ಫೇಸ್ ಬುಕ್ ನಲ್ಲಿ ಕರವೇ ಅಧ್ಯಕ್ಷರು

ಕಳೆದ ೧೦ ವರ್ಷಗಳಿಂದ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯವಾದ ಸಮಯದಲ್ಲೆಲ್ಲಾ ಹೋರಾಟ ನಡೆಸುತ್ತಾ ಬಂದಿದ್ದೇವೆ. ಕರವೇ ಇಂದು ಕರ್ನಾಟಕದ ಒಂದು ಶಕ್ತಿಯಾಗಿ ಬೆಳೆಯಲು ನಾರಾಯಣಗೌಡರ ನಾಯಕತ್ವ ಪ್ರಮುಖ ಪಾತ್ರವನ್ನು ವಹಿಸಿದೆ.

ಅಂತರ್ಜಾಲದಲ್ಲಿರುವ ಕನ್ನಡಿಗರನ್ನು ತಲುಪಲು ನಾರಾಯಣಗೌಡರು ಫೇಸ್ ಬುಕ್ ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದು, ಇದು ನಾಡಿನ ಪ್ರಮುಖ ವಿಷಯಗಳ ಬಗ್ಗೆ ತಮ್ಮ ನಿಲುವುಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಸಹಾಯಕವಾಗಲಿದೆ.

ಟಿ.ಎ.ನಾರಾಯಣಗೌಡರ ಫೇಸ್ ಬುಕ್ ಖಾತೆ-http://www.facebook.com/profile.php?id=100001680460191

Monday, December 13, 2010

ಭ್ರಷ್ಟಾಚಾರ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ

ನಮ್ಮ ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ಆಡಳಿತ ದುರುಪಯೋಗದಿಂದ ನಾಡಿನೆಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ರಾಜ್ಯದ ಜನತೆ ಇದರಿಂದಾಗಿ ಹಲವು ತೊಂದರೆಗಳಿಗೆ ಒಳಗಾಗಿದ್ದಾರೆ. ಭ್ರಷ್ಟಾಚಾರದ ವಿಷಯವಾಗಿ ಕರ್ನಾಟಕ ಇಂದು ಎಲ್ಲರ ಮುಂದೆ ತಲೆತಗ್ಗಿಸುವ ಸ್ಥಿತಿ ತಲುಪಿದೆ.

ರಾಜ್ಯ ಸರಕಾರಲ್ಲಿ ನಡೆಯುತ್ತಿರುವ ಈ ಆಡಳಿತ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಡಿಸೆಂಬರ್ ೯ ರಂದು ನಾವು ನಾಡಿನ ಇತರ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಿದೆವು.