Monday, April 13, 2009

ಜಾಗೃತ ಕನ್ನಡ ಮತಗಳು ಎಲ್ಲೆಲ್ಲಿ ಎಷ್ಟು?

ಕರ್ನಾಟಕದಲ್ಲಿ, ಜಾಗೃತ ಕನ್ನಡ ಮತಗಳು ಸುಮಾರು ೧೩% ಗಿಂತಲೂ ಹೆಚ್ಚಾಗಿದ್ದು, ಈ ಮತದಾರರಿಗೆ ಕನ್ನಡ-ಕರ್ನಾಟಕ-ಕನ್ನಡಿಗನೆಡೆಗಿನ ಕಾಳಜಿಯೇ ಮತ ಹಾಕಲು ಮಾನದಂಡವಾಗಿದೆ. ಇದರ ಬಗ್ಗೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಸಂದರ್ಶನ ಮತ್ತು ಜಾಗೃತ ಕನ್ನಡ ಮತಗಳ ಸಮೀಕ್ಷೆಯ ಬಗ್ಗೆ ಮಾದ್ಯಮದಲ್ಲಿ ಬಂದ ವರದಿಗಳನ್ನು ಕೆಳಗೆ ನೋಡಿ-


Thursday, April 2, 2009

ನಾಡೊಡೆಯುವ ಮತಬ್ಯಾಂಕ್ ರಾಜಕೀಯಕ್ಕೆ ನಮ್ಮ ವಿರೋಧ

ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾಗುತ್ತಿವೆ. ಇಂತಹ ಸಮಯದಲ್ಲಿ ಜನರ ಮನಸ್ಸನ್ನು ಗೆಲ್ಲುವ ಅನೇಕಾನೇಕ ತಂತ್ರಗಳನ್ನು ರಾಜಕೀಯ ಪಕ್ಷಗಳು ತೋರುವುದು ಸಹಜ. ಆದರೆ ಜನರನ್ನು ಸೆಳೆಯುವ ಈ ತಂತ್ರಗಾರಿಕೆಯಲ್ಲಿ ನಾಡುನುಡಿಯ ಹಿತವನ್ನೇ ಕಡೆಗಣಿಸುವ ರೀತಿಯಲ್ಲಿ ನಡೆದುಕೊಳ್ಳುವ ರಾಜಕೀಯ ಪಕ್ಷಗಳು, ತಾವು ತಲುಪಿರುವ ನೈತಿಕ ಅಧೋಗತಿಗೆ ಸಾಕ್ಷಿಯಾಗುತ್ತಿವೆ. ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾದ ಭಾರತೀಯ ಜನತಾಪಕ್ಷ ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ತನ್ನ ಬಣ್ಣ ಬಯಲುಮಾಡಿಕೊಂಡಿದೆ. ಈ ಬೆಳವಣಿಗೆಗಳು ನಾಡಿನ ಹಿತದೃಷ್ಟಿಯಿಂದ ಮಾರಕವಾದುದಾಗಿದ್ದು ಇದನ್ನು ರಾಜಕೀಯ ಪಕ್ಷಗಳು ಮನಗಾಣದಿರುವುದು ವಿಷಾದನೀಯವಾಗಿದೆ.

ಬೆಳಗಾವಿ ಮತ್ತು ಮರಾಠಿ : ಬೆಳಗಾವಿಯ ನಗರಪಾಲಿಕೆಯ ಹೊಸ ಕಟ್ಟಡದ ಮೇಲೆ - ಮರಾಠಿಗರ ಗುರುತೆಂದು ಎಂ.ಇ.ಎಸ್ ಬಳಸುತ್ತಿರುವ - ಕೇಸರಿ ಧ್ವಜವನ್ನು ಹಾರಿಸಲು ಅಲ್ಲಿನ ಸಂಸದರಾದ ಸುರೇಶ್ ಅಂಗಡಿಯವರು ಶಾಸಕ ಸಂಜಯ್ ಪಾಟೀಲರ ಜೊತೆಗೂಡಿ ಮುಂದಾದ ಘಟನೆ ಇತ್ತೀಚಿಗೆ ನಡೆದಿತ್ತು. ಆ ದಿನ ಅಂಗಡಿಯವರು ಮರಾಠಿ ಭಾಷಿಕ ಮತದಾರರನ್ನು ಮೆಚ್ಚಿಸುವ ಭ್ರಮೆಯಲ್ಲಿ ತಾವೂ ಮರಾಠಿಯಲ್ಲಿ ಭಾಷಣ ಮಾಡಿದ್ದರು. ಆ ಮೆರವಣಿಗೆಯಲ್ಲಿ ಕೆಲಪುಂಡರು ಕನ್ನಡದ ವಿರುದ್ಧ ಘೋಷಣೆ ಮಾಡುತ್ತಿದ್ದರೂ ಸಂಸದರು ಮೌನವಾಗಿದ್ದರು. ಇದು ಮರಾಠಿ ಪ್ರತ್ಯೇಕತೆಯನ್ನು ಎತ್ತಿಹಿಡಿದು ಮತಗಳಿಸಬೇಕೆಂಬ ಕುತಂತ್ರವಲ್ಲವೇ?

ಶಿವಮೊಗ್ಗೆ ಮತ್ತು ತಮಿಳು ಸಮ್ಮೇಳನ : ಕಳೆದ ವಾರ ಕನ್ನಡನಾಡಿನ ಒಳನಾಡಾದ ಶಿವಮೊಗ್ಗೆಯಲ್ಲಿ ತಮಿಳು ಭಾಷಿಕರ ಸಮ್ಮೇಳನವೊಂದು ನಡೆಯಿತು. ಇದರ ಹಿಂದೆಯೂ ಅಲ್ಲಿನ ಭಾಜಪ ಸಚಿವರಾದ ಈಶ್ವರಪ್ಪನವರ ಬೆಂಬಲವಿದ್ದುದು ಎದ್ದು ಕಾಣುತ್ತಿತ್ತು. ಸಚಿವರು ತಮಿಳು ಭಾಷಿಕರನ್ನು ಓಲೈಸಿ ಭಾಷಣ ಮಾಡಿದ್ದೂ ಆಯಿತು. ಶ್ರೀಯುತರು ತಮಿಳು ಜನರನ್ನು ಮತಬ್ಯಾಂಕ್ ಎಂಬಂತೆ ನಡೆಸಿಕೊಂಡರು.

ತೆಲುಗು ಸಮ್ಮೇಳನ ಮತ್ತು ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ರಾಜ್ಯಸಂಪುಟದ ಸಚಿವರೊಬ್ಬರ ಮುಂದಾಳತ್ವದಲ್ಲಿ ತೆಲುಗು ಸಮ್ಮೇಳನವನ್ನೂ ನಡೆಸಲಾಯಿತು. ಪ್ರತಿಭಟಿಸಲು ಮುಂದಾದ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆದ ಘಟನೆಯೂ ನಡೆಯಿತು.

ನಾಡಿನಲ್ಲಿ ಕನ್ನಡಿಗರ ಜೊತೆ ನಾನಾ ಭಾಷೆಗಳ ಜನರು ಬದುಕುತ್ತಿದ್ದಾರೆ. ತಲೆಮಾರುಗಳಿಂದ ಇಲ್ಲೇ ಬದುಕುತ್ತಾ ಕನ್ನಡಿಗರೇ ಆಗಿ ಹೋಗಿರುವ ಅವರನ್ನು ನೀನು ತಮಿಳ, ನೀನು ತೆಲುಗ, ನೀನು ಮರಾಠಿ ಎನ್ನುತ್ತಾ ಮುಖ್ಯವಾಹಿನಿಯಿಂದ ದೂರಮಾಡುತ್ತಿರುವ ರಾಜಕೀಯ ಪಕ್ಷಗಳ ನಡವಳಿಕೆ ಸಮಾಜವನ್ನು ಒಡೆಯುವ ಹೀನ ಕೃತ್ಯವಾಗಿದೆ. ಹೀಗೆ ಕನ್ನಡ ನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಮತಗಳಿಕೆಗಾಗಿ ನಾಡೊಡೆಯಲು ಮುಂದಾಗುವುದನ್ನು ಜನತೆ ಗಮನಿಸಬೇಕಾಗಿದೆ. ಕರ್ನಾಟಕ ರಕ್ಷನಾ ವೇದಿಕೆಯು ರಾಜಕೀಯ ಪಕ್ಷಗಳ ಇಂತಹ ಎಲ್ಲಾ ಕ್ರಮಗಳನ್ನೂ ಖಂಡತುಂಡವಾಗಿ ವಿರೋಧಿಸುತ್ತದೆ. ಇಂತಹ ನಾಡವಿರೋಧಿ ನಡವಳಿಕೆ ತೋರಿಸಲು ಮುಂದಾಗುವ ಯಾವುದೇ ರಾಜಕೀಯ ಪಕ್ಷಗಳನ್ನು ಖಂಡಿಸುತ್ತೇವೆ. ಕನ್ನಡಿಗರ ಪ್ರತಿಭಟನೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಇಂತಹ ನಾಡೊಡೆಯುವ ಚಟುವಟಿಕೆಗಳನ್ನು ಮುಂದುವರೆಸುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗ ಮತದಾರ ತಕ್ಕಪಾಠವನ್ನು ಕಲಿಸುತ್ತಾನೆ.






ಶಿವಮೊಗ್ಗದಲ್ಲಿ ತಮಿಳರ ಸಮಾವೇಶ- ಯಡಿಯೂರಪ್ಪರವರು ಕನ್ನಡಿಗರ ಕ್ಷಮೆ ಯಾಚಿಸಲಿ

ಮತ ಬ್ಯಾಂಕ್ ನ ಆಸೆಗಾಗಿ ತಮಿಳು ಸಮಾವೇಶವನ್ನು ನಡೆಸಲು ಮುಂದಾಗಿರುವ ಯಡಿಯೂರಪ್ಪರವರು ಕನ್ನಡಿಗರ ಕ್ಷಮೆ ಯಾಚಿಸಬೇಕೆಂದು ನಾರಾಯಣಗೌಡರು ಆಗ್ರಹಿಸಿದ್ದಾರೆ.